High court fined witness- ಬನಿಯನ್ ಧರಿಸಿ ಹಾಜರು: ಸಾಕ್ಷಿದಾರನ ವಿರುದ್ಧ ಹೈಕೋರ್ಟ್ ಗರಂ, 10 ಸಾವಿರ ದಂಡ
ಬನಿಯನ್ ಧರಿಸಿ ಹಾಜರು: ಸಾಕ್ಷಿದಾರನ ವಿರುದ್ಧ ಹೈಕೋರ್ಟ್ ಗರಂ, 10 ಸಾವಿರ ದಂಡ
ವೀಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆದ ಸಂದರ್ಭದಲ್ಲಿ ಸಾಕ್ಷಿದಾರ ನ್ಯಾಯಾಲಯಕ್ಕೆ ಮುಜುಗರ ಉಂಟುಮಾಡುವಂತಹ ಉಡುಪು ಧರಿಸಿದ್ದ ಘಟನೆ ದೆಹಲಿ ಹೈಕೋರ್ಟ್ ವಿಚಾರಣೆ ವೇಳೆ ನಡೆದಿದೆ.
ಸಾಕ್ಷಿ ನುಡಿಯಬೇಕಿದ್ದ ವ್ಯಕ್ತಿಯೊಬ್ಬರು ಕೇವಲ ಬನಿಯನ್‌ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾದರು. ಇದು ನ್ಯಾಯಾಧೀಶರನ್ನು ಕೆರಳುವಂತೆ ಮಾಡಿದ್ದು, ನ್ಯಾಯಾಲಯದ ಘನತೆಗೆ ಧಕ್ಕೆ ಉಂಟುಮಾಡುವಂತಹ ಕೃತ್ಯ ಎಸಗಿದ ಸಾಕ್ಷಿದಾರನಿಗೆ ಹೈಕೋರ್ಟ್ 10 ಸಾವಿರ ರೂ.ಗಳ ಜುಲ್ಮಾನೆ ವಿಧಿಸಿದೆ.
ಸೌರಭ್ ಗೋಗಿಯಾ ಇತರರು Vs ಸರ್ಕಾರ ಇನ್ನಿತರರು ಪ್ರಕರಣದಲ್ಲಿ ಸಾಕ್ಷಿಯಾಗಿ VC ಮೂಲಕ ಆಗಮಿಸಿದ ಐದನೇ ಅರ್ಜಿದಾರರು ಬನಿಯನ್ ಧರಿಸಿದ್ದರು. ತನಿಖಾಧಿಕಾರಿಯ ಗುರುತು ಹಚ್ಚಲು ಸಾಕ್ಷಿ ವಿಚಾರಣೆ ನಡೆಯಬೇಕಿದ್ದ ಕಾರಣಕ್ಕೆ ಅವರ ವಿಚಾರಣೆ ಅಗತ್ಯವಿತ್ತು.
ಪ್ರಕರಣದ ವಿವರ:
ಪತಿಯ ವಿರುದ್ಧ ಪತ್ನಿ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಅರ್ಜಿದಾರರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಕಕ್ಷಿದಾರರು ತಮ್ಮ ನಡುವಿನ ವ್ಯಾಜ್ಯವನ್ನು ಬಗೆಹರಿಸಿದ್ದು, ಮದುವೆಯನ್ನು ರದ್ದುಗೊಳಿಸಲಾಗಿದೆ.
ವಿವಾಹದಿಂದ ಜನಿಸಿದ ಹೆಣ್ಣು ಮಗುವನ್ನು ಭೇಟಿಯಾಗಲು ತಂದೆಗೆ ಅವಕಾಶ ನೀಡಿಲ್ಲ ಎಂದು ಅರ್ಜಿದಾರರು ತಿಳಿಸಿದ್ದರು. ಮಗುವಿನ ಯೋಗಕ್ಷೇಮದ ಬಗ್ಗೆ ತಿಳಿಸಲು ಅರ್ಜಿದಾರರಿಗೆ ಇಮೇಲ್ ಕಳಿಸಬೇಕು ಎಂಬ ಗಂಡನ ವಾದಕ್ಕೆ ಪತ್ನಿ ಒಪ್ಪಿಕೊಂಡರು.
ಈ ಪ್ರಕರಣದಲ್ಲಿ ತನಿಖಾಧಿಕಾರಿಯ ಗುರುತು ಹಚ್ಚಲು ಸಾಕ್ಷಿ ವಿಚಾರಣೆ ನಡೆಯಬೇಕಿತ್ತು. ವೈಯಕ್ತಿಕ ಹಾಜರು ಕಷ್ಟ ಸಾಧ್ಯ ಎಂಬ ಕಾರಣಕ್ಕೆ ಅರ್ಜಿದಾರರಿಗೆ ವರ್ಚುವಲ್ ವಿಚಾರಣೆ ನಡೆಸಲಾಗಿತ್ತು.
ಈ ಸಂದರ್ಭದಲ್ಲಿ ಅರ್ಜಿದಾರರು ಬನಿಯನ್ ಧರಿಸಿ ಬಂದದ್ದು ನ್ಯಾಯಪೀಠದ ಕೆಂಗಣ್ಣಿಗೆ ಗುರಿಯಾಯಿತು.