High Court fined Editor for illegal stay in allotted house- ಸರ್ಕಾರಿ ಮನೆಯಲ್ಲಿ 21 ವರ್ಷ ಅಕ್ರಮ ವಾಸ: ಪತ್ರಿಕಾ ಸಂಪಾದಕರಿಗೆ ದಂಡ ವಿಧಿಸಿದ ಹೈಕೋರ್ಟ್
ಸರ್ಕಾರಿ ಮನೆಯಲ್ಲಿ 21 ವರ್ಷ ಅಕ್ರಮ ವಾಸ: ಪತ್ರಿಕಾ ಸಂಪಾದಕರಿಗೆ ದಂಡ ವಿಧಿಸಿದ ಹೈಕೋರ್ಟ್
ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಡದ ಅರ್ಹ ಫಲಾನುಭವಿಗಳಿಗೆ ನಿರ್ಮಿಸಿದ್ದ ಮೈಸೂರು
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ ಮನೆಯಲ್ಲಿ ಯಾವುದೇ ಹಕ್ಕು ಇಲ್ಲದೆ 21 ವರ್ಷಗಳ ಕಾಲ ವಾಸ ಮಾಡಿದ್ದ ಪತ್ರಕರ್ತನಿಗೆ ಹೈಕೋರ್ಟ್ 6 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ತಾನು ವಾಸಿಸುತ್ತಿರುವ ಮನೆಯನ್ನು ಮುಡಾ ತನ್ನ ಹೆಸರಿಗೆ ಮಂಜೂರು ಮಾಡಲು ನಿರಾಕರಿಸಿದೆ. ಜತೆಗೆ ಹರಾಜು ಹಾಕಲು ಮುಂದಾಗಿದೆ ಎಂದು ಮೈಸೂರಿನ ರಾಷ್ಟ್ರಕ್ರಾಂತಿ ಪತ್ರಿಕೆಯ ಸಂಪಾದಕ ಜಿ.ಎಂ ಮಹದೇವ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ಅರ್ಜಿದಾರನಿಗೆ ದಂಡ ವಿಧಿಸಿದೆಯಲ್ಲದೇ, ಕಾನೂನು ರೀತಿ ಕ್ರಮ ಜರುಗಿಸುವಂತೆ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.
ಪೀಠ ತನ್ನ ಆದೇಶದಲ್ಲಿ, ಮುಡಾ ನಿರ್ಮಿಸಿರುವ ಮನೆಯಲ್ಲಿ ಅರ್ಜಿದಾರ 21 ವರ್ಷಗಳಿಂದ ಅಕ್ರಮವಾಗಿ ವಾಸವಿದ್ದು, ಎಂಜಿನಿಯರೊಬ್ಬ ಮನೆ ನೀಡುವ ಮೌಖಿಕ ಭರವಸೆ ನೀಡಿದ್ದರೆಂದು ಹೇಳಿದ್ದಾರೆ.
ಯಾವ ಇಲಾಖೆಯ ಯಾವ ಎಂಜಿನಿಯರ್ ಯಾವಾಗ ಎಲ್ಲಿ ಭರವಸೆ ನೀಡಿದ್ದರು ಎಂಬ ಮಾಹಿತಿ ನೀಡಿರಲಿಲ್ಲ. ಇನ್ನು, ತಾನೊಬ್ಬ ದಮನಿತ ವರ್ಗಕ್ಕೆ ಸೇರಿದ ವ್ಯಕ್ತಿಯಾಗಿದ್ದು ಹಲವು ವರ್ಷಗಳಿಂದ ಆ ಮನೆಯಲ್ಲಿ ವಾಸವಿರುವುದರಿಂದ ಸ್ವಾಧೀನಾನುಭವ ಖಾಯಂ ಮಾಡಬೇಕೆಂದು ವಾದಿಸಿದ್ದಾರೆ.
ಆದರೆ, ಆತ ಎಸ್ಸಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂಬುದನ್ನು ನಿರೂಪಿಸಿಲ್ಲ. ಮುಖ್ಯವಾಗಿ ದಮನಿತ ವರ್ಗಕ್ಕೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಸಾರ್ವಜನಿಕ ಸ್ವತ್ತನ್ನು ಅತಿಕ್ರಮಿಸುವುದಕ್ಕಾಗಲೀ ಅಥವಾ ಹಲವು ವರ್ಷಗಳಿಂದ ವಾಸವಿರುವ ಕಾರಣಕ್ಕೆ ಸರ್ಕಾರದ ಆಸ್ತಿಯನ್ನು ಮಂಜೂರು ಮಾಡಬೇಕು ಎಂದು ಕೇಳಲಿಕ್ಕಾಗಲೀ ಕಾನೂನಿನಲ್ಲಿ ಅವಕಾಶವಿಲ್ಲ ಎಂದಿದೆ.
ಅಲ್ಲದೇ, ದಾಖಲೆಗಳನ್ನು ಗಮನಿಸಿದರೆ ಅರ್ಜಿದಾರ ಉನ್ನತ ಅಧಿಕಾರಿಗಳನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಕರ್ನಾಟಕ ಎಸ್ಸಿ-ಎಸ್ಟಿ ಆಯೋಗಕ್ಕೆ ಎಳೆಯುವ ಮೂಲಕ ಕಿರುಕುಳ ನೀಡಿರುವುದು ಕಂಡುಬರುತ್ತದೆ.
ಇದೊಂದು ಅಕ್ರಮವಾಗಿ ವಾಸವಾಗಿರುವ ಮನೆ ಎಂದು ತಿಳಿದೂ ಸಂಬಂಧಿತ ಅಧಿಕಾರಿಗಳು, ಆಯೋಗಗಳು ಪಕ್ಷಪಾತದಿಂದ ವರ್ತಿಸಿರುವುದು ಆಕ್ಷೇಪಾರ್ಹವಾಗಿದೆ. ಇಂತಹ ವ್ಯಕ್ತಿಗಳಿಂದ ನಿಜವಾಗಿಯೂ ತುಳಿತಕ್ಕೊಳಗಾದ ವರ್ಗಗಳ ಬಗ್ಗೆ ಜನರಲ್ಲಿ ಇರುವ ಸೌಹಾರ್ದ ಭಾವ ಹಾಳಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಅರ್ಜಿದಾರನಿಗೆ ವಿಧಿಸಿರುವ 6 ಲಕ್ಷ ದಂಡ ಮೊತ್ತವನ್ನು ಆರು ವಾರಗಳಲ್ಲಿ ಮುಡಾಕ್ಕೆ ಪಾವತಿಸಬೇಕು. ವಿಳಂಬವಾದರೆ ಗಡುವು ಮೀರಿದ ದಿನದಿಂದ ಪ್ರತಿದಿನಕ್ಕೆ ಒಂದು ಸಾವಿರ ರೂಪಾಯಿ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ ಎಂದು ಪೀಠ ತೀರ್ಪು ನೀಡಿದೆ.
(WP 8137/2021)