SC upheld the punishment of Journalist in Advocate defamation case- ಚಿಕ್ಕಮಗಳೂರು ವಕೀಲರ ಮಾನಹಾನಿ ಲೇಖನ: ಪತ್ರಕರ್ತನಿಗೆ ಶಿಕ್ಷೆ ಸಮರ್ಥಿಸಿದ ಸುಪ್ರೀಂ ಕೋರ್ಟ್
ಚಿಕ್ಕಮಗಳೂರು ವಕೀಲರ ಮಾನಹಾನಿ ಲೇಖನ: ಪತ್ರಕರ್ತನಿಗೆ ಶಿಕ್ಷೆ ಸಮರ್ಥಿಸಿದ ಸುಪ್ರೀಂ ಕೋರ್ಟ್
ವಕೀಲರೊಬ್ಬರ ಆಧಾರರಹಿತ ಮಾನಹಾನಿಕರ ಲೇಖನ ಪ್ರಕಟಿಸಿದ ಪತ್ರಕರ್ತರೊಬ್ಬರಿಗೆ ಶಿಕ್ಷೆ ನೀಡಿರುವುದನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ.
ಮಾನಹಾನಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ಶಿಕ್ಷೆಯ ಪ್ರಮಾಣವನ್ನು ಕರ್ನಾಟಕ ಹೈಕೋರ್ಟ್ ಕಡಿಮೆಗೊಳಿಸಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಹಾಗೂ ಶಿಕ್ಷೆಯನ್ನು ರದ್ದುಪಡಿಸಬೇಕೆಂದು ಕೋರಿ ಸದ್ರಿ ಪತ್ರಕರ್ತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಆದೇಶಿಸಿದ್ದು, ಹೈಕೋರ್ಟ್ ಶಿಕ್ಷೆಯ ಪ್ರಮಾಣ ದೊಡ್ಡದಲ್ಲ ಎಂದು ಹೇಳಿದೆ.
ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ, ಶಿಕ್ಷೆ ರದ್ದು ಕೋರಿ ಪತ್ರಕರ್ತ ಡಿ. ಎಸ್. ವಿಶ್ವನಾಥ ಶೆಟ್ಟಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಮಗೆ ಯಾವುದೇ ಸಕಾರಣ ಕಾಣುತ್ತಿಲ್ಲ. ಹೀಗಾಗಿ, ಶಿಕ್ಷೆ ಅವಧಿ ಪೂರೈಸಲು ಎರಡು ವಾರಗಳಲ್ಲಿ ವಿಚಾರಣಾ ನ್ಯಾಯಾಲಯದ ಎದುರು ಹಾಜರಾಗಬೇಕು ಎಂದು ಶೆಟ್ಟಿ ಅವರಿಗೆ ಸುಪ್ರೀಂ ನಿರ್ದೇಶನ ನೀಡಿದೆ.
ಲೇಖನದಲ್ಲಿನ ಪದ ಬಳಕೆಗೆ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮೌಖಿಕವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾನು ಒಬ್ಬ ಪತ್ರಕರ್ತರಾಗಿ ಇಂತಹ ಪದಬಳಕೆ ಮಾಡಿರುವುದನ್ನು ಗಮನಿಸಿದರೆ ಶಿಕ್ಷೆ ಪ್ರಮಾಣ ಅಷ್ಟೇನು ದೊಡ್ಡದಲ್ಲ ಎಂದು ಸಿಜೆಐ ಎನ್.ವಿ. ರಮಣ ಅಭಿಪ್ರಾಯಟ್ಟಿದ್ದಾರೆ.
ಘಟನೆ ಏನು ಗೊತ್ತೇ...?
ಕೊಪ್ಪದ ವಕೀಲ ಟಿ. ಎನ್. ರತ್ನಾಕರ್ ಎಂಬವರ ವಿರುದ್ಧ "ತುಂಗಾ ವಾರ್ತೆ" ವಾರಪತ್ರಿಕೆ ಸಂಪಾದಕ ಹಾಗೂ ಪ್ರಕಾಶಕ ವಿಶ್ವನಾಥ ಶೆಟ್ಟಿ ಎಂಬಾತ ಆಧಾರರಹಿತ ಹಾಗೂ ಮಾನಹಾನಿಕರ ಲೇಖನ ಪ್ರಕಟಿಸಿದ್ದ. ಈ ಲೇಖನದಲ್ಲಿ ಆತ ಕೆಟ್ಟ ಭಾಷೆ, ಅಸಹ್ಯ ಪದಬಳಕೆ ಮಾಡಿದ್ದ.
ಈ ಹಿನ್ನೆಲೆಯಲ್ಲಿ ರತ್ನಾಕರ್ ಅವರು ಸ್ಥಳೀಯ ನ್ಯಾಯಾಲಯದಲ್ಲಿ ಪತ್ರಕರ್ತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಮಾನಹಾನಿ ಪ್ರಕರಣದಲ್ಲಿ ಪತ್ರಕರ್ತನಿಗೆ ಆರು ಲಕ್ಷ ರೂ. ಜುಲ್ಮಾನೆ ಮತ್ತು 12 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಶೆಟ್ಟಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ. 2015ರಲ್ಲಿ ಹೈಕೋರ್ಟ್ ಆರೋಪಿ ಅರ್ಜಿದಾರನಿಗೆ ನೀಡಲಾದ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿತ್ತು.
ಆತನಿಗೆ 57 ವರ್ಷ ವಯಸ್ಸಾಗಿದೆ ಹಾಗೂ ಕುಟುಂಬ ನಿರ್ವಹಣೆ ಜವಾಬ್ದಾರಿ ಕೂಡ ಇದೆ ಎಂಬ ಕಾರಣವನ್ನು ಪರಿಗಣಿಸಿತ್ತು.
ಕರ್ನಾಟಕ ಹೈಕೋರ್ಟ್ ಆರೋಪಿ ಪತ್ರಕರ್ತನಿಗೆ ಒಂದು ತಿಂಗಳು ಜೈಲು ಹಾಗೂ 50 ಸಾವಿರ ದಂಡ ವಿಧಿಸಿತ್ತು.
ಈ ದಂಡದಲ್ಲಿ 40 ಸಾವಿರವನ್ನು ವಕೀಲರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿತ್ತು. ಆದರೆ, ಈ ಶಿಕ್ಷೆಯನ್ನೂ ರದ್ದುಗೊಳಿಸಬೇಕು ಎಂದು ಕೋರಿ ಶೆಟ್ಟಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದರು.