Shiruru Swamiji Controversy- ಅಪ್ರಾಪ್ತರು ಮಠಾಧಿಪತಿ ಆಗಬಹುದೇ..?: ಗಂಭೀರ ಕಾನೂನು ಚರ್ಚೆ ಅಗತ್ಯವಿದೆ ಎಂದ ಕರ್ನಾಟಕ ಹೈಕೋರ್ಟ್
ಅಪ್ರಾಪ್ತರು ಮಠಾಧಿಪತಿ ಆಗಬಹುದೇ..?: ಗಂಭೀರ ಕಾನೂನು ಚರ್ಚೆ ಅಗತ್ಯವಿದೆ ಎಂದ ಕರ್ನಾಟಕ ಹೈಕೋರ್ಟ್
ಅಪ್ರಾಪ್ತರು ಸನ್ಯಾಸತ್ವ ಸ್ವೀಕರಿಸಿ ಮಠಾಧಿಪತಿ ಆಗಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಬಗ್ಗೆ ಗಂಭೀರ ಕಾನೂನು ಚರ್ಚೆ ಆಗಬೇಕಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಪೀಠಾಧಿಪತಿ ಆಯ್ಕೆ/ನೇಮಕವನ್ನು ಪ್ರಶ್ನಿಸಿ ಮಠದ ಭಕ್ತ ಸಮಿತಿ ಕಾರ್ಯದರ್ಶಿ ಲಾತವ್ಯ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪ್ರಾಪ್ತರು ಸನ್ಯಾಸ ಸ್ವೀಕರಿಸಿದರೆ ಆಗುವ ಪರಿಣಾಮಗಳು, ಇದರ ಕುರಿತ ಕಾನೂನಿನ ಅಂಶಗಳು ಪರಿಶೀಲಿಸಬೇಕಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ, ಸೋದೆ ವಾದಿರಾಜ ಮಠ ಹಾಗೂ ಅದರ ಮಠಾಧಿಪತಿಗಳಾ ವಿಶ್ವ ವಲ್ಲಭ ತೀರ್ಥರಿಗೆ ಅವಕಾಶ ನೀಡಿ ಸೆಪ್ಟಂಬರ್ 13ಕ್ಕೆ ವಿಚಾರಣೆ ಮುಂದೂಡಿದೆ.
ಶಿರೂರು ಮಠದ ಮಠಾಧಿಪತಿ ನೇಮಕ ವಿಚಾರದಲ್ಲಿ ಸೋದೆ ಮಠ, ಮಠಾಧಿಪತಿ ವಿಶ್ವವಲ್ಲಭ ತೀರ್ಥರು ಮಧ್ಯಪ್ರವೇಶಿಸದಂತೆ ತಡೆಯಬೇಕು, ಶಿರೂರು ಮಠಾಧಿಪತಿಗಳ ನೇಮಕವನ್ನು ಅಕ್ರಮ ಎಂದು ಘೋಷಿಸಬೇಕು, ಪ್ರಸ್ತುತ ಮಠಾಧಿಪತಿಯನ್ನು ವಶಕ್ಕೆ ಪಡೆದು ಸೂಕ್ತ ಶಿಕ್ಷಣ ನೀಡುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.