-->
Can Govt Employee found drunk on public place?: ಮಹತ್ವದ ಕಾನೂನು ಮಾಹಿತಿ: ಸರಕಾರಿ ನೌಕರರನು ಮಾದಕ ಪಾನೀಯ ಅಥವಾ ಮಾದಕ ವಸ್ತು ಸೇವಿಸಬಹುದೇ?

Can Govt Employee found drunk on public place?: ಮಹತ್ವದ ಕಾನೂನು ಮಾಹಿತಿ: ಸರಕಾರಿ ನೌಕರರನು ಮಾದಕ ಪಾನೀಯ ಅಥವಾ ಮಾದಕ ವಸ್ತು ಸೇವಿಸಬಹುದೇ?

ಮಹತ್ವದ ಕಾನೂನು ಮಾಹಿತಿ: ಸರಕಾರಿ ನೌಕರರನು ಮಾದಕ ಪಾನೀಯ ಅಥವಾ ಮಾದಕ ವಸ್ತು ಸೇವಿಸಬಹುದೇ?





ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ ಕ್ಲಿಪ್ ಆಧಾರದಲ್ಲಿ ದುರ್ನಡತೆ ಎಸಗಿದ್ದಾನೆಂದು ತೀರ್ಮಾನಿಸಿ ಸರಕಾರಿ ನೌಕರನನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದುಪಡಿಸಿದ ಪಾಟ್ನಾ ಹೈಕೋರ್ಟ್




ಇತ್ತೀಚಿನ ದಿನಗಳಲ್ಲಿ ಸರಕಾರಿ ನೌಕರನು ಕರ್ತವ್ಯದ ಅವಧಿಯಲ್ಲಿ ದುರ್ನಡತೆ ಎಸಗಿದ್ದಾನೆ೦ದು ತೋರಿಸುವ ಘಟನೆಯ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಿ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಇಲಾಖೆಯ ವರಿಷ್ಠ ಅಧಿಕಾರಿಗಳಿಗೆ ಒತ್ತಡ ಹೇರಿ ಆತನ ಸೇವಾ ಜೀವನಕ್ಕೆ ತೊಂದರೆ ಉಂಟುಮಾಡುವ ಪ್ರಸಂಗಗಳನ್ನು ಕಾಣುತ್ತಿದ್ದೇವೆ. ಇಂತಹ ಒ೦ದು ಪ್ರಕರಣವು ಬಿಹಾರ ರಾಜ್ಯದಲ್ಲಿ ನಡೆದಿದೆ.




ಸೋನು ಕುಮಾರ್ ಎಂಬ ಪೊಲೀಸ್ ಕಾನ್ಸ್ಟೇಬಲ್ ದಿನಾಂಕ 15.9.2018 ರ೦ದು ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಘಟನೆಯ ಆಧಾರದಲ್ಲಿ ಆತನ ವಿರುದ್ಧ ಬಿಹಾರ ರಾಜ್ಯದ ಅಬಕಾರಿ ಕಾಯ್ದೆ ಕಲಂ 30 (ಎ) ಮತ್ತು 37 (ಎ)ರಡಿ ಎಫ್. ಐ.ಆರ್. ದಾಖಲಿಸಿ ಇಲಾಖಾ ವಿಚಾರಣೆ ನಡೆಸಲಾಯಿತು. ಆರೋಪಿ/ತಪ್ಪಿತಸ್ಥ ಸರಕಾರಿ ನೌಕರನ ನಡತೆಯು ಅಶಿಸ್ತು; ಬೇಜವಾಬ್ದಾರಿತನದಿಂದ ಕೂಡಿದ್ದು ಇಲಾಖೆಯ ಘನತೆಯನ್ನು ಕುಂದಿಸಿದೆ ಎಂಬ ಅಭಿಪ್ರಾಯ ತಾಳಿದ ಶಿಸ್ತು ಪ್ರಾಧಿಕಾರವು ಆರೋಪಿ/ತಪ್ಪಿತಸ್ಥ ಸರಕಾರಿ ನೌಕರನನ್ನು ಸೇವೆಯಿಂದ ವಜಾಗೊಳಿಸಿತು.


ಸದರಿ ಆದೇಶವನ್ನು ಪಾಟ್ನಾ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ತನಿಖಾಧಿಕಾರಿಯು ನೀಡಿದ ವರದಿಯಲ್ಲಿ ಆರೋಪಿ/ತಪ್ಪಿತಸ್ಥ ಸರಕಾರಿ ನೌಕರನು ಮದ್ಯಪಾನ ಮಾಡಿದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಕಂಡುಬರುವುದಿಲ್ಲ. ಆರೋಪಿ/ತಪ್ಪಿತಸ್ಥ ಸರಕಾರಿ ನೌಕರನನ್ನು ಯಾವುದೇ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿಲ್ಲ. ಆತನ ಕೈಯಲ್ಲಿದ್ದ ಗ್ಲಾಸ್ ನಲ್ಲಿ ಇರುವ ದ್ರವ ಆಲ್ಕೋಹಾಲ್ ಎಂಬ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ. 



ಕೇವಲ ವೀಡಿಯೊ ಕ್ಲಿಪ್ ನ ಆಧಾರದಲ್ಲಿ ಆರೋಪ ಸಾಬೀತಾಗಿದೆಯೆ೦ದು ನಿಣ೯ಯಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪಾಟ್ನಾ ಹೈಕೋರ್ಟ್ ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದು ಪಡಿಸಿ ಬಾಕಿ ವೇತನ ಮತ್ತಿತರ ಎಲ್ಲಾ ಸೇವಾ ಸೌಲಭ್ಯಗಳೊಂದಿಗೇ ಸದರಿ ಪೊಲೀಸ್ ಕಾನ್ಸ್ ಟೇಬಲ್ ನನ್ನು ಸರಕಾರಿ ಸೇವೆಗೆ ಮರು ನಿಯುಕ್ತಿಗೊಳಿಸುವಂತೆ ದಿನಾಂಕ 22.9.2021ರಂದು ಆದೇಶ ನೀಡಿತು.


ಕರ್ನಾಟಕ ನಾಗರಿಕ ಸೇವೆ (ನಡತೆ) ನಿಯಮಗಳು 2021ರ ನಿಯಮ 31ರಲ್ಲಿ ಮಾದಕ ಪಾನೀಯ ಮತ್ತು ಮಾದಕ ವಸ್ತುಗಳ ಸೇವನೆಯ ಕುರಿತು ಸರಕಾರಿ ನೌಕರನು ಪಾಲಿಸಬೇಕಾದ ನಿಯಮಗಳ ಬಗ್ಗೆ ಈ ಕೆಳಗಿನಂತೆ ತಿಳಿಸಲಾಗಿದೆ


(ಎ) ತಾನು ತತ್ಕಾಲದಲ್ಲಿ ಇರುವ ಯಾವುದೇ ಪ್ರದೇಶದಲ್ಲಿ ಮಾದಕ ಪಾನೀಯಗಳಿಗೆ ಅಥವಾ ಮಾದಕ ವಸ್ತುಗಳಿಗೆ ಸಂಬಂಧ ಪಟ್ಟ೦ತೆ ಜಾರಿಯಲ್ಲಿರುವ ಯಾವುದೇ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.


(ಬಿ) ಕರ್ತವ್ಯದ ಸಮಯ(on duty)ದಲ್ಲಿ ಯಾ ತನ್ನ ಅಧಿಕೃತ ಕರ್ತವ್ಯದ ಹಾಜರಿ ವೇಳೆಯಲ್ಲಿ ಯಾವುದೇ ಅಮಲುಕಾರಕ ಮಾದಕ ವಸ್ತುವನ್ನು ಸೇವಿಸತಕ್ಕದ್ದಲ್ಲ.


( ಸಿ) ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮಾದಕ ಪಾನೀಯವನ್ನು ಅಥವಾ ಮಾದಕವಸ್ತು ವಸ್ತುವನ್ನು ಸೇವಿಸತಕ್ಕದ್ದಲ್ಲ.


( ಡಿ) ಕುಡಿದು ಮತ್ತೇರಿದ ಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳ ತಕ್ಕದ್ದಲ್ಲ.


(ಇ) ರೂಢಿಗತವಾಗಿ ಯಾವುದೇ ಮಾದಕ ಪಾನೀಯವನ್ನು ಮಾದಕದ್ರವ್ಯವನ್ನು ಅತಿಯಾಗಿ ಸೇವನೆ ಮಾಡತಕ್ಕದ್ದಲ್ಲ.


ಕೆಸಿಎಸ್ (ನಡತೆ) ನಿಯಮಗಳನ್ವಯ ಸಾರ್ವಜನಿಕ ಸ್ಥಳ ಯಾವುದು?


ಈ ಕುರಿತು ವಿವರಣೆಯಲ್ಲಿ ಈ ಕೆಳಗಿನ೦ತೆ ತಿಳಿಸಲಾಗಿದೆ .


ಈ ನಿಯಮದ ಉದ್ದೇಶಕ್ಕಾಗಿ ಸಾರ್ವಜನಿಕ ಸ್ಥಳ ಎಂದರೆ ಹಣ ಪಾವತಿ ಮಾಡಿ ಅಥವಾ ಅನ್ಯಥಾ ಸಾರ್ವಜನಿಕರಿಗೆ (ವಾಹನವೂ ಸೇರಿದಂತೆ) ಪ್ರವೇಶಾವಕಾಶವಿರುವ ಅಥವಾ ಪ್ರವೇಶವನ್ನು ನಮೂದಿಸಲಾಗಿರುವ ಯಾವುದೇ ಸಾರ್ವಜನಿಕ ಸ್ಥಳ ಅಥವಾ ಆವರಣಗಳು ಎಂದು ಅರ್ಥ. ಆದರೆ, ಸೂಕ್ತ ಇಲಾಖೆ ಯಾ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ಆವರಣಗಳು ಇದರಿಂದ ಹೊರತಾಗಿರುತ್ತವೆ.


ರಾಜ್ಯ ಸರಕಾರಿ ನೌಕರರು ಕ್ಲಬ್ ಮತ್ತು ಬಾರ್ & ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವನೆ ಮಾಡಬಹುದೇ?


ಕೇಂದ್ರ ನಾಗರಿಕ ಸೇವಾ (ನಡತೆ) ನಿಯಮಗಳು 1964 ರ ನಿಯಮ 22 ರ ಪ್ರಕಾರ ಕ್ಲಬ್ ಮತ್ತು ಬಾರ್ & ರೆಸ್ಟೋರೆಂಟ್ ಸಾರ್ವಜನಿಕ ಸ್ಥಳ ಆಗಿರುವುದರಿಂದ ಸರಕಾರಿ ನೌಕರರು ಅಲ್ಲಿ ಮದ್ಯ ಸೇವನೆ ಮಾಡುವಂತಿಲ್ಲ. ಆದರೆ ಊಟ ಅಥವಾ ಆಹಾರ ವಸ್ತು ಸೇವಿಸಬಹುದು. ಮನೆಯಲ್ಲಿ ಅಥವಾ ಖಾಸಗಿ ಕೊಠಡಿಗಳಲ್ಲಿ ಮದ್ಯ ಸೇವನೆ ಮಾಡಲು ಸರಕಾರಿ ನೌಕರನಿಗೆ ಅವಕಾಶವಿದೆ.



ರಾಜ್ಯ ಸರಕಾರಿ ನೌಕರರಿಗೂ ಈ ನಿಯಮ ಅನ್ವಯಿಸುತ್ತದೆ. ಅತಿಯಾದ ಮದ್ಯಪಾನದ ಚಟಕ್ಕೆ ಒಳಗಾಗಿ ಮತ್ತೇರಿದ ಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡೊಡಲ್ಲಿ ಅಥವಾ ಕರ್ತವ್ಯದ ಅವಧಿಯಲ್ಲಿ ಅಮಲು ಪದಾರ್ಥ ಸೇವಿಸಿದ್ದು ಕಂಡು ಬಂದಲ್ಲಿ ಶಿಸ್ತು ಕ್ರಮಕ್ಕೆ ಒಳಪಡಬೇಕಾಗುತ್ತದೆ. 



ಸರಕಾರಿ ನೌಕರನ ಮದುವೆ ಮು೦ತಾದ ಸಮಾರಂಭದಲ್ಲಿ ಕೆಲವೊ೦ದು ಸಮುದಾಯದ ಕಟ್ಟುಪಾಡುಗಳ ಪ್ರಕಾರ ಅತಿಥಿಗಳಿಗೆ ಮದ್ಯವನ್ನು ಒದಗಿಸಲೇಬೇಕಾದ ಅನಿವಾಯ೯ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸರ್ಕಾರಿ ನೌಕರನು ಅನುಮತಿ ಪತ್ರವನ್ನು ಪಡೆಯತಕ್ಕದ್ದು.



ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ನಾಗರಿಕ ಸೇವೆಗೆ ಸೇರಿದ ಮಾಜಿ ಸೈನಿಕರು ಕೆಸಿಎಸ್ (ನಡತೆ) ನಿಯಮ 2021ರ ನಿಯಮ ಗಳನ್ನು ಪಾಲಿಸಿ ಮದ್ಯ ಸೇವನೆ ಮಾಡಬಹುದು. 21 ವರ್ಷಗಳಿಗೂ ಕಡಿಮೆ ವಯಸ್ಸಿನ ಸರಕಾರಿ ನೌಕರನಿಗೆ ಮದ್ಯ ಸೇವನೆ ಮಾಡಲು ಅಬಕಾರಿ ಕಾಯ್ದೆಯಡಿ ಅವಕಾಶವಿಲ್ಲ.


ಸರಕಾರಿ ನೌಕರರು ನಿಷೇಧಿತ ಮಾದಕ ದ್ರವ್ಯ (ಡ್ರಗ್ಸ್) ಸೇವಿಸಬಹುದೇ ?


ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ 1985 (ಎನ್ ಡಿಪಿಎಸ್ ಆ್ಯಕ್ಟ್ ) ಪ್ರಕಾರ ಆಲ್ಕೋಹಾಲ್ ಹೊರತುಪಡಿಸಿ ಉಳಿದಂತೆ ಗಾಂಜಾ; ಅಫೀಮು; ಚರಸ್; ಹೆರಾಯಿನ್; ಕೊಕೇನ್ ಮುಂತಾದ ಮಾದಕ ವಸ್ತುಗಳು ಮಾದಕ ದ್ರವ್ಯ (ಡ್ರಗ್ಸ್) ಎಂದು ಪರಿಗಣಿಸಲ್ಪಟ್ಟಿವೆ. ಔಷಧೀಯ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಈ ಮಾದಕ ವಸ್ತುಗಳನ್ನು ಬಳಸಲು ಕಾನೂನಿನಡಿ ಅವಕಾಶವಿಲ್ಲ. 



ಸರಕಾರಿ ನೌಕರನನ್ನು ಒಳಗೊಂಡಂತೆ ಯಾರಿಗೂ ಈ ನಿಷೇಧಿತ ಮಾದಕ ದ್ರವ್ಯಗಳನ್ನು ಸೇವಿಸಲು ಎನ್ ಡಿಪಿಎಸ್ ಕಾಯ್ದೆ1985 ರಡಿ ನಿಷೇಧವಿದೆ. ಒ೦ದು ವೇಳೆ ಇಂತಹ ನಿಷೇಧಿತ ಡ್ರಗ್ಸ್ ಸೇವಿಸಿ ಪ್ರಕರಣ ದಾಖಲಾಗಿ ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪ ಸಾಬೀತಾದರೆ ಕನಿಷ್ಠ 1 ಲಕ್ಷ ದಂಡ ಪಾವತಿಸಿ ಹತ್ತು ವರ್ಷದ ವರೆಗಿನ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.


ರಾಜ್ಯ ಸರಕಾರಿ ನೌಕರರ ವೇತನ ಪಾವತಿಗೆ ಅಬಕಾರಿ ಇಲಾಖೆಯ ಆದಾಯವೇ ಸಾಕು


ರಾಜ್ಯ ಸರಕಾರಕ್ಕೆ ಭರ್ಜರಿ ಆದಾಯ ತರುವ ಇಲಾಖೆ ಗಳಲ್ಲಿ ಅಬಕಾರಿ ಇಲಾಖೆ ಪ್ರಮುಖವಾದುದು. ಅಬಕಾರಿ ತೆರಿಗೆ ರೂಪದಲ್ಲಿ ರಾಜ್ಯ ಸರಕಾರಕ್ಕೆ ಅ೦ದಾಜು ವಾರ್ಷಿಕ ಇಪ್ಪತ್ತೈದು ಸಾವಿರ ಕೋಟಿ ಆದಾಯವಿದೆ. ಒ೦ದು ವರ್ಷದ ಒಟ್ಟು ಅಬಕಾರಿ ವಹಿವಾಟು ಅಂದಾಜು 3 ಲಕ್ಷ ಕೋಟಿಯನ್ನು ಮೀರುತ್ತದೆ ಎನ್ನುತ್ತವೆ ವರದಿಗಳು. ಇದು ರಾಜ್ಯ ಸರಕಾರದ ವಾರ್ಷಿಕ ಬಜೆಟ್ ಗಿಂತ ಅಧಿಕ. 



ಸರಕಾರಿ ನೌಕರರ ವೇತನ ಪಾವತಿಗೆ ಅಬಕಾರಿ ಇಲಾಖೆಯ ಆದಾಯವೇ ಸಾಕು. ಭಾರತದ ರಾಜ್ಯಗಳ ಪೈಕಿ ಗುಜರಾತ್; ಬಿಹಾರ; ನಾಗಾಲ್ಯಾಂಡ್; ಮಿಜೋರಾಂ; ಮಣಿಪುರ ಮತ್ತು ಕೇರಳದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮದ್ಯಪಾನ ವಾಸ್ತವದಲ್ಲಿ ಆರೋಗ್ಯಕ್ಕೆ ಹಾನಿಕರ. ಆದರೆ ಸರಕಾರದ ಬೊಕ್ಕಸಕ್ಕೆ ಲಾಭದಾಯಕ.


ಕರ್ನಾಟಕ ರಾಜ್ಯದಲ್ಲಿ 2006 ರಲ್ಲಿ ಪ್ಯಾಕೆಟ್ ಸಾರಾಯಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ನೀರಾ ಇಳಿಸುವುದು ಮತ್ತು ಶೇಂದಿ ಮಾರಾಟವನ್ನು ನಿಷೇಧಿಸಲಾಗಿದೆ. ಮದ್ಯ ಮಾರಾಟದಿಂದ ಸರಾಸರಿ ವಾರ್ಷಿಕ ಉತ್ತಮ ಆದಾಯವಿದೆ ನಿಜ. ಆದರೆ ವಾಸ್ತವದಲ್ಲಿ ಸರಕಾರಕ್ಕೆ; ಪ್ರಜೆಗಳಿಗೆ ಹಾಗೂ ಸಮಾಜಕ್ಕೆ ಮದ್ಯ ಮಾರಾಟದಿಂದ ಉಂಟಾಗುತ್ತಿರುವ ಹಾನಿಯೇ ಅಧಿಕ ಎನ್ನುತ್ತಿವೆ ಸರಕಾರದ ಅಧೀನ ಸಂಸ್ಥೆಯಾಗಿರುವ ನಿಮಾನ್ಸ್ ನ ವರದಿಗಳು.


ಲೇಖನ: ಶ್ರೀ ಪ್ರಕಾಶ್ ನಾಯಕ್, ಕಾನೂನು ತಜ್ಞರು, ಮಂಗಳೂರು




To read more, click this link:

https://www.scconline.com/blog/post/2021/10/14/constable-dismissed-from-service-after-video-of-him-consuming-alcohol-went-viral/

Ads on article

Advertise in articles 1

advertising articles 2

Advertise under the article