Article by Rtd Judge- ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ: ಸರ್ಕಾರದ ನಿರ್ಧಾರ ನ್ಯಾಯಾಲಯಕ್ಕೆ ಒಪ್ಪಿತವೇ...? ಸಮ್ಮತವೇ...?
ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ: ಸರ್ಕಾರದ ನಿರ್ಧಾರ ನ್ಯಾಯಾಲಯಕ್ಕೆ ಒಪ್ಪಿತವೇ...? ಸಮ್ಮತವೇ...?
ಲೇಖನ: ಎಸ್. ಎಚ್. ಮಿಟ್ಟಲಕೊಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ
ಹಲವಾರು ಬಾರಿ ಪೊಲೀಸರು ಆರೋಪ ಪಟ್ಟಿ ಹಾಕಿದ ಅಪರಾಧ ಪ್ರಕರಣಗಳನ್ನು, ಹಿಂಪಡೆದು ಸರಕಾರ ಆದೇಶ ಹೊರಡಿಸಿದ್ದನ್ನು, ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ಈ ರೀತಿ ಹೊರಡಿಸಿದ ಆದೇಶಗಳನ್ನು ರಾಜಕೀಯ ಕಾರಣಕ್ಕಾಗಿ ತಮ್ಮ ಪಕ್ಷದ ಜನರನ್ನು ರಕ್ಷಿಸಲು, ಇಂತಹ ಆದೇಶ ಮಾಡಲಾಗಿದೆ, ಎಂದು ವಿರೋಧ ಪಕ್ಷದವರು ಟೀಕಿಸಿದ್ದನ್ನೂ ನಾವು ಓದಿದ್ದೇವೆ.ಆದರೆ ರಾಜಕೀಯ ಬದಿಗಿಟ್ಟು ಕಾನೂನು ಎನು ಹೇಳುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ.
ಪೊಲೀಸರು ಆರೋಪ ಪಟ್ಟಿ ಹಾಕಿದ ಅಪರಾಧ ಪ್ರಕರಣಗಳನ್ನು, ಅಭಿಯೋಗದಿಂದ ಹಿಂಪಡೆಯುವ ಅಧಿಕಾರ ಸರಕಾರಕ್ಕೆ ಇದೆ.ಇದನ್ನು ನಾವು ದಂಡ ಪ್ರಕ್ರಿಯಾ ಸಂಹಿತೆಯ ಕಲಂ 321 ರಲ್ಲಿ ಕಾಣಬಹುದು.ಹಾಗಾದರೆ ಯಾವ ಸಂದರ್ಭದಲ್ಲಿ ಪ್ರಕರಣ ಹಿಂಪಡೆಯಲು ಅವಕಾಶ ಇದೆ ಅನ್ನುವದನ್ನು ಗಮನಿಸೋಣ.
ದಂಡ ಪ್ರಕ್ರಿಯಾ ಸಂಹಿತೆ 321 ರಲ್ಲಿ ಅಪರಾಧ ಪ್ರಕರಣದ ಪ್ರಭಾರದಲ್ಲಿರುವ ಅಭಿಯೋಜಕರು, ನ್ಯಾಯಾಲಯದ ಅನುಮತಿಯೊಂದಿಗೆ, ನ್ಯಾಯಾ ಲಯ ತೀರ್ಪು ನೀಡುವ ಮೊದಲು ಅಪರಾಧ ಪ್ರಕರಣವನ್ನು ಪೂರ್ತಿಯಾಗಿ ಅಥವಾ ಕೆಲವೇ ಅಪರಾಧಗಳ ಮಟ್ಟಿಗೆ ಹಿಂಪಡೆಯಬಹುದು. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಆರೋಪ ಪಟ್ಟಿ ಹಾಕಿದ್ದರೆ, ಕೇಂದ್ರ ಸರ್ಕಾರದ ಅನುಮತಿ ಪಡೆದ ಅಭಿಯೋಜಕರು ಪ್ರಕರಣ ಹಿಂಪಡೆಯಬಹುದು.
ಪ್ರಕರಣ ಹಿಂದಕ್ಕೆ ಪಡೆಯಲು ಅಭಿಯೋಜಕರಿಗೆ ಮಾತ್ರ ಅಧಿಕಾರ ಇದೆ. ಅದರಲ್ಲಿ ಸರಕಾರದ ಪಾತ್ರ ಏನು ಇಲ್ಲ. ಆದರೆ ಸರಕಾರದ ಅಧೀನ ನೌಕರರಾದ ಅಭಿಯೋಜಕರು, ಸರಕಾರದ ಅನುಮತಿ ಇಲ್ಲದೇ ಪ್ರಕರಣ ಹಿಂಪಡೆಯಲು ಸಾಧ್ಯವಿಲ್ಲ ಎಂಬುದು ಕಠೋರ ಸತ್ಯ.
ಕಾನೂನು ಪ್ರಕಾರ ಅಭಿಯೋಜಕರಿಗೆ ಮಾತ್ರ ಹಿಂಪಡೆಯಲು ಅಧಿಕಾರ ಇದ್ದರೂ, ಸರಕಾರದ ಅನುಮತಿ ಪಡೆಯುವದು ಅಭಿಯೋಜಕರಿಗೆ ಅನಿವಾರ್ಯ.ಇದರಿಂದ ಕಾನೂನು ಪ್ರಕಾರ ಹಿಂಪಡೆಯುವ ಕ್ರಮಕ್ಕೆ ರಾಜಕೀಯ ಲೇಪ ಅಂಟಿಕೊಳ್ಳುತ್ತದೆ.ಪ್ರಕರಣಗಳನ್ನು ಯಾವ ಕಾರಣಕ್ಕಾಗಿ ಹಿಂಪಡೆಯಲು ಅವಕಾಶ ಇದೆ ನೋಡೋಣ.
ಕಲಂ 321 ರಲ್ಲಿ ಯಾವ ಕಾರಣಕ್ಕಾಗಿ ಪ್ರಕರಣ ಹಿಂಪಡೆಯಬಹುದು ಎನ್ನುವುದನ್ನು ಕಾಯಿದೆಯಲ್ಲಿ ಹೇಳಿಲ್ಲ.ಆದರೆ ಸಕಾರಣಕ್ಕಾಗಿ ಪ್ರಕರಣ ಹಿಂಪಡೆಯ ಬಹುದು ಸಕಾರಣ ಎಂದರೆ ಏನು ಇದನ್ನು ನ್ಯಾಯಾಲಯದ ತೀರ್ಪುಗಳಲ್ಲಿ ನೋಡಬಹುದು.
ಸಾರ್ವಜನಿಕ ಹಿತಾಸಕ್ತಿ ಇದ್ದರೆ, ಯಾ ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರತೆ ಇದ್ದರೆ ಅಂತಹ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬಹುದು. ಆದರೆ, ಸಾರ್ವಜನಿಕ ಹಿತಾಸಕ್ತಿ ನೆಪದಲ್ಲಿ ರಾಜಕೀಯ ಹಿತಾಸಕ್ತಿ ಅಡಗಿರಬಾರದು ಎಂಬುದು ಕಾನೂನಿನ ಉದ್ದೇಶ.
ಇದಕ್ಕಾಗಿ ಈ ಕೆಳಗಿನ ಪ್ರಕರಣಗಳನ್ನು ನಾವು ಗಮನಿಸಬಹುದು.
ಜುಲೈ 31,2000 ರಂದು ಕಾಡುಗಳ್ಳ ವೀರಪ್ಪನ್ ನಮ್ಮ ಕನ್ನಡದ ಮೇರು ನಟ, ರಾಜಕುಮಾರ ಅವರನ್ನು ದೊಡ್ಡ ಗಾಜನೂರು ಮನೆಯಿಂದ ಅಪಹರಣ ಮಾಡಿದ್ದು ಎಲ್ಲರಿಗೂ ಗೊತ್ತು.ನಂತರ ರಾಜಕುಮಾರ ಅವರನ್ನು ಮುಕ್ತ ಗೊಳಿಸಲು ಏನೆಲ್ಲಾ ಪ್ರಯತ್ನ ಸರಕಾರ ಮಾಡಿತು ಎನ್ನುವದು ಈಗ ಅಪ್ರಸ್ತುತ.
ರಾಜಕುಮಾರ ಬಿಡುಗಡೆ ಮಾಡಲು ಮೈಸೂರು ಜೈಲಿನಲ್ಲಿರುವ, ತನ್ನ ಸಹಚರರನ್ನು ಬಿಡುಗಡೆ ಮಾಡಬೇಕು ಎನ್ನುವ ಬೇಡಿಕೆ, ವೀರಪ್ಪನ್ ಸರಕಾರದ ಮುಂದೆ ಇಟ್ಟಿದ್ದ.ವೀರಪ್ಪನ್ ಸಹಚರರು ಕೊಲೆ,ಗಂಧದ ಕಳ್ಳತನ ಮತ್ತು ಹಲವಾರು ಆಪಾದನೆ ಮೇಲೆ ಮೈಸೂರು ಟಾಡಾ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು.
ಈ ಆರೋಪಿಗಳನ್ನು ಬಿಡುಗಡೆ ಮಾಡಿದರೆ ಮಾತ್ರ ಸರ್ಕಾರಕ್ಕೆ ಡಾ. ರಾಜ್ ಕುಮಾರ್ ಅವರನ್ನು ಬಿಡುಗಡೆ ಮಾಡುವ ಷರತ್ತು ಪೂರೈಸಲು ಸಾಧ್ಯ. ಆಗ ರಾಜ್ಯ ಸರಕಾರಕ್ಕೆ ಮೈಸೂರು ಜೈಲಿನಲ್ಲಿ ಇರುವ ಆರೋಪಿಗಳನ್ನು ಬಿಡುಗಡೆ ಮಾಡಲು ಇದ್ದ ಒಂದೇ ಒಂದು ದಾರಿ ಏನೆಂದರೆ, ಆ ಆರೋಪಿಗಳ ಮೇಲಿನ ಪ್ರಕರಣ ವಾಪಸ್ ಪಡೆಯುವುದು.
ಆಗಿನ ಸರ್ಕಾರ ಕಾನೂನು ತಜ್ಞರ ಸಲಹೆ ನಂತರ ವೀರಪ್ಪನ್ ಸಹಚರರ ಪ್ರಕರಣ ವಾಪಸ್ ಪಡೆಯಲು ತೀರ್ಮಾನಿಸಿತು. ಈ ಬಗ್ಗೆ ಅಭಿಯೋಜಕರಿಗೆ ಸೂಚನೆ ನೀಡಿತು. ಈ ಆದೇಶದ ಅನ್ವಯ ಅಭಿಯೋಜಕರು ಆ ಪ್ರಕರಣ ಹಿಂಪಡೆಯಲು, ಟಾಡಾ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿ ಆ ಪ್ರಕರಣ ಹಿಂಪಡೆಯಲು ಅನುಮತಿ ನೀಡಿತ್ತು.
ಟಾಡಾ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ವೀರಪ್ಪನ್ ಕ್ರೌರ್ಯಕ್ಕೆ ಬಲಿಯಾಗಿದ್ದ ಪೊಲೀಸ್ ಅಧಿಕಾರಿ ಶಕೀಲ್ ಅಹಮದ್ ಅವರ ತಂದೆ ಅಬ್ದುಲ್ ಕರೀಂ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ , ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಸೂಕ್ತ ಪರಿಶೀಲನೆ ಆಗಿಲ್ಲ ಎಂದು ಟಾಡಾ ನ್ಯಾಯಾಲಯದ ಆದೇಶ ರದ್ದು ಮಾಡಿತು. (2000 8 SCC 710)
ನಿಜವಾಗಿ, ವೀರಪ್ಪನ್ ಬೆದರಿಕೆಗೆ ಮಣಿದ ಸರ್ಕಾರ, ಪ್ರಕರಣ ಹಿಂಪಡೆಯಲು ಅನುಮತಿ ನೀಡಿತ್ತು ಎಂಬುದು ಸ್ಪಷ್ಟ. ಇದಕ್ಕಾಗಿ ಪ್ರಕರಣ ಹಿಂಪಡೆದರೆ ಅದು 'ಕಾನೂನು ವ್ಯವಸ್ಥೆ'ಗೆ ಮಾಡಿದ ಅಪಮಾನ. ಇದು ತಪ್ಪು ನಿದರ್ಶನವಾಗಿ, ಇದೇ ದಾರಿಯಲ್ಲಿ ಬೆದರಿಕೆ ತಂತ್ರ ಬಳಸಿ, ಅಪರಾಧ ಪ್ರಕರಣಗಳನ್ನು ವಾಪಸ್ ಪಡೆಯಲು ಸರಕಾರದ ಮೇಲೆ ಒತ್ತಡ ಹಾಕಬಹುದು, ಬಚಾವ್ ಆಗುವ ಪ್ರಯತ್ನ ಮಾಡಬಹುದು.
ನರಗುಂದ, ನವಲಗುಂದ ರೈತರ ಬಂಡಾಯ(1981 ರಲ್ಲಿ) ಪ್ರಕರಣದಲ್ಲಿ ರೈತರ ಮೇಲೆ ಹಾಕಿದ ಕೊಲೆ ಮತ್ತು ದೊಂಬಿ ಪ್ರಕರಣಗಳನ್ನು ಆಗಿನ ಸರಕಾರ 'ಸಾರ್ವಜನಿಕ ಹಿತಾಸಕ್ತಿ' ನೆಲೆಯಲ್ಲಿ ಹಿಂದಕ್ಕೆ ಪಡೆದಿತ್ತು. ಆಗ ದೊಂಬಿ ಯಾವುದೇ ವೈಯಕ್ತಿಕ ಯಾ ರಾಜಕೀಯ ಕಾರಣಕ್ಕೆ ನಡೆದಿರಲಿಲ್ಲ.
ದಾವಣಗೆರೆಯಲ್ಲಿ ನಾನು ದಂಡಾಧಿಕಾರಿ ಆಗಿದ್ದ ಸಂದರ್ಭದಲ್ಲಿ, ಅಭಿಯೋಜಕರು 3 ಅಪರಾಧ ಪ್ರಕರಣಗಳನ್ನು ಹಿಂಪಡೆಯಲು ಸರಕಾರ ಅನುಮತಿ ನೀಡಿದೆ ಎಂಬುದಾಗಿ ಅರ್ಜಿ ಸಲ್ಲಿಸಿದ್ದರು. ಆಗ ಮೂರೂ ಅರ್ಜಿಗಳನ್ನು ಪ್ರತ್ಯೇಕ ವಿಚಾರಣೆ ಮಾಡಿದೆ. ಅಭಿಯೋಜಕರಿಗೆ ಈ ಪ್ರಕರಣ ಹಿಂಪಡೆಯಲು ಯಾವ ಸಾರ್ವಜನಿಕ ಹಿತಾಸಕ್ತಿ ಇದೆ ಎಂದು ಪ್ರಶ್ನಿಸಿದೆ. ಅದಕ್ಕೆ ಅವರಲ್ಲಿ ಉತ್ತರ ಇರಲಿಲ್ಲ.
ಸರಕಾರ ಅನುಮತಿ ನೀಡಿದೆ ಎನ್ನುವುದು ಬಿಟ್ಟರೆ ಅರ್ಜಿಯಲ್ಲಿ ಬೇರಾವ ಗಟ್ಟಿ ಅಂಶ ಇರಲಿಲ್ಲ. 'ಸಾರ್ವಜನಿಕ ಹಿತಾಸಕ್ತಿ' ಸಾಧನೆಗೆ ಈ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿ ಕೊಡುವಲ್ಲಿ ಅವರು ವಿಫಲವಾದರು.
ಇನ್ನೊಂದು, ಕಳ್ಳಭಟ್ಟಿ ಸಾಗಾಟ ಪ್ರಕರಣಕ್ಕೆ ಸಂಬಂಧಿದ ವಿಚಾರ. ಈ ಪ್ರಕರಣ ಹಿಂಪಡೆದರೆ 'ಸಾರ್ವಜನಿಕ ಹಿತಾಸಕ್ತಿ'ಗೆ ಬಾಧಕವಾಗುತ್ತಿತ್ತು, ಕಳ್ಳ ಭಟ್ಟಿ ದಂಧೆಕೋರರಿಗೆ ಇಂಬು ಕೊಟ್ಟಂತಾಗುತ್ತಿತ್ತು. ಇಂತಹ ಪ್ರಕರಣ ಹಿಂಪಡೆಯಲು ಅನುಮತಿ ನೀಡಿದರೆ 'ಸಾರ್ವಜನಿಕ ಹಿತಾಸಕ್ತಿ' ಬದಲಿಗೆ 'ಅಪರಾಧಿಕ ಹಿತಾಸಕ್ತಿ' ರಕ್ಷಣೆ ಮಾಡಿದಂತಾಗುತ್ತದೆ ಎಂದು ಅರ್ಜಿ ವಜಾ ಮಾಡಿದೆ.
ಮತ್ತೊಂದು ಪ್ರಕರಣದಲ್ಲಿ ವೈಯಕ್ತಿಕ ಗಲಾಟೆ ಪ್ರರಕಣದಲ್ಲಿ ಆರೋಪ ಪಟ್ಟಿ ಹಾಕಲಾಗಿತ್ತು. ಇದರಲ್ಲೂ ಸಾರ್ವಜನಿಕ ಹಿತಾಸಕ್ತಿ ಅಂಶ ಇಲ್ಲದ ಕಾರಣ ಅರ್ಜಿಯನ್ನು ವಜಾ ಮಾಡಿದೆ.
3ನೇ ಪ್ರಕರಣ ನಿಜಕ್ಕೂ ಅಚ್ಚರಿಯ ವಿಷಯ. ಈ ಪ್ರಕರಣದಲ್ಲಿ 'ಆರೋಪ ಪಟ್ಟಿ'ಯನ್ನೇ ಹಾಕಿರಲಿಲ್ಲ. 'ಇದು ಪತ್ತೆಯಾಗದ ಪ್ರಕರಣ' ಎಂಬ ಷರಾ ಬರೆದು ಎಂದು ಪೊಲೀಸರು (C) ವರದಿ ಸಲ್ಲಿಸಿದ್ದರು. ಇಲ್ಲಿ ಪ್ರಕರಣವೇ ಇರಲಿಲ್ಲ. ಆರೋಪ ಪಟ್ಟಿ ಇಲ್ಲದೇ ಅಭಿಯೋಜನೆ ಅಸಾಧ್ಯ. ಅಭಿಯೋಜನೆ ಇಲ್ಲದ ಪ್ರಕರಣ ಹಿಂಪಡೆಯಲು ಅವಕಾಶವೇ ಇಲ್ಲ. ಆದರೂ, ಅಪರಾಧ ಪ್ರಕರಣಗಳ ಹಿಂಪಡೆಯುವ ನಿರ್ಧಾರದ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಎಷ್ಟೊಂದು ಬೇಜವಾಬ್ದಾರಿ ಮಾಡುತ್ತಾರೆ ಎಂಬುದಕ್ಕೆ ಇದು ನಿದರ್ಶನ. ಯಾರದೋ ಒತ್ತಡಕ್ಕೆ ಬಲಿಯಾಗಿ ಫರ್ಮಾನು ಹೊರಡಿಸುತ್ತಾರೆ ಎನ್ನುವದು ಗಮನಾರ್ಹ.
ಪ್ರಕರಣ ಹಿಂಪಡೆಯಲು ಅಭಿಯೋಜಕರು ಅರ್ಜಿ ಹಾಕಿದರು ಎಂಬ ಕಾರಣಕ್ಕೆ ಅವರಿಗೆ ಅನುಮತಿ ನೀಡಬೇಕೆಂಬ ಯಾವ ನಿಯಮವೂ ಇಲ್ಲ. ಇಂತಹ ಅರ್ಜಿಯನ್ನು ಕಾನೂನು ಚೌಕಟ್ಟನಲ್ಲಿ, ಗಂಭೀರವಾಗಿ ಪರಿಗಣಿಸಿದ ಬಳಿಕ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಪರಿಶೀಲಿಸಿ ಅನುಮತಿ ನೀಡಬೇಕು ಎಂಬುದನ್ನು ಮಾನ್ಯ ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳಲ್ಲಿ ಪುನರುಚ್ಚರಿಸಿದೆ.
ಅಂತಿಮವಾಗಿ, ಅಪರಾಧ ಪ್ರಕರಣಗಳನ್ನು ವಾಪಸ್ ಪಡೆಯುವ ಅಧಿಕಾರ ಸರಕಾರಕ್ಕೆ ಇದೆ. ಆದರೆ ಯಾವ ಪ್ರಕರಣ ಹಿಂಪಡೆಯಬೇಕು ಎಂಬುದನ್ನು ಸೂಕ್ತ ವಿವೇಚನೆ ಬಳಸಿ ಸರಕಾರ ತೀರ್ಮಾನ ಮಾಡಬೇಕು.
ಇಲ್ಲಿ, 'ಸಾರ್ವಜನಿಕ ಹಿತಾಸಕ್ತಿ' ಮುಖ್ಯವೇ ಹೊರತು ಬೇರೇನೂ ಇಲ್ಲ. 'ಸಾರ್ವಜನಿಕ ಹಿತಾಸಕ್ತಿ' ಎಂಬ ಹೆಸರಲ್ಲಿ ರಾಜಕೀಯ ಮಾಡಲು ಅವಕಾಶ ಇಲ್ಲ. ಇಷ್ಟೆಲ್ಲ ಹೇಳಿದರೂ ರಾಜಕೀಯ ನುಸುಳುವ ಸಾಧ್ಯತೆ ಇಲ್ಲದಿಲ್ಲ.
ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ: ಸರ್ಕಾರದ ನಿರ್ಧಾರ ನ್ಯಾಯಾಲಯಕ್ಕೆ ಒಪ್ಪಿತವೇ...? ಸಮ್ಮತವೇ...?
ನಿಮಗೆ ಲೇಖನ ಇಷ್ಟವಾದರೆ ನಿಮ್ಮ ಅಭಿಪ್ರಾಯಗಳನ್ನು ವಾಟ್ಸಾಪ್ ಮಾಡಿ... 9483456040