DGP Notification on Police conduct- ಠಾಣೆಯಲ್ಲಿ ವೈಯಕ್ತಿಕ ಸಮಾರಂಭ ನಿಷಿದ್ಧ, ಖಾಕಿ ಧರಿಸಿ ಅನಗತ್ಯ ಹಾಜರಿ ಸಲ್ಲ: ಡಿಜಿಪಿ ಆದೇಶ
ಠಾಣೆಯಲ್ಲಿ ಪೊಲೀಸರು ತಮ್ಮ ವೈಯಕ್ತಿಕ ಸಮಾರಂಭಗಳನ್ನು ನಡೆಸುವಂತಿಲ್ಲ. ಅದೇ ರೀತಿ, ಖಾಕಿ ಧರಿಸಿ ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತಿಲ್ಲ. ಈ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಅಪರಾಧಗಳ ತಡೆ, ಅಪರಾಧ ಪ್ರಕರಣಗಳ ತನಿಖೆ, ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ್ ಇಲಾಖೆ ದೇಶದ ಅತ್ಯಂತ ಶಿಸ್ತಿನ ಇಲಾಖೆಯಾಗಿದೆ. ಸಮವಸ್ತ್ರದಲ್ಲಿ ಪೊಲೀಸ್ ಅಧಿಕಾರಿಗಳ ನಡವಳಿಕೆ ಮತ್ತು ಅವರ ವರ್ತನೆ ಇಡೀ ಪೊಲೀಸ್ ಇಲಾಖೆಯನ್ನು ಪ್ರತಿನಿಧಿಸುತ್ತದೆ. ಇದನ್ನು ಪೊಲೀಸ್ ಅಧಿಕಾರಿಗಳು ಸದಾ ಅರಿಯುವುದು ಸೂಕ್ತ ಎಂದು ಆದೇಶ ತಿಳಿಸಿದೆ.
ಸಮಾಜ ವಿರೋಧಿ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಅಕ್ರಮ/ ಸಮಾಜಘಾತುಕ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಿ ಸಮಾಜದಲ್ಲಿ ಶಾಂತಿ ಸ್ಥಾಪನೆಯ ಹೊಣೆಗಾರಿಕೆ ಮತ್ತು ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಮ ಸ್ಥಳಗಳಲ್ಲಿ ಹಾಗೂ ತಮ್ಮ ಕಚೇರಿಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅವಶ್ಯಕ ಎಂದು ಆದೇಶ ಹೇಳಿದೆ.
ಠಾಣೆಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಇನ್ನಿತರೆ ಖಾಸಗಿ ಆಚರಿಸುವಂತಿಲ್ಲ, ಸಾರ್ವಜನಿಕರ ಹೆಸರಿನಲ್ಲಿ ಅಪರಾಧ ಹಿನ್ನೆಲೆಯುಳ್ಳ ಸಮಾಜ ಘಾತುಕ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ, ಖಾಸಗಿ ಕಾರ್ಯಕ್ರಮಗಳಲ್ಲಿ ಸಮವಸ್ತ್ರ ಧರಿಸಿ ಭಾಗವಹಿಸುವುದಾಗಲಿ, ಸಮಾಜಘಾತುಕ ಶಕ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಅಥವ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಪೊಲೀಸ್ ಮಹಾನಿರೀಕ್ಷಕರು ಆದೇಶವನ್ನು ಹೊರಡಿಸಿದ್ದಾರೆ.