Karnataka Police Circular- ತನಿಖೆ ವೇಳೆ ಲೋಪ ಎಸಗಿದರೆ ಶಿಕ್ಷೆ: ಪೊಲೀಸ್ ಇಲಾಖೆ ಮಹತ್ವದ ಸುತ್ತೋಲೆ
ತನಿಖೆ ವೇಳೆ ಲೋಪ ಎಸಗಿದರೆ ಶಿಕ್ಷೆ: ಪೊಲೀಸ್ ಇಲಾಖೆ ಮಹತ್ವದ ಸುತ್ತೋಲೆ
ಇನ್ನು ಮುಂದೆ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ತಪ್ಪು ಎಸಗಿದರೆ, ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಗ್ಯಾರಂಟಿ. ಈ ಬಗ್ಗೆ ಪೊಲೀಸ್ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಪೊಲೀಸ್ ತನಿಖೆಯಲ್ಲಿ ಲೋಪ ಕಂಡುಬರುತ್ತಿದೆ. ಇದು ನ್ಯಾಯಾಲಯದ ವಿಚಾರಣೆ ನಡೆದು ತೀರ್ಪು ಬರುವಾಗ ತನಿಖೆಯ ಲೋಪ-ದೋಷ ಉಲ್ಲೇಖವಾಗುತ್ತಿವೆ. ಆರೋಪಿಗಳ ಅನುಕೂಲಕ್ಕೆ ತನಿಖಾಧಿಕಾರಿಗಳು ಲೋಪ ಎಸಗಿ ಮಾಡಿಕೊಳ್ಳುತ್ತಿರುವ ಅಂಶ ಎದ್ದುಕಾಣುತ್ತಿದೆ.
ಇಂತಹ ಕರ್ತವ್ಯ ಲೋಪ ಸಹಿಸಿಕೊಳ್ಳಲು ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಆರೋಪಿಗಳು ನ್ಯಾಯಾಲಯದಿಂದ ಖುಲಾಸೆ ಆಗುವ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮಕ್ಕೆ ಈ ಸಮಿತಿ ಶಿಫಾರಸು ಮಾಡಿದೆ.
ಅಲ್ಲದೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನೂ ನೀಡಿದೆ. ಈ ಗೈಡ್ ಲೈನ್ಸ್ ಪ್ರಕಾರ, ತಪ್ಪಿತಸ್ಥ ಅಧಿಕಾರಿ ವಿರುದ್ಧ ಎಸ್‌ಪಿ ಅಥವಾ ತತ್ಸಮಾನ ಅಧಿಕಾರಿ ಸ್ವಯಂಪ್ರೇರಿತ ಶಿಸ್ತು ಕ್ರಮದ ಪ್ರಕ್ರಿಯೆ ಆರಂಭಿಸಬಹುದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಘಟಕಾಧಿಕಾರಿಗಳು ಮತ್ತು ಶಿಸ್ತು ಪ್ರಾಧಿಕಾರಗಳು ಈಗಾಗಲೇ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದರೆ ಅಥವಾ ಇಲಾಖಾ ವಿಚಾರಣೆಯ ಅಂತಿಮ ವರದಿ ಸಲ್ಲಿಸಿದ್ದರೆ ಅಂತಹ ಪ್ರಕರಣಗಳ ಪಟ್ಟಿ ಮಾಡಿ ದಾಖಲೆಯೊಂದಿಗೆ ಪೊಲೀಸ್ ಇಲಾಖೆಯ ಪ್ರಧಾನ ಕಚೇರಿಗೆ ಕಳುಹಿಸುವಂತೆ ಸೂಚಿಸಲಾಗಿದೆ.