BCI Clarifies on new enrollment- ಪರೀಕ್ಷೆ ಬರೆದು ಪಡೆದ ಪದವಿ ಮಾತ್ರ ಪರಿಗಣನೆ: ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸ್ಪಷ್ಟನೆ
ಪರೀಕ್ಷೆ ಬರೆದು ಪಡೆದ ಪದವಿ ಮಾತ್ರ ಪರಿಗಣನೆ: ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸ್ಪಷ್ಟನೆ
LLB ಪರೀಕ್ಷೆ ನಡೆಸದಿರಿ ಎನ್ನಲು ವಿದ್ಯಾರ್ಥಿಗಳಿಗೆ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಮೂರು ಮತ್ತು ಐದು ವರ್ಷದ ಕಾನೂನು ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್‌ಎಲ್‌ಯು) ಅನುಮತಿಸಿ ನವೆಂಬರ್ 24ರಂದು ಹೊರಡಿಸಿದ್ದ ಆದೇಶದಲ್ಲಿ ಮಾರ್ಪಾಡು ಮಾಡಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಈ ಪ್ರಕರಣದಲ್ಲಿ ವಾದ ಮಂಡಿಸಿದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
"ಪರೀಕ್ಷೆ ನಡೆಸದೇ ನೀಡುವ ಪದವಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪರಿಗಣಿಸದಿರಲು ನಿರ್ಧರಿಸಿದೆ. ಈ ವಿಚಾರದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ನಿಲುವು ಸ್ಪಷ್ಟವಾಗಿದೆ. ಪರೀಕ್ಷೆ ನಡೆಸುವುದು ಅಥವಾ ನಡೆಸದೇ ಇರುವುದು ವಿಶ್ವವಿದ್ಯಾಲಯಕ್ಕೆ ಬಿಟ್ಟ ವಿಚಾರ. ಆದರೆ, ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳಿಗೆ ನೀಡುವ ಪದವಿಯನ್ನು ಮಾತ್ರ ಬಿಸಿಐ ಪರಿಗಣಿಸಲಿದೆ” ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.
ಪ್ರಕರಣದಲ್ಲಿ ವಿಶ್ವವಿದ್ಯಾಲಯ ಪರ ಹಿರಿಯ ವಕೀಲ ಗಣಪತಿ ಭಟ್ ಮತ್ತು ಭಾರತೀಯ ವಕೀಲರ ಪರಿಷತ್ (ಬಿಸಿಐ) ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿದ್ದರು.
ಹೈಕೋರ್ಟ್ ನ್ಯಾಯ ಪೀಠದ ಮುಂದೆ ಮಧ್ಯಂತರ ಆದೇಶವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಪೀಲು ಮತ್ತು ತಕರಾರು ಸಲ್ಲಿಸಲು ಕೆಎಸ್‌ಎಲ್‌ಯುಗೆ ಸೂಚಿಸಲಾಯಿತು. ಅರ್ಹತೆ ಆಧಾರದಲ್ಲಿ ಈ ಅರ್ಜಿಗಳನ್ನು ನಿರ್ಧರಿಸಲು ಏಕಸದಸ್ಯ ಪೀಠಕ್ಕೆ ನಿರ್ದೇಶಿಸಬೇಕು. ಹಾಗಾದಾಗ ಮಾತ್ರ ಪಕ್ಷಕಾರರ ಅಂತಿಮ ವಾದ ಆಲಿಸಬಹುದು. ಇದರ ಮಧ್ಯೆ, ವಿದ್ಯಾರ್ಥಿಗಳ ಪರ ಹಾಜರಾದ ವಕೀಲರು, ವಿಶ್ವವಿದ್ಯಾಲಯವು ಎಲ್‌ಎಲ್‌ಬಿ ಪರೀಕ್ಷೆಗಳನ್ನು ನಡೆಸಬಾರದು ಎಂದು ಮನವಿ ಮಾಡಿದರು ಹಾಗೂ ನ್ಯಾಯಾಲಯದ ಮಧ್ಯಪ್ರವೇಶವನ್ನು ಕೋರಿದರು.
ಆ ಸಂದರ್ಭದಲ್ಲಿ, "ಯಾವುದೇ ಪರೀಕ್ಷೆ ಬರೆಯದೆ ವಕೀಲರಾಗಲು ನೀವು ಬಯಸುತ್ತೀರಾ? ನೀವು ಹೈಕೋರ್ಟ್ ನ್ಯಾಯಮೂರ್ತಿಗಳಾಗಬಹುದು. ಏಕೆಂದರೆ ನ್ಯಾಯಮೂರ್ತಿಯಾಗಲು ಯಾವುದೇ ಪರೀಕ್ಷೆ ಬರೆಯಬೇಕಿಲ್ಲ” ಎಂದು ಹಾಸ್ಯಮಿಶ್ರಿತವಾದ ದಾಟಿಯಲ್ಲಿ ಹೇಳಿದ ನ್ಯಾಯಪೀಠ, ಎಲ್‌ಎಲ್‌ಬಿ ಪರೀಕ್ಷೆ ನಡೆಸಬೇಡಿ ಎಂದು ಹೇಳಲು ವಿದ್ಯಾರ್ಥಿಗಳಿಗೆ ಹಕ್ಕಿಲ್ಲ ಎಂದು ತೀರ್ಪು ನೀಡಿ ಮಧ್ಯಂತರ ಆದೇಶ ತೆರವು ಮಾಡಲು ಹೈಕೋರ್ಟ್ ನಿರಾಕರಿಸಿತು.