CBI, IBನಿಂದ ನ್ಯಾಯಾಂಗಕ್ಕೆ ಸಹಾಯವಿಲ್ಲ- ತನಿಖಾ ಸಂಸ್ಥೆಗಳ ವಿರುದ್ಧ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಕಟು ನುಡಿ
ಕೇಂದ್ರೀಯ ತನಿಖಾ ತಂಡ(ಸಿಬಿಐ) ಮತ್ತು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ವಿರುದ್ಧ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎನ್.ವಿ. ರಮಣ ಗುಡುಗಿದ್ದಾರೆ. ನ್ಯಾಯಾಂಗಕ್ಕೆ ಈ ಎರಡು ಸಂಸ್ಥೆಗಳ ಕೊಡುಗೆ ಏನೇನೂ ಇಲ್ಲ ಎಂಬುದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ ಎಂದು ಕಟು ಶಬ್ದಗಳಿಂದ ತಿವಿದಿದ್ದಾರೆ.
ನ್ಯಾಯಾಧೀಶರು ಈ ಸಂಸ್ಥೆಗಳ ಮುಂದೆ ದೂರನ್ನು ಮುಂದಿಟ್ಟಾಗ ನ್ಯಾಯಾಂಗಕ್ಕೆ ಈ ಸಂಸ್ಥೆಗಳು ಯಾವುದೇ ಸಹಾಯ-ಸಹಕಾರವನ್ನು ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಗ್ಯಾಂಗ್‌ಸ್ಟರ್‌ಗಳು, ಗಣ್ಯವ್ಯಕ್ತಿಗಳು ಒಳಗೊಂಡಂತಹ ಹೈಪ್ರೊಫೈಲ್ ಪ್ರಕರಣಗಳ ವಿಚಾರಣೆಯ ಎಷ್ಟೋ ಸಂದರ್ಭಗಳಲ್ಲಿ ನ್ಯಾಯಾಧೀಶರುಗಳು ಮಾನಸಿಕ ಕಿರುಕುಳ, ಬೆದರಿಕೆಗಳನ್ನು ಎದುರಿಸುತ್ತಾರೆ. ಆಗ ಸಿಬಿಐ ಅಥವಾ ಪೊಲೀಸರಿಗೆ ದೂರು ಸಲ್ಲಿಸಿದರೆ ಯಾವುದೇ ಪ್ರಯೋಜನ ಇರುವುದಿಲ್ಲ ಎಂದು ಅವರು ವಿಷಾದದಿಂದ ಹೇಳಿದ್ದಾರೆ.
ಈ ವಾದವನ್ನು ಸಮರ್ಥಿಸಿಕೊಂಡ ಅಟಾರ್ನಿ ಜನಲರ್ ಕೆ.ಕೆ. ವೇಣುಗೋಪಾಲ್, ನ್ಯಾಯಾಧೀಶರಿಗೆ ಸೂಕ್ತ ಭದ್ರತೆ ಬೇಕು. ಹಲ್ಲೆಗೆ ಒಳಗಾದ ನ್ಯಾಯಾಧೀಶರ ಪಟ್ಟಿ ನನ್ನಲ್ಲಿದೆ. ಆಪತ್ತಿಗೊಳಗಾದ ಸಂದರ್ಭಗಳಲ್ಲಿ ಕಟುವಾದ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಧನ್‌ಬಾದ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉತ್ತಮ್ ಆನಂದ್ ಬೆಳಿಗ್ಗೆ ವಾಕಿಂಗ್‌ಗೆ ಹೋಗಿದ್ದಾಗ ವಾಹನವನ್ನು ಅವರ ಮೇಲೆ ಚಲಾಯಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ರಮಣ ಅವರು ಭಾವೋದ್ರೇಕಕ್ಕೊಳಗಾಗಿ ಈ ಮಾತನ್ನಾಡಿದ್ದರು.
ಆರಂಭದಲ್ಲಿ, ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲಿಸಿದ್ದ ಪೊಲೀಸರು, ಸಿಸಿಟಿವಿ ದೃಶ್ಯ ವೈರಲ್ ಆದ ಬಳಿಕ ಹತ್ಯೆ ಪ್ರಕರಣ ಎಂದು ಬದಲಿಸಿಕೊಂಡಿದ್ದರು. ಈ ಬಗ್ಗೆ ಒಂದು ವಾರದೊಳಗಾಗಿ ಪ್ರಕರಣದ ತನಿಖೆಯ ಕುರಿತ ವರದಿಯನ್ನು ಸಲ್ಲಿಸುವಂತೆ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.