Co-op Society Act- ಸಹಕಾರ ಸಂಘಗಳ 3 ವಾರ್ಷಿಕ ಸಭೆಗಳಲ್ಲಿ ಗೈರುಹಾಜರಾದರೆ ಮತದಾನದ ಹಕ್ಕಿಲ್ಲ: ನಿಯಮ ಎತ್ತಿ ಹಿಡಿದ ಹೈಕೋರ್ಟ್
ಸಹಕಾರ ಸಂಘಗಳ 3 ವಾರ್ಷಿಕ ಸಭೆಗಳಲ್ಲಿ ಗೈರುಹಾಜರಾದರೆ ಮತದಾನದ ಹಕ್ಕಿಲ್ಲ: ನಿಯಮ ಎತ್ತಿ ಹಿಡಿದ ಹೈಕೋರ್ಟ್
ಸಹಕಾರ ಸಂಘಗಳ 5 ವಾರ್ಷಿಕ ಮಹಾಸಭೆಗಳಲ್ಲಿ 3 ಸಭೆಗಳಿಗೆ ಗೈರು ಹಾಜರಾದರೆ ಅಥವಾ ಸತತ ಮೂರು ವರ್ಷ ಕಾಲ ಸಂಘದ ಸೇವೆಯನ್ನು ಬಳಸಿಕೊಳ್ಳದಿದ್ದರೆ ಸದಸ್ಯರು ಸಂಘದ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂಬ ನಿಯಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
'ಸಹಕಾರ ಸಂಘಗಳ ಕಾಯ್ದೆ 1959'ಕ್ಕೆ ತಿದ್ದುಪಡಿ ಮಾಡಿ ಸೆಕ್ಷನ್ 20 (2) (ಎ) ಅನ್ನು ಸೇರ್ಪಡೆ ಮಾಡಿ ಈ ನಿಯಮಗಳನ್ನು ಜಾರಿ ಮಾಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ರಾಜ್ಯದ ವಿವಿಧ ಸಹಕಾರ ಸಂಘಗಳ ಸದಸ್ಯರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ಸರ್ಕಾರದ ತಿದ್ದುಪಡಿ ಕ್ರಮ ಸರಿಯಿದೆ ಎಂದು ಅಭಿಪ್ರಾಯಪಟ್ಟು ಎಲ್ಲ ತಕರಾರು ಅರ್ಜಿಗಳನ್ನು ವಜಾಗೊಳಿಸಿ ಆದೇಶಿದೆ.
ಅಲ್ಲದೇ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಸೆಕ್ಷನ್ 20(ಎ) ಹೇಳುವ ಎರಡೂ ನಿಬಂಧನೆಗಳು 2021ರ ಆಗಸ್ಟ್ 4ರ ನಂತರ ನಡೆಯುವ ಚುನಾವಣೆಗಳಿಗೆ ಅನ್ವಯವಾಗುತ್ತವೆ ಎಂದು ಸ್ಪಷ್ಟಪಡಿಸಿದೆ.
ತಡಕಲ್ ಮಹಿಳಾ ಹಾಲು ಉತ್ಪಾದಕರ ಸಹಕಾರ ಸೊಸೈಟಿ ಲಿಮಿಟೆಡ್ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಈಗಾಗಲೇ ತಿದ್ದುಪಡಿ ಕಾಯ್ದೆಯ ಸೆಕ್ಷನ್ 20 (2) (ಎ) ಎತ್ತಿ ಹಿಡಿಯಲಾಗಿದೆ. ಇದರಲ್ಲಿ ಸದಸ್ಯ ಅಥವಾ ಪ್ರತಿನಿಧಿ ಕನಿಷ್ಠ ಮೂರು ಸಭೆಗಳಲ್ಲಿ ಭಾಗವಹಿಸಿದ್ದರೆ ಮತದಾನದ ಹಕ್ಕು ಉಳಿಯಲಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರ್ಕಾರ ಸಹಕಾರ ಸಂಘಗಳ ಕಾಯ್ದೆಗೆ 2013ರ ಜನವರಿ 13 ರಂದು ತಿದ್ದುಪಡಿ ತಂದು ಸೆಕ್ಷನ್ 20 (2) (ಎ) ಸೇರಿಸಿತ್ತು. ಆ ಪ್ರಕಾರ ಸಂಘದ ಐದು ಮಹಾಸಭೆಗಳಲ್ಲಿ ಮೂರರಲ್ಲಿ ಭಾಗವಹಿಸದಿದ್ದರೆ ಹಾಗೂ ಮೂರು ವರ್ಷ ಸಂಘದ ಸೇವೆ ಬಳಸಿಕೊಳ್ಳದಿದ್ದರೆ ಸಂಘದ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ನಿಯಮ ರೂಪಿಸಿತ್ತು.
ಹೀಗೆ ಕಾಯ್ದೆಗೆ ತಿದ್ದುಪಡಿ ತಂದು ಐದು ವರ್ಷವಾದರೂ 2018ರವರೆಗೆ ಅದನ್ನು ಜಾರಿ ಮಾಡಿರಲಿಲ್ಲ. ಕಾಯ್ದೆ ಜಾರಿಗೆ ತರದಿರುವುದನ್ನು ಗಮನದಲ್ಲಿಟ್ಟುಕೊಂಡು ಸದಸ್ಯರಿಗೆ ಮತದಾನ ಮಾಡಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ಅನುಮತಿ ನೀಡಿತ್ತು.