-->
Police Staff to have Body Camera- ಪೊಲೀಸರಿಗೆ ಶೀಘ್ರದಲ್ಲೇ ಬಾಡಿ ಕ್ಯಾಮೆರಾ: ಹೈಕೋರ್ಟ್ ಮಾಹಿತಿ ನೀಡಿದ ಸರ್ಕಾರ

Police Staff to have Body Camera- ಪೊಲೀಸರಿಗೆ ಶೀಘ್ರದಲ್ಲೇ ಬಾಡಿ ಕ್ಯಾಮೆರಾ: ಹೈಕೋರ್ಟ್ ಮಾಹಿತಿ ನೀಡಿದ ಸರ್ಕಾರ

ಪೊಲೀಸರಿಗೆ ಶೀಘ್ರದಲ್ಲೇ ಬಾಡಿ ಕ್ಯಾಮೆರಾ: ಹೈಕೋರ್ಟ್ ಮಾಹಿತಿ ನೀಡಿದ ಸರ್ಕಾರ





ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಪರಿಣಾಮಕಾರಿ ಮೇಲ್ವಿಚಾರಣೆ ದೃಷ್ಟಿಯಿಂದ ಪೊಲೀಸರಿಗೆ "ಬಾಡಿ ಕ್ಯಾಮೆರಾ" ಬರಲಿದೆ. ಹಾಗಂತ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.




ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಮತ್ತು ಕಾನೂನು ಸುವ್ಯವಸ್ಥೆ ಸುಧಾರಣೆಗೆ ಪೊಲೀಸರು ಬಾಡಿ ಕ್ಯಾಮೆರಾ ಧರಿಸುವಂತೆ ನಿರ್ದೇಶಿಸಬೇಕು ಎಂದು ವಕೀಲರೊಬ್ಬರು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.



ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾ. ಸಚಿನ್ ಶಂಕರ್ ಮಗ್ದುಂ ಅವರಿದ್ಧ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತು.




ಅರ್ಜಿಗೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಪೊಲೀಸರು ಬಾಡಿ ಕ್ಯಾಮೆರಾ ಧರಿಸುವ ವಿಚಾರವಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನ್ಯಾಯ ಪೀಠಕ್ಕೆ ಮಾಹಿತಿ ನೀಡಿದರು.



ಕ್ಯಾಮೆರಾ ಖರೀದಿ ಮತ್ತು ಅದರ ನಿರ್ವಹಣೆಗೆ ಟೆಂಡರ್ ಕರೆಯಲಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬಗ್ಗೆ ವರ್ಕ್ ಆರ್ಡರ್ (ಕಾರ್ಯಾದೇಶ) ಮಾಡಲಾಗಿದೆ ಎಂದು ಮನವಿ ಮಾಡಿದರು.



ಸರ್ಕಾರದ ಪರ ವಾದ ಪರಿಗಣಿಸಿದ ಪೀಠ, ಈ ಬಗ್ಗೆ ಕ್ರಮ ಕೈಗೊಂಡಿರುವ ವಿವರ ನೀಡುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.



ಘಟನೆ ವಿವರ

ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಹಲವೆಡೆ ಪೊಲೀಸರು ರಸ್ತೆಗಳಿದವರ ಬಳಿ ಯಾವುದೇ ವಿವರಣೆ ಕೇಳದೆ ಥಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಕ್ರಮ ಕೋರಿ ಹೈಕೋರ್ಟ್ ಗೆ ಪಿಐಎಲ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು.




ಆದರೆ, ಪೊಲೀಸರು ಹಲ್ಲೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಆದರೆ, ವಕೀಲೆ ಗೀತಾ ಮಿಶ್ರಾ 2020 ಡಿಸೆಂಬರ್ ನಲ್ಲಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿ, ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸ್ ಸಿಬ್ಬಂದಿ ಮಾಡುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. 

ಪೊಲೀಸರ ಕರ್ತವ್ಯ ನಿರ್ವಹಣೆಯನ್ನು ಪೊಲೀಸ್ ಠಾಣೆಯಿಂದಲೇ ಹಿರಿಯ ಅಧಿಕಾರಿಗಳು ಗಮನಿಸಿ ಮೇಲ್ವಿಚಾರಣೆ ನಡೆಸಬಹುದು ಎಂದು ವಾದಿಸಿದ್ದರು.



ಅದೇ ರೀತಿ, ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಪ್ರಶ್ನಿಸಿದ ಪೊಲೀಸರ ಮೇಲೆ ತಪ್ಪಿತಸ್ಥರೇ ಆಕ್ರಮಣ ಮಾಡಿರುವ ಘಟನೆಗಳು ಜರುಗಿವೆ. ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸರಿಗೂ ರಕ್ಷಣೆ ಸಿಗಲಿದೆ. ತಪ್ಪಿತಸ್ಥರಿಗೂ ಭಯ ಹುಟ್ಟುತ್ತದೆ. ಆದ್ದರಿಂದ, ಬೆಂಗಳೂರು ನಗರ ಪೊಲೀಸರಿಗಾಗಿ ಈಗಾಗಲೇ ಖರೀದಿಸಿರುವ 50 ಬಾಡಿ ಕ್ಯಾಮರಾಗಳನ್ನು ಕೂಡಲೇ ಬಳಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿಕೊಂಡಿದ್ದರು.



ರಾಜ್ಯಾದ್ಯಂತ ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿ ಕ್ಯಾಮರಾ ಖರೀದಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿತ್ತು.

Ads on article

Advertise in articles 1

advertising articles 2

Advertise under the article