'write judgement in simple language' -ನ್ಯಾಯಾಲಯಗಳು ಸರಳ ಭಾಷೆಯಲ್ಲಿ ನ್ಯಾಯತೀರ್ಪುಗಳನ್ನು ನೀಡಬೇಕು: ಜಸ್ಟಿಸ್ ಎನ್.ವಿ. ರಮಣ
ನ್ಯಾಯಾಲಯಗಳು ಸರಳ ಭಾಷೆಯಲ್ಲಿ ನ್ಯಾಯತೀರ್ಪುಗಳನ್ನು ನೀಡಬೇಕು: ಜಸ್ಟಿಸ್ ಎನ್.ವಿ. ರಮಣ
ಸಾಮಾನ್ಯ ಜನರೂ ಅರ್ಥ ಮಾಡಿಕೊಳ್ಳಬಲ್ಲಂತಹ ಸರಳ ಹಾಗೂ ನೇರ ಅರ್ಥ ನೀಡುವ ಭಾಷೆಯಲ್ಲಿ ನ್ಯಾಯಾಲಯಗಳು ನ್ಯಾಯತೀರ್ಪುಗಳನ್ನು ಬರೆಯಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಹೇಳಿದ್ದಾರೆ.
ಸಂವಿಧಾನಿಕ ಪೀಠಗಳಾದ ಸುಪ್ರೀಂ ಕೋರ್ಟ್ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡಬೇಕಿದೆ ಎಂದು ಅವರು ಹೇಳಿದರು.
ನ್ಯಾಯಾಲಯಗಳ ತೀರ್ಪುಗಳು ನಾಗರಿಕ ಸಮಾಜದ ಮೇಲೆ ಗಾಢವಾದ ಮತ್ತು ಗಂಭೀರವಾದ ಪರಿಣಾಮ ಬೀರುತ್ತದೆ. ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವ ಹಾಗೆ ನ್ಯಾಯತೀರ್ಪುಗಳು ಬರೆಯಬೇಕಿದೆ. ಇದು ಸಂವಿಧಾನಿಕ ಪೀಠಗಳ ಜವಾಬ್ದಾರಿಯೂ ಆಗಿದೆ ಎಂದು ಅವರು ಹೇಳಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಭಾರತದ ನ್ಯಾಯಾಂಗವು ಕಟಿಬದ್ಧವಾಗಿರಬೇಕಿದೆ. ಮತ್ತು ಜನರ ಕಟ್ಟಕಡೆಯ ಆಶಾಕಿರಣವಾಗಿ ಮತ್ತು ಜನರ ನಂಬಿಕೆ ವಿಶ್ವಾಸ ಪ್ರತೀಕವಾಗಿ ನ್ಯಾಯಾಲಯಗಳು ನಿಲ್ಲಬೇಕಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ) ಆಯೋಜಿಸಿದ್ದ ‘ಪಾನ್-ಇಂಡಿಯಾ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.