Kerala HC permits online marriage - ಒಮಿಕ್ರಾನ್ ಭೀತಿ: ಆನ್‌ಲೈನ್ ವಿವಾಹಕ್ಕೆ ಕೇರಳ ಹೈಕೋರ್ಟ್ ಸಮ್ಮತಿ
ಒಮಿಕ್ರಾನ್ ಭೀತಿ: ಆನ್‌ಲೈನ್ ವಿವಾಹಕ್ಕೆ ಕೇರಳ ಹೈಕೋರ್ಟ್ ಸಮ್ಮತಿ
ಒಮಿಕ್ರಾನ್ ಭೀತಿಯಿಂದ ಮದುವೆಯಾಗಲು ಸಂಕಷ್ಟ ಅನುಭವಿಸುತ್ತಿದ್ದ ದಂಪತಿ ನೆರವಿಗೆ ಕೇರಳ ಹೈಕೋರ್ಟ್ ಧಾವಿಸಿದೆ.
ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡ್‌ಗೆ ತೆರಳಿದ್ದ ವಕೀಲ ಅನಂತ ಕೃಷ್ಣನ್ ಹರಿಕುಮಾರನ್ ನಾಯರ್ ಹಾಗೂ ಕೋಯಿಕ್ಕೊಡ್ ಮೂಲದ ವಕೀಲೆ ರಿಂಟು ಥಾಮಸ್ ಮದುವೆ ಡಿ. 23ರಂದು ನಡೆಯಬೇಕಿತ್ತು. ಅದಕ್ಕಾಗಿ ಅನಂತ ಕೃಷ್ಣನ್ ಡಿ. 22ರಂದು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಅವರು ದೇಶಕ್ಕೆ ಬರಲು ಆಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ವಧು ರಿಂಟು ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಆನ್‌ಲೈನ್ ಮೂಲಕ ವಿವಾಹ ನೋಂದಣಿಗೆ ಮನವಿ ಮಾಡಿದ್ದರು. ಈ ಬಗ್ಗೆ ತಿರುವನಂತಪುರದ ಮಲಯಂಕಿಲ್ ಉಪ ನೋಂದಣಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ಅರ್ಜಿಯ ವಿಚಾರಣೆ ನಡೆಸದಿ ನ್ಯಾ. ಎನ್ ನಗರೇಶ್ ಪೀಠ, ಪಕ್ಷಕಾರರು ಭೌತಿಕವಾಗಿ ಮದುವೆಯಾಗಲು ಸಾಧ್ಯವಿಲ್ಲದಿದ್ದಾಗ ಆನ್‌ಲೈನ್ ಮದುವೆಗೆ ಅವಕಾಶ ನೀಡಬೇಕು ಎಂಬ ಹೈಕೋರ್ಟ್‌ನ ಈ ಹಿಂದಿನ ಆದೇಶವನ್ನು ಉಲ್ಲೇಖಿಸಿ ಮನವಿಯನ್ನು ಪುರಸ್ಕರಿಸಿದರು.
ಈ ಹಿನ್ನೆಲೆಯಲ್ಲಿ ವಿಶೇಷ ವಿವಾಹ ಕಾಯಿದೆಯಡಿ ಮದುವೆಯನ್ನು ಆನ್‌ಲೈನ್ ವಿಧಾನದಲ್ಲಿ ಶಾಸ್ತ್ರೋಕ್ತವಾಗಿ ಆಚರಿಸಲು ಅಥವಾ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವಂತೆ ವಿವಾಹ ಅಧಿಕಾರಿಗೆ ಸೂಚಿಸಿತು.
ಆನ್‌ಲೈನ್ ವಿವಾಹದ ವೇಳೆ ಸಾಕ್ಷಿಗಳು ಭೌತಿಕವಾಗಿ ಅಧಿಕಾರಿಗಳ ಮುಂದೆ ಹಾಜರಿದ್ದು ಮದುವೆಯಾಗುತ್ತಿರುವವರನ್ನು ಗುರುತಿಸಬೇಕು. ವಿವಾಹಾಧಿಕಾರಿ ಮದುವೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಆನ್‌ಲೈನ್ ವಿವಾಹಕ್ಕೆ ವೇದಿಕೆ ಕಲ್ಪಿಸಬೇಕು. ಇದನ್ನು ಪಕ್ಷಕಾರರಿಗೆ ಮುಂಚಿತವಾಗಿ ತಿಳಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.