non disclosure of mental status of pre-marital stage : ಮದುವೆಗೆ ಮುನ್ನ ಪತ್ನಿಯ ಮಾನಸಿಕ ಅಸೌಖ್ಯ ಬಚ್ಚಿಟ್ಟಿದ್ದು ಪತಿಗೆ ಮಾಡಿದ ವಂಚನೆ: ದೆಹಲಿ ಹೈಕೋರ್ಟ್
ಮದುವೆಗೆ ಮುನ್ನ ಪತ್ನಿಯ ಮಾನಸಿಕ ಅಸೌಖ್ಯ ಬಚ್ಚಿಟ್ಟಿದ್ದು ಪತಿಗೆ ಮಾಡಿದ ವಂಚನೆ: ದೆಹಲಿ ಹೈಕೋರ್ಟ್
ಮದುವೆಯ ಪೂರ್ವದಲ್ಲಿ ಪತ್ನಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂಬ ಅಂಶವನ್ನು ತಿಳಿಸದಿರುವುದು ಪತಿಗೆ ಮಾಡಿದ ಮಹಾ ವಂಚನೆಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ 16 ವರ್ಷಗಳ ಹಿಂದೆ ನಡೆದಿದ್ದ ಮದುವೆಯನ್ನು ರದ್ದುಗೊಳಿಸಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 12ರ ಅಡಿ ವಿಚ್ಛೇದನ ಕೋರಿ ಸಂದೀಪ್ ಅಗರ್ವಾಲ್ ಸಲ್ಲಿಸಿದ್ದ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ವಜಾ ಮಾಡಿತ್ತು. ಈ ಆದೇಶ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ನಡೆಸಿತು.
'ಸುದೀರ್ಘ 16 ವರ್ಷಗಳಿಂದ ಪತಿ ಸಂದೀಪ್ ಅವರ ಬದುಕನ್ನು ಹಾಳು ಮಾಡಲಾಗಿದೆ. ಯಾವುದೇ ನಿರ್ಧಾರ ಕೈಗೊಳ್ಳಲಾಗದೇ ಅವರು ಈ ಸಂಬಂಧದಲ್ಲಿ ಸಿಲುಕಿಕೊಂಡಿದ್ದಾರೆ. ಇದೇ ಕಾರಣದಿಂದ ಪತಿಯು ತನ್ನ ಜೀವಿತಾವಧಿಯ ಬಹು ಅಮೂಲ್ಯ ವರುಷಗಳನ್ನು ಕಳೆದುಕೊಂಡಿದ್ದಾರೆ. ಒಂದು ವೇಳೆ, ಹೀಗೆ ಆಗದಿದ್ದರೆ ಅವರು ವೈವಾಹಿಕ ಬದುಕಿನ ಸುಖ, ಆನಂದ ಮತ್ತು ತೃಪ್ತಿ ಅನುಭವಿಸುತ್ತಿದ್ದರು' ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
'ಮದುವೆ ಮುನ್ನ ಪ್ರತಿವಾದಿ ಪತ್ನಿ ತನ್ನ ಮಾನಸಿಕ ಆರೋಗ್ಯದ ಅಸಮತೋಲನದ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಮೇಲ್ಮನವಿದಾರರಾದ ಪತಿ ಆರೋಪಿಸಿದ್ದಾರೆ. ಇದು ಮೇಲ್ಮನವಿದಾರರನ್ನು ಗುರಿಯಾಗಿಸಿರುವ ವಂಚನೆಯಲ್ಲದೇ ಬೇರೇನೂ ಅಲ್ಲ' ಎಂದು ಪೀಠ ಹೇಳಿದೆ.
'ಅರ್ಜಿದಾರರು 2005ರಲ್ಲಿ ಯುವತಿಯನ್ನು ವಿವಾಹವಾಗಿದ್ದು, ಆ ಸಂದರ್ಭದಲ್ಲಿ ಆಕೆ ತೀವ್ರ ತರಹದ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು ಎಂಬ ವಿಚಾರವನ್ನು ಕುಟುಂಬದವರು ಮುಚ್ಚಿಟ್ಟಿದ್ದರು. ನಮ್ಮ ಮನೆಯಲ್ಲಿ ನೆಲೆಸಿದ್ದಾಗ ಮತ್ತು ಮಧುಚಂದ್ರಕ್ಕೆ ತೆರಳಿದ್ದಾಗ ಪತ್ನಿ ವಿಚಿತ್ರವಾಗಿ ವರ್ತಿಸಿದ್ದರು. ಹೀಗಾಗಿ, ಏಮ್ಸ್‌ನಲ್ಲಿನ ನರ ಮನೋವಿಜ್ಞಾನಿ ಸೇರಿದಂತೆ ಹಲವು ವೈದ್ಯರ ಬಳಿ ಕರೆದೊಯ್ಯಲಾಯಿತು. ಪತ್ನಿ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಆಗ ತಿಳಿಸಿದ್ದರು' ಎಂದು ಪತಿ ವಾದಿಸಿದ್ದರು.
'ಇದನ್ನು ಪತ್ನಿಯ ಮನೆಯವರಿಗೆ ತಿಳಿಸಿದಾಗ ಮದುವೆಯಾದ ಕೇವಲ 9 ವಾರಗಳಲ್ಲೇ ಆಕೆಯನ್ನು ಅವರ ಕುಟುಂಬದವರು ಕರೆದೊಯ್ದರು' ಎಂದು ಹೇಳಿದ್ದರು.
'ತಾನು ಯಾವುದೇ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿಲ್ಲ. ಕಾಲೇಜು ದಿನಗಳಲ್ಲಿ ತಲೆನೋವು ಬರುತ್ತಿದ್ದರಿಂದ ಶಿಕ್ಷಣ ಮೊಟಕುಗೊಳಿಸಿದೆ. ಇದನ್ನು ಪತಿಯ ಕುಟುಂಬದವರಿಗೆ ತಿಳಿಸಲಾಗಿತ್ತು' ಎಂದು ಪತ್ನಿ ತನ್ನ ಲಿಖಿತ ಹೇಳಿಕೆಯಲ್ಲಿ ವಾದಿಸಿದ್ದರು.
'ಹೈಕೋರ್ಟ್ ನಿರ್ದೇಶನದ ಮೇರೆಗೆ ವೈದ್ಯಕೀಯ ತಪಾಸನೆಗೆ ಪತ್ನಿ ನಿರಾಕರಿಸಿದ್ದಾರೆ. ಇದರಿಂದ ಅರ್ಜಿದಾರರ ಆರೋಪ ಸಾಬೀತುಪಡಿಸಲು ಅವಕಾಶ ಇಲ್ಲದಂತಾಗಿದೆ' ಎಂದು ನ್ಯಾಯಾಲಯ ಹೇಳಿ ಅಂತಿಮವಾಗಿ ವಿವಾಹವನ್ನು ರದ್ದುಪಡಿಸಿತು. ಜೊತೆಗೆ, ಪತಿಯ ಕಾನೂನು ವೆಚ್ಚವೆಂದು ರೂ.10 ಸಾವಿರ ದಂಡ ಪಾವತಿಸಲು ಆದೇಶದಲ್ಲಿ ಹೇಳಿತು.