Bit Coin, a brief information - ಬಿಟ್ ಕಾಯಿನ್ ಎಂದರೇನು..? ಇದನ್ನು ಗಳಿಸುವುದು ಹೇಗೆ..?: ಸಂಪೂರ್ಣ ಮಾಹಿತಿ
ಬಿಟ್ ಕಾಯಿನ್ ಎಂದರೇನು..? ಇದನ್ನು ಗಳಿಸುವುದು ಹೇಗೆ..?: ಸಂಪೂರ್ಣ ಮಾಹಿತಿ
ಕರ್ನಾಟಕ ರಾಜಕೀಯದಲ್ಲಿ ಈಗ ಬಿಟ್ ಕಾಯಿನ್ ಭಾರೀ ಬಿರುಗಾಳಿ ಎಬ್ಬಿಸುತ್ತಿದೆ. 2008ರಿಂದಲೇ ಯೂರೋಪ್‌ನಲ್ಲಿ ಆರಂಭವಾಗಿತ್ತು ಈ ವ್ಯವಹಾರ. ಅಲ್ಲಿಂದ ದಿನೇ ದಿನೇ ಬೆಳೆಯುತ್ತಾ ಇದೀಗ ಶೇ. 80ಕ್ಕೂ ಅಧಿಕ ಜನರನ್ನು ತಲುಪಿದೆ.
ನೂರಾರು ಸಂಖ್ಯೆಯ ವಿನಿಮಯ ಕೇಂದ್ರಗಳು ಹಾಗೂ ವ್ಯವಹಾರ ಸಂಸ್ಥೆಗಳು ಇದರಲ್ಲಿ ಕಾರ್ಯ ನಿರತವಾಗಿವೆ. ಭಾರತೀಯರಿಗೆ ಮಾತ್ರ ಇದರ ಆಕರ್ಷಣೆ ಹೊಸತು. ಹೆಚ್ಚಿನವರಿಗೆ ಬಿಟ್ ಕಾಯಿನ್ ಎಂದರೇನು ಎಂಬುದೇ ತಿಳಿದಿಲ್ಲ.
ಕೆಲ ವರ್ಷಗಳ ಹಿಂದೆ, ಶ್ರೀ ಕೃಷ್ಣ ಎಂಬ ಹ್ಯಾಕರ್‌ನ ಬಂಧನವಾಗಿತ್ತು. ಆತನ ಬಂಧನದ ಸಂದರ್ಭಧಲ್ಲಿ ಆತ ಕ್ರಿಪ್ಟೋ ಕರೆನ್ಸಿ ಸಂಸ್ಥೆಗಳ ಸರ್ವರ್ ಹ್ಯಾಕ್ ಮಾಡುತ್ತಿದ್ದ ಎಂಬ ಮಾಹಿತಿ ಬಯಲಾಗಿತ್ತು. ಆತ ಸುಮಾರು 21 ಬಿಟ್ ಕಾಯಿನ್‌ಗಳನ್ನು ಅಕ್ರಮವಾಗಿ ಹೊಂದಿದ್ದ ಎನ್ನಲಾಗಿತ್ತು.
ಈತನ ಜೊತೆಗೆ ರಾಜ್ಯದ ಕೆಲ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದರು ಎಂಬ ವಿಚಾರವನ್ನು ಆತ ತನ್ನ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ.
'ಕ್ರಿಪ್ಟೋ ಕರೆನ್ಸಿ' - ಅಂದರೆ ಏನು?
ಕರೆನ್ಸಿ ಎಂದರೆ ಎಲ್ಲರಿಗೂ ಗೊತ್ತು. ನಮ್ಮ ದಿನ ನಿತ್ಯದ ಕೊಡು-ಕೊಳ್ಳುವ ವ್ಯವಹಾರಗ ಮಾಡಲು ವಿನಿಮಯ ಮಾಡಿಕೊಳ್ಳುವ, ಸರಕಾರದಿಂದ ಅಧಿಕೃತವಾಗಿ ಮುದ್ರಣ ಮಾಡಲಾಗಿರುವ ನೋಟುಗಳು ಹಾಗೂ ನಾಣ್ಯಗಳು ಕರೆನ್ಸಿ.
ಕ್ರಿಪ್ಟೋ ಕರೆನ್ಸಿ ಎಂದರೆ, ಒಂದು ಕಾಲ್ಪನಿಕ ಡಿಜಿಟಲ್ ಕರೆನ್ಸಿ. ಒಬ್ಬರಿಂದ ಒಬ್ಬರಿಗೆ ನೋಟು ಅಥವಾ ನಾಣ್ಯಗಳಂತೆ ಹಸ್ತಾಂತರ ಮಾಡಲು ಸಾಧ್ಯವಿಲ್ಲದ... ಆದರೆ ಅತ್ಯಾಧುನಿಕ ಗಣಕಯಂತ್ರಗಳು ಹಾಗೂ ಮೊಬೈಲ್ ಫೋನ್‌ಗಳ ಮುಖಾಂತರ ಒಬ್ಬರು ಇನ್ನೊಬ್ಬರೊಂದಿಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಿರುವ ಒಂದು ಡಿಜಿಟಲ್ ರೂಪದ ಕರೆನ್ಸಿ.
ಇಂತಹ ಕ್ರಿಪ್ಟೋ ಕರೆನ್ಸಿಗಳು ಜಗತ್ತಿನಲ್ಲಿ ನೂರಾರು ಸಂಖ್ಯೆಯಲ್ಲಿದೆ. ಇದರಲ್ಲಿ ಬಿಟ್ ಕಾಯಿನ್ ಕೂಡಾ ಒಂದು. ಇತರ ಪ್ರಮುಖ ಕ್ರಿಪ್ಟೋ ಕರೆನ್ಸಿಗಳೆಂದರೆ ಬಿಟ್‌ಕಾಯಿನ್ ಕ್ಯಾಷ್, ಇಥೇರಿಯಮ್, ಲೈಟ್ ಕಾಯಿನ್, ಸ್ಟೆಲ್ಲಾರ್, ರಿಪಲ್, ಡೋಜ್ ಕಾಯಿನ್, ಬಿಎಟಿ (ಬೇಸಿಕ್ ಅಟೆನ್ಷನ್ ಟೋಕನ್), ಕಾರ್ಡಾನೋ, ಬಿನಾನ್ಸ್, ಟ್ರಾನ್, ಮೊನೆರೋ, ಝಿ ಕ್ಯಾಷ್, ವೇವ್ಸ್ ಕಾಯಿನ್, ಹಾಗೂ ಹೊರೈಝನ್ ಮೊದಲಾದವು.
ಇವುಗಳು ಪ್ರಾಥಮಿಕ ಹಂತದಲ್ಲಿ ಬಂದ ಡಿಜಿಟಲ್ ಕರೆನ್ಸಿಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಡಿಫೈ (DEFI-ಡಿಸೆಂಟ್ರಲೈಸ್‌ಡ್ ಫೈನಾನ್ಸ್) ಕರೆನ್ಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಾಲ್ತಿಗೆ ಬರುತ್ತಿದ್ದು ಇವುಗಳ ವ್ಯವಹಾರ ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿದ್ದು ಮಾನವ ನಿಯಂತ್ರಣ ಇರುವುದಿಲ್ಲ. ಹಾಗಾಗಿ ಇವು ಹೆಚ್ಚು ಸುರಕ್ಷಿತ ಎಂದು ನಂಬಲಾಗಿದೆ.
ಕ್ರಿಪ್ಟೋಕರೆನ್ಸಿಗಳ ವ್ಯವಹಾರ ಹೇಗೆ ನಡೆಯುತ್ತದೆ?
ಕ್ರಿಪ್ಟೋಕರೆನ್ಸಿ ಹೊಂದಲು ಅನೇಕ ಮಾರ್ಗಗಳಿವೆ. ಶೇರು ಮಾರುಕಟ್ಟೆಯಲ್ಲಿ ಶೇರು ಖರೀದಿಸುವಂತೆ ಇವುಗಳಿಗೆಂದೇ ಇರುವ 'ಕ್ರಿಪ್ಟೋಕರೆನ್ಸಿ ವಿನಿಮಯ' (ಎಕ್ಸ್‌ಚೇಂಜ್)ಗಳಿಂದ ಖರೀದಿಸಬಹುದು. ಇಲ್ಲವೇ, ಕ್ರಿಪ್ಟೋಕರೆನ್ಸಿ ವ್ಯವಹಾರ ನಡೆಸುವ ಕಂಪನಿಗಳು ತಮ್ಮ-ತಮ್ಮ ಫಾಸೆಟ್‌ಗಳ ಮೂಲಕ ನಿಯಮಿತ ಕಾಲಾವಧಿಗಳಲ್ಲಿ (ಉದಾ: 15 ನಿಮಿಷ, 30 ನಿಮಿಷ, 60 ನಿಮಿಷ, 24 ಗಂಟೆಗಳಲ್ಲಿ ಇತ್ಯಾದಿ) ಅತಿ ಸಣ್ಣ ಪ್ರಮಾಣದಲ್ಲಿ (ನಲ್ಲಿಯಿಂದ ಬೀಳುವ ನೀರ ಹನಿಯಂತೆ...) ಉಚಿತವಾಗಿ ನೀಡುತ್ತವೆ.
ಇದು ಸಿಗುವುದು ವಿರಳ ಹಾಗೂ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳುವುದು. ಇನ್ನೊಂದು ವಿಧಾನ ಎಂದರೆ ಕ್ರಿಪ್ಟೋ ಕರೆನ್ಸಿ ಮೈನಿಂಗ್ (ಯಾಂತ್ರಿಕ ಗಣಿಗಾರಿಕೆ). ಈ ವಿಧಾನದಲ್ಲಿ ಅನೇಕ ಬಗೆಯ ಯೋಜನೆಗಳಿದ್ದು ಅವುಗಳನ್ನು ಪಡೆಯುವ ಮೂಲಕ ದೊಡ್ಡ ಪ್ರಮಾಣದಲ್ಲಿ ಕ್ರಿಪ್ಟೋ ಕರೆನ್ಸಿ ಗಳಿಸಬಹುದು. ಇವೆಲ್ಲವನ್ನೂ ನಿಯಂತ್ರಿಸಲು 'ಬ್ಲಾಕ್‌ಚೈನ್' ಎಂಬ ವ್ಯವಸ್ಥೆ ಇದೆ. ಎಲ್ಲ ವ್ಯವಹಾರಗಳಿಗೆ ಇದರ ಅನುಮೋದನೆ ಬೇಕಾಗುತ್ತದೆ.
ಇಲ್ಲಿ ವ್ಯವಹರಿಸುವವರು ಪ್ರತ್ಯೇಕ ಕಾಯಿನ್ ಗಳಿಗೆ ಬೇರೆ ಬೇರೆ ವಾಲೆಟ್ ಹೊಂದಿರಬೇಕು. ಅದೊಂದು ರೀತಿ ನಮ್ಮ ಹಣದ ಪರ್ಸ್ ಇದ್ದಂತೆ. ಅದಕ್ಕೆ ವ್ಯಾಲೆಟ್ ವಿಳಾಸ ಕೂಡ ಇದೆ. ಪ್ರತಿ ವ್ಯಾಲೆಟ್‌ಗೆ 64 ಸಂಖ್ಯೆಗಳ (ಅಂಕೆಗಳು ಹಾಗೂ ಆಂಗ್ಲ ಅಕ್ಷರಗಳಿಂದ ಕೂಡಿದ) ಅಡ್ರೆಸ್ ನೀಡಲಾಗುತ್ತದೆ.
ಇತರರ ವಾಲೆಟ್‌ಗಳಿಗೆ ಕಾಯಿನ್‌ಗಳನ್ನು ಈ ಮೂಲಕ ನಾವು ವರ್ಗಾಯಿಸಬಹುದು. ಇತರರಿಂದ ಕಾಯಿನ್ ಗಳನ್ನು ಕೂಡ ಪಡೆಯಬಹುದು. ಇದು ಸ್ಥೂಲವಾಗಿ ಕ್ರಿಪ್ಟೋ ಕರೆನ್ಸಿಗಳ ವ್ಯವಹಾರದಲ್ಲಿ ನಡೆಯುವ ಪ್ರಮುಖ ಘಟ್ಟಗಳು.
ಅದಕ್ಕೆ ಮುನ್ನ ಅದರ ಮೌಲ್ಯವನ್ನು ತಿಳಿಯಿರಿ.
ಕೆಲವು ಕಾಯಿನ್‌ಗಳಿಗೆ ಅಪಾರ ಮೌಲ್ಯ ಇರುತ್ತದೆ. ಅಂದರೆ, ಲಕ್ಷಾಂತರ ರೂಪಾಯಿಗಳ ಅಗಾಧ ಮೌಲ್ಯ. ಒಂದು ಬಿಟ್‌ಕಾಯಿನ್ ನ ಇಂದಿನ ಮಾರುಕಟ್ಟೆ ಬೆಲೆ 48,37,813/= ರೂಪಾಯಿಗಳು. ಬಹತೇಕರು ತಮ್ಮ ಜೀವಮಾನ ಇಡೀ ಸಂಪಾದಿಸಲು ಸಾಧ್ಯವಾಗದ ಪ್ರಮಾಣದ ಮೊತ್ತವಿದು. ಹಾಗಾಗಿಯೇ ಬಿಟ್ ಕಾಯಿನ್ ಈಗ ಭಾರೀ ಸದ್ದು ಮಾಡುತ್ತಿದೆ.
ಲೇಖಕರು: ಸಿಂಪ್ಟಿಸಿ, ಮಂಗಳೂರು, (ವಕೀಲರು)