Conviction of Govt Employees- A useful information- ಸರ್ಕಾರಿ ನೌಕರರಿಗೆ ಕ್ರಿಮಿನಲ್ ಕೇಸ್‌ನಲ್ಲಿ ಶಿಕ್ಷೆಯಾದರೆ... ಏನಾಗುತ್ತೆ ಗೊತ್ತೇ..?
ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟ ಸರಕಾರಿ ನೌಕರನು ಸಕ್ಷಮ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಪಡೆದ ಕಾರಣಕ್ಕಾಗಿ ಸೇವೆಯಲ್ಲಿ ಮುಂದುವರಿಯಲು ಅವಕಾಶವಿದೆಯೇ?
ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟ ವ್ಯಕ್ತಿಗೆ ಸರಕಾರಿ ಸೇವೆಗೆ ಸೇರುವ ಹಕ್ಕು ಇರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಆದರೆ ಸರಕಾರಿ ಸೇವೆಗೆ ಸೇರಿದ ಬಳಿಕ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಪಟ್ಟ ವ್ಯಕ್ತಿಯು ತನ್ನ ಶಿಕ್ಷೆಯ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ದ೦ಡನೆಗೆ ತಡೆಯಾಜ್ಞೆ ಪಡೆದಲ್ಲಿ ಆತನಿಗೆ ಸೇವೆಯಲ್ಲಿ ಮುಂದುವರಿಯಲು ಅವಕಾಶವಿದೆಯೇ ಎಂಬ ವಿಷಯದ ಬಗ್ಗೆ ಸರಕಾರಿ ನೌಕರರಲ್ಲಿ ಗೊಂದಲ ಇದೆ.
ಈ ವಿಷಯದ ಕುರಿತು ಭಾರತದ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಹಾಗೂ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ಸರಕಾರಿ ನೌಕರನು ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಲ್ಲಿ ಆತನಿಗೆ ಸೇವೆಯಲ್ಲಿ ಮುಂದುವರಿಯುವ ಹಕ್ಕು ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೆ ಮೇಲ್ಮನವಿಯಲ್ಲಿ ಆತನು ದೋಷಮುಕ್ತನಾದಲ್ಲಿ ಆತನಿಗೆ ಸಿಗತಕ್ಕ ಎಲ್ಲಾ ಸೇವಾ ಸೌಲಭ್ಯಗಳು; ಬಾಕಿ ವೇತನ ಇತ್ಯಾದಿಗಳನ್ನು ನೀಡಿ ಆತನನ್ನು ಸೇವೆಗೆ ಸೇರಿಸಬೇಕೆಂದು ಅಭಿಪ್ರಾಯಪಟ್ಟಿದೆ. ಒಂದು ವೇಳೆ ಆತನು ನಿವೃತ್ತನಾದಲ್ಲಿ ಆತನಿಗೆ ಸಿಗತಕ್ಕ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ನೀಡತಕ್ಕದ್ದೆಂದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಸರಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ನೌಕರರನು ಕೂಡಾ ಸ್ವಚ್ಚಂದವಾಗಿ ತನಗೆ ಇಷ್ಟ ಬಂದ ರೀತಿಯಲ್ಲಿ ಜೀವನ ಸಾಗಿಸುವಂತಿಲ್ಲ. ನಡತೆ ನಿಯಮಗಳನ್ವಯ ಆತನಿಗೆ ಹಲವಾರು ನಿರ್ಬಂಧಗಳಿವೆ. ನಡತೆ ನಿಯಮಗಳಲ್ಲಿರುವ ನಿರ್ಬಂಧಗಳನ್ನು ಕಡೆಗಣಿಸಿ ತಮ್ಮ ಇಷ್ಟದಂತೆ ವರ್ತಿಸಿದಲ್ಲಿ ಸರಕಾರಿ ನೌಕರನ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ.
ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ನಾಣ್ನುಡಿಯನ್ನು ಮರೆತು ಐಷಾರಾಮಿ ಶೋಕಿ ಜೀವನದ ಆಕರ್ಷಣೆಗೊಳಗಾಗಿ ಬ್ಯಾಂಕ್; ಫೈನಾನ್ಸ್ ಸಂಸ್ಥೆಗಳಿಂದ ಮಿತಿ ಮೀರಿದ ಸಾಲ ಪಡೆದು ಮರುಪಾವತಿ ಮಾಡಲು ಸಾಧ್ಯವಾಗದೆ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಆರೋಪಿಗಳಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟ ಹಲವಾರು ಸರಕಾರಿ ನೌಕರರು ನಮ್ಮ ನಡುವೆ ಇದ್ದಾರೆ. ಲಂಚದ ಆಮಿಷಕ್ಕೆ ಒಳಗಾಗಿ ಲೋಕಾಯುಕ್ತ/ ಭ್ರಷ್ಟಾಚಾರ ನಿಗ್ರಹ ದಳದವರು ಬೀಸಿದ ಬಲೆಗೆ ಬಿದ್ದು ಆರೋಪಿಯಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದವರು ಇದ್ದಾರೆ. ತಮ್ಮ ಘೋಷಿತ ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ ಕಾರಣಕ್ಕಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಆರೋಪಿಯಾಗಿ ಶಿಕ್ಷೆಗೊಳಪಟ್ಟವರು ಇದ್ದಾರೆ.ವರದಕ್ಷಿಣೆ ನಿಷೇಧ ಕಾಯ್ದೆಯಡಿ ಅಥವಾ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೆಸಗಿದ ಕಾರಣಕ್ಕಾಗಿ ಆರೋಪಿಯಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟ ಹಲವಾರು ಸರಕಾರಿ ನೌಕರರು ಇದ್ದಾರೆ.
ಈ ರೀತಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟ ನೌಕರರು ಶಿಕ್ಷೆಯ ಕುರಿತು ನೇಮಕಾತಿ ಪ್ರಾಧಿಕಾರಕ್ಕೆ ಯಾವುದೇ ಮಾಹಿತಿ ನೀಡದೆ ಸೇವೆಯಲ್ಲಿ ಮುಂದುವರಿಯುತ್ತಿರುವ ಹಲವಾರು ನಿದಶ೯ನಗಳು ಇವೆ.
ಸಾಮಾನ್ಯವಾಗಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ ಒಂದು ವರ್ಷದ ಅವಧಿಯಾಗಿದೆ. ಶಿಕ್ಷೆ ನೀಡಿದ ನ್ಯಾಯಾಲಯವು ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವ ಅವಕಾಶವಿದೆ. ಇಂತಹ ಸಂದರ್ಭದಲ್ಲಿ ನೇಮಕಾತಿ ಪ್ರಾಧಿಕಾರಕ್ಕೆ ಆತನ ಶಿಕ್ಷೆಯ ಕುರಿತು ಯಾವುದೇ ಮಾಹಿತಿ ದೊರಕುವುದಿಲ್ಲ. ಆದರೆ 3 ವರ್ಷಗಳಿಗೂ ಅಧಿಕ ಕಾಲ ಶಿಕ್ಷೆ ನೀಡಿದ ಪ್ರಕರಣಗಳಲ್ಲಿ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವ ಅಧಿಕಾರ ಶಿಕ್ಷೆ ವಿಧಿಸಿದ ನ್ಯಾಯಾಲಯಕ್ಕೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರಿ ನೌಕರನ ಶಿಕ್ಷೆಯ ಕುರಿತು ನೇಮಕಾತಿ ಪ್ರಾಧಿಕಾರಕ್ಕೆ ಮಾಹಿತಿ ಸಿಗುತ್ತದೆ.
ಸಾಮಾನ್ಯವಾಗಿ ಶಿಕ್ಷೆಯ ತೀರ್ಪು ಕೈಸೇರಿದ ಕೂಡಲೇ ಶಿಕ್ಷೆಗೊಳಪಟ್ಟ ಸರಕಾರಿ ನೌಕರನು ಸಕ್ಷಮ ಮೇಲ್ಮನವಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತಾನೆ. ಮೇಲ್ಮನವಿ ನ್ಯಾಯಾಲಯವು ಕೆಳನ್ಯಾಯಾಲಯ ವಿಧಿಸಿದ ದಂಡನೆಯನ್ನು ಮಾತ್ರ ಅಮಾನತಿನಲ್ಲಿಟ್ಟು ಆರೋಪಿ ಸರಕಾರಿ ನೌಕರನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಆದೇಶಿಸುತ್ತದೆ. ಆದರೆ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಅಮಾನತು ಗೊಳಿಸುವುದಿಲ್ಲ.
ಮೇಲ್ಮನವಿ ನ್ಯಾಯಾಲಯದ ಆದೇಶದ ಪ್ರತಿಯನ್ನು ನೇಮಕಾತಿ ಪ್ರಾಧಿಕಾರಕ್ಕೆ ನೀಡಿ ಈಗಾಗಲೇ ಕೆಳ ನ್ಯಾಯಾಲಯದ ಆದೇಶವನ್ನು ಮೇಲ್ಮನವಿ ನ್ಯಾಯಾಲಯವು ಅಮಾನತಿನಲ್ಲಿ ಇಟ್ಟಿರುವುದರಿಂದ ಮೇಲ್ಮನವಿ ಇತ್ಯರ್ಥವಾಗುವವರೆಗೆ ತನ್ನನ್ನು ಸೇವೆಯಲ್ಲಿ ಮುಂದುವರಿಸುವಂತೆ ಶಿಕ್ಷೆಗೊಳಪಟ್ಟ ನೌಕರನು ನೇಮಕಾತಿ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸುತ್ತಾನೆ. ಸದರಿ ಕೋರಿಕೆಯನ್ನು ಪುರಸ್ಕರಿಸಿ ಸದರಿ ಸರಕಾರಿ ನೌಕರರನ್ನು ಸೇವೆಯಲ್ಲಿ ಮುಂದುವರಿಸಲು ನೇಮಕಾತಿ ಪ್ರಾಧಿಕಾರಕ್ಕೆ ಅಧಿಕಾರವಿದೆಯೇ ಎ೦ಬುದನ್ನು ತಿಳಿದುಕೊಳ್ಳೋಣ.
ಭಾರತದ ಸಂವಿಧಾನದ ಅನುಚ್ಛೇದ 311 (2)ರಲ್ಲಿ ಈ ರೀತಿ ತಿಳಿಸಲಾಗಿದೆ. ಸರಕಾರಿ ನೌಕರನ ವಿರುದ್ಧ ದೋಷಾರೋಪಣೆ ಕುರಿತು ಆತನಿಗೆ ಸೂಕ್ತ ತಿಳುವಳಿಕೆ ನೀಡಿ ನಿಯಮಾನುಸಾರ ವಿಚಾರಣೆ ನಡೆಸಿ ಸದರಿ ವಿಚಾರಣೆಯಲ್ಲಿ ಆತನಿಗೆ ತನ್ನ ಪರವಾದ ಅಹವಾಲುಗಳನ್ನು ಮಂಡಿಸಲು ಸೂಕ್ತ ಅವಕಾಶ ನೀಡದೆ ಯಾವೊಬ್ಬ ಸರ್ಕಾರಿ ನೌಕರರನ್ನು ಕೂಡ ಸೇವೆಯಿಂದ ವಜಾಗೊಳಿಸಲು ತೆಗೆದುಹಾಕಲು ಅಥವಾ ಕೆಳ ಹಂತಕ್ಕೆ ಹಿಂಬಡ್ತಿ ನೀಡಲು ಅವಕಾಶವಿಲ್ಲ. ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟ ಸರಕಾರಿ ನೌಕರನಿಗೆ ಮೇಲೆ ಹೇಳಿದ ನಿಯಮಗಳು ಅನ್ವಯಿಸುವುದಿಲ್ಲ ಎಂಬುದಾಗಿ ಅನುಚ್ಛೇದ 311(2) (ಎ) ಯಲ್ಲಿ ತಿಳಿಸಲಾಗಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯವು ಡೆಪ್ಯುಟಿ ಡೈರೆಕ್ಟರ್ ಆಫ್ ಕೊಲಿಜಿಯೆಟ್ ಎಜುಕೇಷನ್ ವಿರುದ್ಧ ಎಸ್ ನಗೂರ್ ಮೀರಾ ಪ್ರಕರಣದಲ್ಲಿ ದಿನಾಂಕ 24.2.1995 ರಂದು ನೀಡಿದ ತೀರ್ಪಿನಲ್ಲಿ ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಒಂದು ವೇಳೆ ಕ್ರಿಮಿನಲ್ ನ್ಯಾಯಾಲಯದಲ್ಲಿ ದಂಡನೆಗೊಳಗಾದ ಸರಕಾರಿ ನೌಕರನು ನ್ಯಾಯಾಲಯವು ತನಗೆ ವಿಧಿಸಿರುವ ದಂಡನೆಯ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಕೆಳಗಿನ್ಯಾಯಾಲಯದ ದಂಡನಾ ಆದೇಶಕ್ಕೆ ತಡೆಯಾಜ್ಞೆ ಪಡೆದುಕೊಂಡಲ್ಲಿ ಅಥವಾ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಆದೇಶ ಪಡೆದುಕೊಂಡಾಗಲಾಗಲೀ ಕರ್ನಾಟಕ ನಾಗರಿಕ ಸೇವಾ ವರ್ಗೀಕರಣ ನಿಯಂತ್ರಣ ಮತ್ತು ಅಪೀಲು ನಿಯಮಗಳು ನಿಯಮ 14 (1) ರ ಅವಕಾಶಗಳನ್ನು ಜಾರಿಗೊಳಿಸಬಹುದಾಗಿದೆ.
ಕರ್ನಾಟಕ ಸರಕಾರದ ಸುತ್ತೋಲೆ ಸಂಖ್ಯೆ: ಸಿಆಸೂಇ 9 ಸೇಇವಿ 95 ದಿನಾಂಕ 26.9.1996 ರ ಪ್ರಕಾರ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟು ಅಪರಾಧಕ್ಕಾಗಿ ದಂಡನೆಗೆ ಗುರಿಯಾದ ಸರಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಮಾರ್ಗಸೂಚಿಯಲ್ಲಿನ ಖಂಡಿಕೆ 1;2;3 ಈ ಕೆಳಕಂಡಂತಿದೆ.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಅಫೀಲು) ನಿಯಮಗಳು 1957 ರ ನಿಯಮ ಅನುಸಾರ ಸದರಿ ನಿಯಮಗಳ ನಿಯಮಗಳು 11;12 ಮತ್ತು 13 ರಲ್ಲಿ ಏನೇ ಹೇಳಲಾಗಿದ್ದರೂ ಕ್ರಿಮಿನಲ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಆರೋಪಕ್ಕಾಗಿ ದೋಷ ಸಿದ್ಧಿಯಾದ ಸರಕಾರಿ ನೌಕರನನ್ನು ಪುನಃ ಇಲಾಖಾ ವಿಚಾರಣೆಗೆ ಒಳಪಡಿಸದೆ ಸೇವೆಯಿಂದ ವಜಾ ಮಾಡುವ ಅಥವಾ ತೆಗೆದುಹಾಕುವ ಕೆಳದರ್ಜೆಗೆ ಇಳಿಸುವ ದಂಡನೆಯನ್ನು ವಿಧಿಸಬಹುದಾಗಿದೆ. ಈ ನಿಯಮದ ಅವಕಾಶವು ಸಂವಿಧಾನದ ಅನುಚ್ಛೇದ 311 (2) ರ ಬೆಂಬಲವನ್ನು ಪಡೆದಿದೆ
ಮಾನ್ಯ ಸರ್ವೋಚ್ಚನ್ಯಾಯಾಲಯವು ಕ್ರಿಮಿನಲ್ ಅಪೀಲ್ ಸಂಖ್ಯೆ 770/2001 ಕೆ.ಸಿ. ಸರಿನ್ ವಿರುದ್ಧ ಸಿಬಿಐ ಚಂಡೀಗರ್ ಈ ಪ್ರಕರಣದಲ್ಲಿ ದಿನಾಂಕ 2.8.2001 ರಂದು ನೀಡಿದ ತೀರ್ಪಿನಲ್ಲಿ ಈ ಕೆಳಗಿನಂತೆ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಭ್ರಷ್ಟಾಚಾರದ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಪಟ್ಟ ಸರಕಾರಿ ನೌಕರನು ಸಕ್ಷಮ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಲ್ಲಿ ಮೇಲ್ಮನವಿ ನ್ಯಾಯಾಲಯವು ಪ್ರಕರಣದಲ್ಲಿ ಆತನನ್ನು ದೋಷಮುಕ್ತಗೊಳಿಸುವ ವರೆಗೆ ಸದರಿ ನೌಕರರನ್ನು ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು. ಒಂದು ವೇಳೆ ಸೇವೆಯಲ್ಲಿ ಮುಂದುವರಿದದ್ದೇ ಆದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆಗಳಿವೆ.
ಸರಕಾರಿ ನೌಕರರ ವಿರುದ್ಧ ನೀಡಲಾದ ಕ್ರಿಮಿನಲ್ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿದ ಮಾತ್ರಕ್ಕೆ ನೇಮಕಾತಿ ಪ್ರಾಧಿಕಾರವು ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೇವಾ ಕಾನೂನಿನಡಿ ಅವಕಾಶವಿಲ್ಲ. ಆದರೆ ಸದರಿ ದೂರಿನನ್ವಯ ಸರಕಾರಿ ನೌಕರನು 48 ಗಂಟೆಗಳಿಗೂ ಅಧಿಕ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಲ್ಲಿ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸತಕ್ಕದ್ದಾಗಿದೆ.
ಶಿಸ್ತು ಪ್ರಾಧಿಕಾರ ಕೈಗೊಳ್ಳುವ ಇಲಾಖಾ ವಿಚಾರಣೆಯು ಅರೆನ್ಯಾಯಿಕ ವಿಚಾರಣೆಯಾಗಿದ್ದು ಕ್ರಿಮಿನಲ್ ಪ್ರಕರಣದ ವಿಚಾರಣೆ ಮತ್ತು ಇಲಾಖಾ ವಿಚಾರಣೆಗಳೆರಡೂ ಸ್ವತಂತ್ರ ವಿಚಾರಣೆಗಳಾಗಿರುತ್ತವೆ. ಸಂದೇಹದ ಲಾಭ ಅಥವಾ ತಾಂತ್ರಿಕ ಕಾರಣಗಳಿಗೋಸ್ಕರ ಕ್ರಿಮಿನಲ್ ಪ್ರಕರಣದಲ್ಲಿ ದೋಷಮುಕ್ತಗೊಂಡ ಸರಕಾರಿ ನೌಕರನನ್ನು ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತಗೊಳಿಸಬೇಕೆ೦ಬ ನಿಯಮವಿಲ್ಲ. ಆದರೆ ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತಗೊಂಡ ಸರಕಾರಿ ನೌಕರನು ಕ್ರಿಮಿನಲ್ ಪ್ರಕರಣದಲ್ಲಿ ದೋಷಿಯೆಂದು ತೀರ್ಮಾನವಾಗಿ ಶಿಕ್ಷೆಗೊಳಪಟ್ಟಲ್ಲಿ ಆತನನ್ನು ಸೇವೆಯಿಂದ ಕೂಡಲೇ ವಜಾ ಮಾಡತಕ್ಕದ್ದಾಗಿದೆ.
Link of the judgement of above mentioned Case: