-->
Admin not responsible for members post in Watsapp- ವಾಟ್ಸಾಪ್ ಗ್ರೂಪ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್: ಅಡ್ಮಿನ್ ಹೊಣೆಯಲ್ಲ ಎಂದ ಹೈಕೋರ್ಟ್

Admin not responsible for members post in Watsapp- ವಾಟ್ಸಾಪ್ ಗ್ರೂಪ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್: ಅಡ್ಮಿನ್ ಹೊಣೆಯಲ್ಲ ಎಂದ ಹೈಕೋರ್ಟ್

ವಾಟ್ಸಾಪ್ ಗ್ರೂಪ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್: ಅಡ್ಮಿನ್ ಹೊಣೆಯಲ್ಲ ಎಂದ ಹೈಕೋರ್ಟ್





ವಾಟ್ಸಾಪ್ ಗ್ರೂಪ್ ಗಳಲ್ಲಿ ಸದಸ್ಯರು ಹಾಕುವ ಆಕ್ಷೇಪಾರ್ಹ ಯಾ ಕಾನೂನು ಬಾಹಿರ ಅಸಂಬದ್ಧ ಪೋಸ್ಟ್ ಗಳಿಗೆ ಆ ಗ್ರೂಪ್‌ನ ಅಡ್ಮಿನ್ ಹೊಣೆಗಾರನಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, ಈ ಬಗ್ಗೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಿಂದ ಅಡ್ಮಿನ್ ಹೆಸರನ್ನು ಕೈಬಿಡುವಂತೆ ಪೊಲೀಸರಿಗೆ ಆದೇಶಿಸಿದೆ.



ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ಸದಸ್ಯರು ಹಾಕಿದ್ದ ಆಕ್ಷೇಪಾರ್ಹ ಪೋಸ್ಟ್ ಗೆ ಕುರಿತು ದಾಖಲಾದ ಕ್ರಿಮಿನಲ್ ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ಕೋರಿ ತಮಿಳುನಾಡಿನ ವಕೀಲ ಆರ್. ರಾಜೇಂದ್ರನ್ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯ ಪೀಠ ಈ ಆದೇಶ ಮಾಡಿದೆ.



ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಸದಸ್ಯರ ಸೇರ್ಪಡೆ ಹಾಗೂ ಹೊರಗಟ್ಟುವ ಅಧಿಕಾರವಷ್ಟೇ ಇದೆ. ಗ್ರೂಪ್ ನಲ್ಲಿ ಯಾವ ವಿಷಯಗಳನ್ನು ಪೋಸ್ಟ್ ಮಾಡಬೇಕು ಅಥವಾ ನಿರ್ಬಂಧಿಸಬೇಕಾದ ವಿಷಯಗಳು ಯಾವುವು ಎಂಬುದನ್ನು ಅವರು ನಿಯಂತ್ರಿಸಲು ಸಾಧ್ಯವಿಲ್ಲ. ಹಾಗೆಯೇ, ಯಾರು ಯಾವ ರೀತಿಯ ಪೋಸ್ಟ್ ಗಳನ್ನು ಹಾಕುತ್ತಾರೆ ಎಂದು ಮೊದಲೇ ಊಹಿಸಲು ಸಾಧ್ಯವಿಲ್ಲ. ಹೀಗಾಗಿ, ವಾಟ್ಸಾಪ್ ಗ್ರೂಪ್ ನಲ್ಲಿ ಬರುವ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಗಾರನಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.



"ಗ್ರೂಪ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪಿ ಜೊತೆ ಅಡ್ಮಿನ್ ಗೂ ಸಮಾನ ಉದ್ದೇಶವಿತ್ತು. ಆರೋಪಿ ಜೊತೆ ಸೇರಿ ಪೂರ್ವಯೋಜಿತ ಕೃತ್ಯದಲ್ಲಿ ಅಡ್ಮಿನ್ ಭಾಗಿಯಾಗಿದ್ದಾರೆ ಎಂಬ ಅಂಶಗಳು ಇಲ್ಲದಿದ್ದಾಗ ಮಾತ್ರ ಅಡ್ಮಿನ್ ಗಳನ್ನು ಹೊಣೆಗಾರರನ್ನಾಗಿ ಮಾಡಲಾಗದು" ಎಂದು ಪೀಠ ಸ್ಪಷ್ಟಪಡಿಸಿದೆ.



ಘಟನೆಯ ವಿವರ

ವಕೀಲ ಆರ್. ರಾಜೇಂದ್ರನ್ ರೂಪಿಸಿದ್ದ 'ಕರೂರ್ ಲಾಯರ್ಸ್' ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಪಚೈಯಪ್ಪನ್ ಎಂಬುವರು ಸಮುದಾಯಗಳ ನಡುವೆ ಕೆಟ್ಟ ಭಾವನೆ ಮೂಡಿಸುವ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಈ ಸಂಬಂಧ ಕರೂರು ಜಿಲ್ಲಾ ಪೊಲೀಸರು ಪೋಸ್ಟ್ ಹಾಕಿದ್ದ ಪಚೈಯಪ್ಪನ್ ಜತೆಗೆ ಗ್ರೂಪ್ ಅಡ್ಮಿನ್ ರಾಜೇಂದ್ರನ್ ವಿರುದ್ಧ ಐಪಿಸಿ ಸೆಕ್ಷನ್ 153 ಎ, 294ಬಿ ಅಡಿ FIR ದಾಖಲಿಸಿದ್ದರು.



FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ ವಕೀಲ ಆರ್. ರಾಜೇಂದ್ರನ್, ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ಆದ್ದರಿಂದ, ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ FIR ರದ್ದುಪಡಿಸಬೇಕು ಎಂದು ಕೋರಿದ್ದರು.



ಇದನ್ನು ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲರು, ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಗ್ರೂಪ್ ಸದಸ್ಯ ಪಚೈಯಪ್ಪನ್ ಅವರನ್ನು ಗ್ರೂಪ್ ಅಡ್ಮಿನ್ ರಾಜೇಂದ್ರನ್ ಗ್ರೂಪ್ ನಿಂದ ತೆಗೆದು ಹಾಕಿ ಮತ್ತೆ ಕೆಲವೇ ದಿನಗಳಲ್ಲಿ ಮತ್ತೆ ಗ್ರೂಪ್ ಗೆ ಸೇರಿಸಿದ್ದಾರೆ. ಇಬ್ಬರೂ ಒಪ್ಪಂದದ ಮೇರೆಗೆ ಪೋಸ್ಟ್ ಹಾಕಿರಬಹುದೆಂಬ ಅನುಮಾನ ಮೂಡಿಸುತ್ತದೆ. ಇದೇ ವೇಳೆ ರಾಜೇಂದ್ರನ್ ಅವರೇ ಪಚೈಯಪ್ಪನ್ ಹೆಸರಲ್ಲಿ ಪೋಸ್ಟ್ ಹಾಕಿರುವ ಸಾಧ್ಯತೆಯನ್ನೂ ತೋರಿಸುತ್ತದೆ. ಇನ್ನು ಈ ಪೋಸ್ಟನ್ನು ಯಾರು ಹಾಕಿದ್ದರು ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ವರದಿ ನಿರೀಕ್ಷಿಸಲಾಗುತ್ತಿದೆ. ಆದ್ದರಿಂದ, ಅರ್ಜಿದಾರರ ಮನವಿ ತಿರಸ್ಕರಿಸಬೇಕು ಎಂದು ಕೋರಿದ್ದರು.



ಕಿಶೋರ್ Vs ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣ(ಬಾಂಬೆ ಹೈಕೋರ್ಟ್)ದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಪೀಠ, ಅಡ್ಮಿನ್ ಕೇವಲ ಅಡ್ಮಿನ್ ಪಾತ್ರವನ್ನಷ್ಟೇ ನಿರ್ವಹಿಸಿದ್ದರೆ, ಸದಸ್ಯರ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಅಡ್ಮಿನ್ ಜವಾಬ್ದಾರರಲ್ಲ ಎಂದಿದೆ.



Ads on article

Advertise in articles 1

advertising articles 2

Advertise under the article