Bank Panel-HC Judgement- ಬ್ಯಾಂಕ್ ಪ್ಯಾನೆಲ್ ವಕೀಲರ ನೇಮಕ ರದ್ದು ಆ ಬ್ಯಾಂಕಿನ ಪರಮಾಧಿಕಾರ: ಕರ್ನಾಟಕ ಹೈಕೋರ್ಟ್ ಆದೇಶ
ಬ್ಯಾಂಕ್ ಪ್ಯಾನೆಲ್ ವಕೀಲರ ನೇಮಕ ರದ್ದು ಆ ಬ್ಯಾಂಕಿನ ಪರಮಾಧಿಕಾರ: ಕರ್ನಾಟಕ ಹೈಕೋರ್ಟ್ ಆದೇಶ
ಬ್ಯಾಂಕ್ ತನ್ನ ಪರ ವಕೀಲರ ತಂಡ(ಪ್ಯಾನೆಲ್)ದಲ್ಲಿ ಸೇರಿಸಿಕೊಳ್ಳುವುದು ಮತ್ತು ಕೈಬಿಡುವುದು ಆ ಬ್ಯಾಂಕಿನ ಪರಮಾಧಿಕಾರ. ಇಂತಹ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
WP 22279/2021 ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲ ತಿಮ್ಮಣ್ಣ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.
ತಿಮ್ಮಣ್ಣ ಅವರನ್ನು 2021ರ ಸೆಪ್ಟೆಂಬರ್ 27ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಕೀಲರ ತಂಡ (ಪ್ಯಾನೆಲ್)ನಿಂದ ಕೈಬಿಟ್ಟಿತ್ತು.
ಯಾವುದೇ ಮುನ್ಸೂಚನೆ ನೀಡದೆ, ನೋಟೀಸ್ ಕೂಡ ಕೊಡದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ಬ್ಯಾಂಕಿನ ಈ ನಿರ್ಧಾರದಿಂದ ತಮಗೆ ಆರ್ಥಿಕವಾಗಿ ನಷ್ಟ ಸಂಭವಿಸಿದೆ ಎಂದು ಬ್ಯಾಂಕ್ ನಿರ್ಧಾರವನ್ನು ಪ್ರಶ್ನಿಸಿ ತಿಮ್ಮಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಕೀಲರನ್ನು ಪ್ಯಾನೆಲ್‌ಗೆ ಸೇರಿಸಿಕೊಳ್ಳುವುದು ಮತ್ತು ಬಿಡುವುದು ಬ್ಯಾಂಕ್‌ನ ವಿವೇಚನೆಗೆ ಬಿಟ್ಟಿರುವ ವಿಚಾರ. ಕಕ್ಷಿದಾರ ಮತ್ತು ವಕೀಲರ ನಡುವಿನ ಸಂಬಂಧದಂತೆಯೇ ಇದೂ ಒಂದು ಸಂಬಂಧವಾಗಿದೆ. ಇಂತಹ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು ಎಂದು ತೀರ್ಪು ನೀಡಿ ಅರ್ಜಿಯನ್ನು ವಜಾಗೊಳಿಸಿದೆ.