KSBC fined complainant - ವಕೀಲರ ವಿರುದ್ದ ಕ್ಷುಲ್ಲಕ ದೂರು: ಅರ್ಜಿದಾರನಿಗೆ ಭಾರೀ ದಂಡ ವಿಧಿಸಿದ ರಾಜ್ಯ ವಕೀಲರ ಪರಿಷತ್ತು
ವಕೀಲರ ವಿರುದ್ದ ಕ್ಷುಲ್ಲಕ ದೂರು: ಅರ್ಜಿದಾರನಿಗೆ ಭಾರೀ ದಂಡ ವಿಧಿಸಿದ ರಾಜ್ಯ ವಕೀಲರ ಪರಿಷತ್ತು
ವಕೀಲರೊಬ್ಬರ ವಿರುದ್ದ ಕ್ಷುಲ್ಲಕ ದೂರು ನೀಡಿದ ಅರ್ಜಿದಾರನಿಗೆ ಈ ದೂರು ಭಾರೀ ದುಬಾರಿಯಾಗಿ ಪರಿಣಮಿಸಿದೆ. ಅನಗತ್ಯ ಕಿರಿಕ್ ಮಾಡಲು ಹೋದ ಅರ್ಜಿದಾರನಿಗೆ 50 ಸಾವಿರ ರೂ ದಂಡ ವಿಧಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತೀರ್ಪು ನೀಡಿದೆ.
ಹಲವಾರು ವರ್ಷಗಳಿಂದ ಯಾವುದೇ ಸತ್ವ ಇಲ್ಲದೆ ವ್ಯಾಜ್ಯಗಳಲ್ಲಿ ಹಿನ್ನಡೆ ಅನುಭವಿಸಿದ್ದ ಕಕ್ಷಿದಾರರೊಬ್ಬರು ವಕೀಲರ ವಿರುದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಿದ್ದರು.
ಈ ಬಗ್ಗೆ ನ್ಯಾಯತೀರ್ಮಾನ ಮಾಡಿದ ವಕೀಲರ ಪರಿಷತ್ತು, ಅರ್ಜಿದಾರರು ಕ್ಷುಲ್ಲಕ ದೂರು ಕೊಡುವುದನ್ನು ಗಮನಿಸಿದೆ. ಆದರೆ ತಮ್ಮ ಕಕ್ಷಿದಾರರ ಪರವಾಗಿ ಕಷ್ಟಪಟ್ಟು ಹೋರಾಡಿದ ವಕೀಲರೊಬ್ಬರ ಮೇಲೆ ಎದುರುದಾರರೊಬ್ಬರು ದೂರು ನೀಡಿ ವಿನಾ ಕಾರಣ ಎರಡು ವರ್ಷಗಳ ಕಾಲ ಕಿರುಕುಳ ನೀಡಿದ ಕಾರಣಕ್ಕೆ ಅರ್ಜಿದಾರರಿಗೆ ರೂ. 50,000 ದ0ಡ ವಿಧಿಸಿ ತೀರ್ಪು ನೀಡಿದೆ.
ಆದಿತ್ಯ ವಿವಿಧೋದ್ದೇಶ ಸಹಕಾರಿ ಸಂಘ ಈ ದೂರು ನೀಡಿತ್ತು. ತಾನು ಸಾಲ ಕೊಟ್ಟವರ ಪರವಾಗಿ ವಕೀಲರೊಬ್ಬರು ವಕಾಲತ್ತು ವಹಿಸಿ ಪ್ರಬಲವಾಗಿ ವಾದ ಮಾಡಿ ನಮ್ಮ ಕೇಸ್‌ನಲ್ಲಿ ನಮಗೆ ಹಿನ್ನಡೆ ಉಂಟು ಮಾಡಿದ್ದಾರೆ ಎಂದು ದೂರು ನೀಡಿತ್ತು.
ಈ ಸಂಬಂಧ ಕಳೆದ ಸುಮಾರು ಎರಡು ವರ್ಷಗಳಿಂದ ವಿಚಾರಣೆ ನಡೆದಿತ್ತು. ಈ ದೂರು ಅರ್ಜಿಯನ್ನು ಕೂಲಂಕಷವಾಗಿ ನ್ಯಾಯ ತೀರ್ಮಾನ ಮಾಡಿದ ಕೆಎಸ್‌ಬಿಸಿಯ ಶಿಸ್ತು ಸಮಿತಿ, ಇಂತಹ ದೂರುಗಳು ವಕೀಲರ ಮನೋಸ್ತೈರ್ಯ ಕುಗ್ಗಿಸುವ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ತೀರ್ಪು ನೀಡಿತು. ಅಲ್ಲದೆ, ವಕೀಲರಿಗೆ ವಿನಾಕಾರಣ ಕಿರುಕುಳ ನೀಡಿದ್ದಕ್ಕೆ 50,000 ದಂಡ ವಿಧಿಸಿದೆ.