ESMA | ಪ್ರತಿಭಟನೆಗಳ ಮೇಲೆ ಪ್ರಭುತ್ವದ ಎಸ್ಮಾ ಬ್ರಹ್ಮಾಸ್ತ್ರ!! ಸರ್ಕಾರಿ ನೌಕರರ ಮೇಲೆ ಹೇಗೆ ಪ್ರಭಾವ ಬೀರುತ್ತದೆ..!!?
ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ (Essential Services Maintainance Act- ESMA) ಕೆಲವು ಅಗತ್ಯ ಎನ್ನಲಾದ ಸೇವೆಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಜಾರಿಗೊಳಿಸಲಾದ ಕಾಯ್ದೆ. ದೇಶದ ಸಂಸತ್ತು 1968ರಲ್ಲಿ ಅಂಗೀಕರಿಸಿದ ಈ ಕಾಯ್ದೆ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ದೇಶದೆಲ್ಲೆಡೆ ವ್ಯಾಪ್ತಿ ಹೊಂದಿದೆ.
ಆದರೆ, ಇದನ್ನು ಸರ್ಕಾರಿ ನೌಕರರ ಮೇಲೆ ಅಂಕುಶ ಹಾಕುವ ನಿಟ್ಟಿನಲ್ಲಿ ಈ ಕಾಯಿದೆಯನ್ನು ಬಳಸಲಾಗುತ್ತಿದೆ ಎಂಬುದು ವಿಷಾದನೀಯ. ಕರ್ನಾಟಕದಲ್ಲಿ 1994ರಲ್ಲಿ ಈ ಕಾನೂನನ್ನು ಮೊತ್ತಮೊದಲು ಉಲ್ಲೇಖಿಸಲಾಯಿತು.
2013ರ ಜೂನ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಈ ಕಾನೂನಿನ ಬಳಕೆಗೆ ಸರ್ಕಾರ ಮುಂದಾಯಿತು. 2015ರಲ್ಲಿ ಕೆಲ ತಿದ್ದುಪಡಿಗಳೊಂದಿಗೆ ಸರ್ಕಾರ ಈ ಕಾಯ್ದೆಯನ್ನು ಮತ್ತಷ್ಟು ಹರಿತಗೊಳಿಸಿತು.
ಸಾರ್ವಜನಿಕ ಸಂಚಾರ ವ್ಯವಸ್ಥೆ (ಬಸ್ ಸೇವೆಗಳು), ಆರೋಗ್ಯ ಸೇವೆ (ವೈದ್ಯರು ಹಾಗೂ ಆಸ್ಪತ್ರೆಗಳು), ಹಾಲು, ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಇತರ ಅಗತ್ಯ ಸೇವೆಗಳನ್ನು ಜನರಿಗೆ ದೊರೆಯುವಂತೆ ಖಾತ್ರಿ ಪಡಿಸುವುದು ಈ ಕಾಯ್ದೆಯ ಉದ್ದೇಶ.
ಎಸ್ಮಾ ಎಂಬುದು ಸೆಂಟ್ರಲ್ ಆಕ್ಟ್... ಭಾರತೀಯ ಸಂಸತ್ತು ರೂಪಿಸಿದ ಕಾನೂನು. ಆದರೆ, ಅದನ್ನು ಜಾರಿಗೊಳಿಸುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟದ್ದು. ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವು ಕೇಂದ್ರ ಕಾನೂನು ಮತ್ತು ಅದರ ನಿಬಂಧನೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿರುವ ತನ್ನದೇ ಆದ ಪ್ರತ್ಯೇಕ "ರಾಜ್ಯ ಎಸೆನ್ಷಿಯಲ್ ಸರ್ವೀಸಸ್ ಮ್ಯಾನೇಜ್ಮೆಂಟ್ ಆಕ್ಟ್"ಅನ್ನು ಹೊಂದಿದೆ.
ಎಸ್ಮಾ ಜಾರಿ ಯಾವಾಗ ..?
ಸರಕಾರಿ ಸಿಬ್ಬಂದಿ ಸರ್ಕಾರದ ವಿರುದ್ಧ ಬೀದಿಗೆ ಇಳಿದರೆ, ಸರ್ಕಾರಿ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಜನಜೀವನ ಹದಗೆಟ್ಟು, ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ. ಅಂತಹ ಸನ್ನಿವೇಶದಲ್ಲಿ ಸರ್ಕಾರ ಬ್ರಹ್ಮಾಸ್ತ್ರವಾಗಿ 'ಎಸ್ಮಾ'ವನ್ನು ಜಾರಿ ಮಾಡುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಹೆಚ್ಚಿದೆ ಎಂದು ಸರ್ಕಾರಕ್ಕೆ ಮನವರಿಕೆಯಾದಾಗ, ಸರ್ಕಾರ ಎಸ್ಮಾ ಜಾರಿಗೆ ಮುಂದಾಗುತ್ತದೆ.
ಎಸ್ಮಾ ಜಾರಿಯಾದರೆ, ಅದರ ಪರಿಣಾಮಗಳೇನು..?
ಇನ್ನೊಂದರ್ಥದಲ್ಲಿ, ಎಸ್ಮಾ ಎಂದರೆ 'ಕಡ್ಡಾಯ ಕೆಲಸ'. ಸಂವಿಧಾನದ ಅನುಸೂಚಿ 7ರ IIನೇ ಪಟ್ಟಿಯಲ್ಲಿರುವ 'ಸಾರ್ವಜನಿಕ ಸುವ್ಯವಸ್ಥೆ' (Law and Order) ಮತ್ತು 'ಪೊಲೀಸ್'ಗೆ ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸನ ಸಭೆಯು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ.
ಪ್ರತಿಭಟನೆ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನಕ್ಕೊಳಪಡಿಸಬಹುದು. ಜೊತೆಗೆ, ಆರು ತಿಂಗಳು ಸೆರೆವಾಸದ ಸಾಧ್ಯತೆಯೂ ಇರುತ್ತದೆ.
ಎಸ್ಮಾ ಜಾರಿಯಾದ ನಂತರವೂ ಸರ್ಕಾರಿ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆ ಸಿಬ್ಬಂದಿ ಯಾ ಅಧಿಕಾರಿಯ ವೇತನ, ಭತ್ತೆ, ಬಡ್ತಿ ಹಾಗೂ ಇತರ ಸವಲತ್ತುಗಳ ಮೇಲೆ ಅಡ್ಡಿ ಬರುವಂತೆ ಮಾಡಬಹುದು.
ಮರಿಗೌಡ ಬಾದರದಿನ್ನಿ, ವಕೀಲರು ಪತ್ರಕರ್ತರು, ಕೊಪ್ಪಳ 9902712955