SC raps UP Bar Council- ವಿಮೆ ವಂಚನೆ- ವಕೀಲರ ವಿರುದ್ಧ ಉ.ಪ್ರ.ಬಾರ್ ಕೌನ್ಸಿಲ್ ನಿಷ್ಕ್ರಿಯ: ಸುಪ್ರೀಂ ಆಕ್ರೋಶ
ವಿಮೆ ವಂಚನೆ- ವಕೀಲರ ವಿರುದ್ಧ ಉ.ಪ್ರ.ಬಾರ್ ಕೌನ್ಸಿಲ್ ನಿಷ್ಕ್ರಿಯ: ಸುಪ್ರೀಂ ಆಕ್ರೋಶ
ಹೊಸದಿಲ್ಲಿ: ವಾಹನ ಅಪಘಾತ ವ್ಯಾಜ್ಯಗಳ ನ್ಯಾಯ ಮಂಡಳಿ ಕಾಯ್ದೆ ಮತ್ತು ಸಿಬ್ಬಂದಿ ಪರಿಹಾರ ಕಾಯ್ದೆಗಳಡಿ ನಕಲಿ ಹಕ್ಕು ಕೋರಿಕೆಗಳನ್ನು ಸಲ್ಲಿಸಿ ವಿಮೆ ಕಂಪನಿಗಳಿಗೆ ಕೋಟ್ಯಂತರ ರೂ.ಗಳ ನಷ್ಟವನ್ನುಂಟು ಮಾಡಿರುವ ವಕೀಲರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದ್ದಕ್ಕಾಗಿ ಉತ್ತರ ಪ್ರದೇಶ ಬಾರ್ ಕೌನ್ಸಿಲ್ ಅನ್ನು ಸರ್ವೋಚ್ಚ ನ್ಯಾಯಾಲಯವು ತೀವ್ರ ತರಾಟೆಗೆತ್ತಿಕೊಂಡಿದೆ.
ವಕೀಲರನ್ನು ಒಳಗೊಂಡಿರುವ ನಕಲಿ ಹಕ್ಕು ಕೋರಿಕೆ ಅರ್ಜಿಗಳ ಸಲ್ಲಿಕೆ ಆರೋಪಗಳ ಇಂತಹ ಗಂಭೀರ ವಿಷಯದಲ್ಲಿ ಹೇಳಿಕೆಗಳನ್ನು ಸಲ್ಲಿಸುವಂತೆ ಉ.ಪ್ರ.ಬಾರ್ ಕೌನ್ಸಿಲ್ ವಕೀಲರಿಗೆ ಸೂಚನೆಗಳನ್ನು ನೀಡದಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಇದು ಕೌನ್ಸಿಲ್‌ನ ಅಸಡ್ಡೆ ಮತ್ತು ಸಂವೇದನಾಹೀನತೆಯನ್ನು ತೋರಿಸುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯ ಪೀಠ, ಈ ಬಗ್ಗೆ ಗಮನಹರಿಸುವಂತೆ ಬಾರ್ ಕೌನ್ಸಿಲ್ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮನನ್ ಕುಮಾರ ಮಿಶ್ರಾ ಅವರಿಗೆ ಸೂಚಿಸಿತು.
ಉ.ಪ್ರ.ಸರಕಾರದ ಪರವಾಗಿ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ 2015,ಅ.7ರ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಲಾಗಿದೆ ಎಂದು ತಿಳಿಸಿರುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು, ತನಿಖೆಗೆ ಸಂಬಂಧಿಸಿದ ಸಮಗ್ರ ವರದಿಯನ್ನು ಮೊಹರ್ ಬಂದ್ ಲಕೋಟೆಯಲ್ಲಿ ನ.15ರಂದು ಅಥವಾ ಅದಕ್ಕೆ ಮೊದಲು ಸಲ್ಲಿಸುವಂತೆ ಸಿಟ್‌ಗೆ ನಿರ್ದೇಶವನ್ನು ನೀಡಿತು.