Fake case- IBC suspend 28 Advocates: ನಕಲಿ ಪರಿಹಾರ ಅರ್ಜಿಗಳನ್ನು ಸಲ್ಲಿಕೆ: 28 ವಕೀಲರು ಅಮಾನತು, ಬಿಸಿಐ ಕಠಿಣ ಕ್ರಮ
Fake case: ನಕಲಿ ಪರಿಹಾರ ಅರ್ಜಿಗಳನ್ನು ಸಲ್ಲಿಕೆ: 28 ವಕೀಲರು ಅಮಾನತು, ಬಿಸಿಐ ಕಠಿಣ ಕ್ರಮ
ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ ಮುಂದೆ ಹಾಗೂ ಕಾರ್ಮಿಕರ ಪರಿಹಾರ ಕಾಯಿದೆ ಅಡಿಯಲ್ಲಿ ನಕಲಿ ಪರಿಹಾರ ಅರ್ಜಿಗಳನ್ನು ಸಲ್ಲಿಸಿದ್ದ ವಕೀಲರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಆರೋಪಕ್ಕೆ ಒಳಗಾದ ವಕೀಲರ "ಸನದು" ಅನ್ನು ಅಮಾನತುಗೊಳಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.
ನಕಲಿ ಅರ್ಜಿಗಳನ್ನು ಸಲ್ಲಿಸಿರುವ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಚಾರ್ಜ್ ಶೀಟ್‌ಗಳಲ್ಲಿ ಹೆಸರಿಸಲಾದ ವಕೀಲರನ್ನು ಬಿಸಿಐ ಅಮಾನತು ಮಾಡಿದೆ.
ಈ ವಕೀಲರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ, ಶಿಸ್ತು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಬಿಸಿಐ ಉತ್ತರ ಪ್ರದೇಶ ಬಾರ್ ಕೌನ್ಸಿಲ್‌ಗೆ ಸೂಚನೆ ನೀಡಿದೆ.
ಘಟನೆಯ ವಿವರ
16-11-2021ರಂದು ಸಫೀಕ್ ಅಹ್ಮದ್ Vs ICICI ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನಕಲಿ ಕ್ಲೇಮ್ ಅರ್ಜಿಗಳನ್ನು ಪ್ರಸ್ತಾಪಿಸಿ, ಇಂತಹ ಅಕ್ರಮದ ವಿರುದ್ಧ ಗಂಭೀರ ಎಚ್ಚರಿಕೆ ನೀಡಿತ್ತು.
ಅಲಹಾಬಾದ್ ಹೈಕೋರ್ಟ್ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿ ನಕಲಿ ಕ್ಲೇಮ್ ಅರ್ಜಿ ಪ್ರಕರಣಗಳ ತನಿಖೆಗೆ ಆದೇಶ ನೀಡಿತ್ತು. ಆದರೆ, ಎಸ್‌ಐಟಿ ರಚಿಸಿ ನಾಲ್ಕು ವರ್ಷ ಕಳೆದಿದ್ದರೂ ಹೆಚ್ಚಿನ ಪ್ರಕರಣಗಳು ತನಿಖೆಗೆ ಬಾಕಿ ಇದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಇದೇ ವೇಳೆ, ನ್ಯಾಯಾಲಯದ ನಿರ್ದೇಶನದಂತೆ ವಿಚಾರಣೆಗೆ ಹಾಜರಾಗಿದ್ದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಆರೋಪಿ ವಕೀಲರ ಹೆಸರನ್ನು ಉತ್ತರ ಪ್ರದೇಶ ವಕೀಲರ ಪರಿಷತ್ತು ನಮಗೆ ನೀಡಿಲ್ಲ. ಹೆಸರುಗಳು ಲಭ್ಯವಾದರೆ ಆರೋಪಿತರ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ, ಕಳಂಕಿತ ವಕೀಲರ ಹೆಸರನ್ನು ನೀಡುವಂತೆ ಎಸ್‌ಐಟಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತು.
ಕಳಂಕಿತ ವಕೀಲರ ಹೆಸರಿನ ಪಟ್ಟಿ ಬಿಸಿಐ ಕೈ ಸೇರಿದ ತಕ್ಷಣ ತುರ್ತು ಸಭೆ ಕರೆದ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ ಮುಂದೆ ಹಾಗೂ ಕಾರ್ಮಿಕರ ಪರಿಹಾರ ಕಾಯಿದೆ ಅಡಿಯಲ್ಲಿ ನಕಲಿ ಪರಿಹಾರ ಅರ್ಜಿಗಳನ್ನು ಸಲ್ಲಿಸಿದ್ದ ಆರೋಪ ಎದುರಿಸುತ್ತಿರುವ 28 ಕಳಂಕಿತ ವಕೀಲರನ್ನು ಅಮಾನತುಗೊಳಿಸಿದೆ.