Sexual Harassment: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮಾಜಿ ಸರ್ಕಾರಿ ಅಭಿಯೋಜಕನಿಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಹೈಕೋರ್ಟ್
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮಾಜಿ ಸರ್ಕಾರಿ ಅಭಿಯೋಜಕನಿಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿರುವ ಮಾಜಿ ಸರ್ಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಕಳೆದ ಎರಡು ತಿಂಗಳಿನಿಂದ ಆರೋಪಿ ವಕೀಲ ರಾಜೇಶ್ ತಲೆ ಮರೆಸಿಕೊಂಡಿದ್ದು, ಆರೋಪಿಯನ್ನು ಹಿಡಿಯಲು ನಾಲ್ಕು ತಂಡಗಳನ್ನು ರಚಿಸಿರುವ ಮಂಗಳೂರು ಪೊಲೀಸರು ಇದುವರೆಗೂ ಯಾವುದೇ ಯಶಸ್ಸು ಕಂಡಿಲ್ಲ.
ರಾಜೇಶ್ ಪರವಾಗಿ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಹಾಕಲಾಗಿತ್ತು. ಅದು ತಿರಸ್ಕೃತಗೊಂಡ ಬೆನ್ನಲ್ಲೇ ಕರ್ನಾಟಕ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಕೋರಲಾಯಿತು.
ಇದೀಗ, ರಾಜ್ಯ ಹೈಕೋರ್ಟ್ ಕೂಡ ವಕೀಲ ರಾಜೇಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಆರೋಪಿ ರಾಜೇಶ್ ಗೆ ಸುಪ್ರೀಂ ಕೋರ್ಟಿಗೆ ಹೋಗುವ ಹೊರತು ಶರಣಾಗತಿಯೊಂದೇ ಏಕೈಕ ದಾರಿ ಎಂಬಂತಾಗಿದೆ.
ಇದೇ ವೇಳೆ, ಆರೋಪಿ ಕೆ.ಎಸ್.ಎನ್. ರಾಜೇಶ್ ಅವರಿಗೆ ತಲೆ ಮರೆಸಿಕೊಳ್ಳಲು ಸಹಕರಿಸಿದ್ದ ಮತ್ತು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಪವಿತ್ರ ಆಚಾರ್ ಮತ್ತು ಅನಂತ್ ಭಟ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿ ರಾಜೇಶ್ ಅವರ ಬ್ಯಾಂಕ್ ಖಾತೆಗಳನ್ನು ಸ್ತಂಬನ ಮಾಡಲಾಗಿದ್ದು, ಮನೆಯನ್ನು ಹಲವು ಬಾರಿ ಸರ್ಚ್ ವಾರೆಂಟ್ ಮೂಲಕ ತಪಾಸಣೆ ಮಾಡಲಾಗಿದೆ.
ಆರೋಪಿಗೆ ಸಹಕಾರ ನೀಡಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳೂ ಅಮಾನತುಗೊಂಡಿದ್ದು, ಇಲಾಖಾ ತನಿಖೆಯನ್ನು ಎದುರಿಸುತ್ತಿದ್ದಾರೆ.