WILL DEED : ಮೃತ್ಯು ಪತ್ರ/ಉಯಿಲು/ವಿಲ್: ಸಂಪೂರ್ಣ ಮಾಹಿತಿ
WILL DEED : ಮೃತ್ಯು ಪತ್ರ/ಉಯಿಲು/ವಿಲ್: ಸಂಪೂರ್ಣ ಮಾಹಿತಿ
- ಮೃತ್ಯು ಪತ್ರ ಯಾರು ಬರೆಯಬಹುದು ..?
- ಮೃತ್ಯು ಪತ್ರ ರದ್ದು ಪರಿಸಬಹುದೆ..?
- ಯಾವ ವ್ಯಕ್ತಿ ಯಾವ ಆಸ್ತಿಯ ಉಯಿಲು ಮಾಡಬಹುದು..?
- ಯಾರು ವಿಶೇಷ ಮೃತ್ಯು ಪತ್ರ ಬರೆಯಬಹುದು..?
ಮನಸ್ಸಿದ್ದಲ್ಲಿ ಮಾರ್ಗ, ಉಯಿಲಿದ್ದಲ್ಲಿ ನೆಂಟ. ಇದು ಹಿರಿಯರ ಮಾತು. ಒಬ್ಬ ವ್ಯಕ್ತಿ, ತಾನು ಗಳಿಸಿದ ಆಸ್ತಿಯನ್ನು, ತನ್ನ ಮರಣಾನಂತರ ಅದು ಯಾರಿಗೆ ಹೋಗಬೇಕು ಎಂದು ಮನಸ್ಸು ಮಾಡಿ ನಿರ್ಧಾರ ತಾಳಿ, ಮನಸ್ಸಿನ ಆ ನಿರ್ಧಾರದಂತೆ ಬರೆದಿಡುವ ಒಂದು ಮಹತ್ವದ ದಾಖಲೆ.
ಮೃತ್ಯು ಪತ್ರವನ್ನು ಉಯಿಲು ಪತ್ರ ಎಂದೂ ಕರೆಯುತ್ತಾರೆ ಆಂಗ್ಲ ಭಾಷೆಯಲ್ಲಿ will deed ಎನ್ನುತ್ತಾರೆ.
ಒಬ್ಬ ವ್ಯಕ್ತಿಯು ತಾನು ಮರಣಾನಂತರ ತನ್ನ ಆಸ್ತಿಯ ವಿಲೇವಾರಿಗೆ ಸಂಬಂಧಿಸಿದಂತೆ ಇರುವ ತನ್ನ ಅಪೇಕ್ಷೆಯನ್ನು ಅಥವಾ ಸ್ವಇಚ್ಛೆಯನ್ನು ತಿಳಿಸಿ ಕಾನೂನಿನನ್ವಯ ಮಾಡುವ ಘೋಷಣೆಯೇ ಉಯಿಲು ಅಥವಾ ಮೃತ್ಯುಪತ್ರ ಎಂಬುದಾಗಿ ಭಾರತೀಯ ವಾರಸಾ ಅಧಿನಿಯಮ, 1925 Indian Succession Act, 1925 ದ ಕಲಂ 2ಎಚ್ ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ.
ಇದರ ಅನ್ವಯ ಉಯಿಲು(ಮೃತ್ಯು ಪತ್ರ) ಎಂದರೆ...
1) ಒಬ್ಬ ವ್ಯಕ್ತಿಯು ಕಾನೂನಿನನ್ವಯ ಮಾಡಿದ ಘೋಷಣೆ.
2) ಆ ಘೋಷಣೆಯು ಕಾನೂನುಬದ್ಧವಾಗಿ ಇರಬೇಕು: ಅಂದರೆ ವ್ಯಕ್ತಿಯು ಯಾವ ಆಸ್ತಿಯ ಸಂಬಂಧವಾಗಿ ಘೋಷಣೆಯನ್ನು ಮಾಡಿರುತ್ತಾನೆಯೋ ಅಂತಹ ಆಸ್ತಿಯನ್ನು ಆತನು ತನ್ನ ಜೀವಿತಾವಧಿಯಲ್ಲಿ ವಿಲೇವಾರಿ ಮಾಡುವ ಅಧಿಕಾರವನ್ನು ಹೊಂದಿರಬೇಕು.
3) ಆ ಘೋಷಣೆಯು ಆತನ ಮರಣಾನಂತರ ಆತನ ಆಸ್ತಿಯ ವಿಲೇವಾರಿಗೆ ಸಂಬಂಧಿಸಿದಂತೆ ಆತನ ಅಪೇಕ್ಷೆ ಅಥವಾ ಇಚ್ಛೆಯನ್ನು ತಿಳಿಸುವಂತಿರಬೇಕು.
4) ಅಲ್ಲದೆ ಆತನ ಉಯಿಲು ಮಾಡುವ ಸಾಮರ್ಥ್ಯ ಹೊಂದಿರತಕ್ಕದ್ದು.
5) ಉಯಿಲು ಲಿಖಿತ ರೂಪದಲ್ಲಿ ಇರಬೇಕು. ಆದರೆ ಉಯಿಲು ಕರ್ತನು (Testator) ಯುದ್ಧದಲ್ಲಿ ನಿರತನಾದ ಸೈನಿಕ, ವೈಮಾನಿಕ, ಅಥವಾ ನಾವಿಕ ದರ್ಜೆಯ ಅಧಿಕಾರಿ ಆಗಿದ್ದರೆ ಆತನು ವಿಶೇಷ ಸಂದರ್ಭಗಳಲ್ಲಿ ಭಾಗಶಃ ಲಿಖಿತ ಮತ್ತು ಭಾಗಶಃ ಮೌಖಿಕ ಅಥವಾ ಸಂಪೂರ್ಣವಾಗಿ ಮೌಖಿಕ ಉಯಿಲನ್ನು ಮಾಡಬಹುದು. (Partly written, Partly oral or Fully Oral). ಹೀಗೆ ಮಾಡಿದ ಮೃತ್ಯುಪತ್ರಕ್ಕೆ ವಿಶೇಷ ಉಯಿಲು (Privileged Pill) ಎಂದು ಹೇಳಲಾಗುತ್ತದೆ.
ವಿಶೇಷ ಉಯಿಲನ್ನು ಹೊರತುಪಡಿಸಿ ಇತರ ಉಯಿಲುಗಳೆಲ್ಲವೂ (UNPRIVILIGED WILL) ಲಿಖಿತರೂಪದಲ್ಲಿಯೇ ಇರತಕ್ಕದ್ದು.
ವಿಶೇಷವಲ್ಲದ ಉಯಿಲನ್ನು (Unprivileged Will) ಯಾರು ಮಾಡಬಹುದು?
ಅಪ್ರಾಪ್ತ ವಯಸ್ಕನಲ್ಲದ ಅಂದರೆ 18 ವರ್ಷಗಳ ವಯಸ್ಸನ್ನು ಪೂರೈಸಿದ ಮತ್ತು ಮಾನಸಿಕ ಸ್ವಾಸ್ಥ್ಯ ಹೊಂದಿರುವ ಯಾವುದೇ ವ್ಯಕ್ತಿ ವಿಶೇಷವಲ್ಲದ ಯಾ ಸಾಮಾನ್ಯ ಉಯಿಲನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ.
1) ತನ್ನ ಜೀವಿತ ಕಾಲದಲ್ಲಿ ಒಬ್ಬ ವಿವಾಹಿತ ಮಹಿಳೆ ತನ್ನ ಯಾವ ಆಸ್ತಿಯನ್ನು ವಿಲೇವಾರಿ (ಪರಭಾರೆ) (Sale, Lease, Rent, Mortgage, etc) ಮಾಡುವ ಹಕ್ಕು ಹೊಂದಿರುತ್ತಾರೋ ಅಂತಹ ಆಸ್ತಿಗೆ ಸಂಬಂಧಿಸಿದಂತೆ ಮೃತ್ಯು ಪತ್ರವನ್ನು ಮಾಡಬಹುದು.
2 ) ಕಿವುಡ, ಮೂಗ ಅಥವಾ ಕುರುಡ ವ್ಯಕ್ತಿ ತಾನು ಮಾಡುತ್ತಿರುವ ಕೃತ್ಯದ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದಲ್ಲಿ ಅಂತಹ ವ್ಯಕ್ತಿಯೂ ಸಹ ತನ್ನ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಉಯಿಲನ್ನು ಮಾಡಬಹುದು.
3) ಯಾವುದೇ ವ್ಯಕ್ತಿಯು ಕೆಲವು ಸಮಯದಲ್ಲಿ ಮಾತ್ರ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಮತ್ತೆ ಕೆಲವು ಸಮಯದಲ್ಲಿ ಸ್ವಸ್ಥ ನಾಗಿರುತ್ತಾನೆ (Partial Insanity) ಅಂತಹ ವ್ಯಕ್ತಿಯು ಮಾನಸಿಕವಾಗಿ ಸ್ವಸ್ಥ ನಾಗಿದ್ದ ಸಮಯದಲ್ಲಿ ಮಾತ್ರವೇ ಉಯಿಲನ್ನು ಮಾಡಬಹುದು.
ಯಾವುದೇ ವ್ಯಕ್ತಿ 'ಮತ್ತು' ತರಿಸುವ ಪದಾರ್ಥದ (Under the Influence of Intoxication) ಸೇವನೆಯಿಂದ ಅಥವಾ ಯಾವುದೇ ರೀತಿಯ ಅನಾರೋಗ್ಯದಿಂದಾಗಿ ಅಥವಾ ಬೇರಾವುದೇ ಕಾರಣದಿಂದ ತಾನು ಮಾಡುತ್ತಿರುವುದೇನು ಎಂಬುದರ ತಿಳುವಳಿಕೆ , ಪರಿಜ್ಞಾನವಿಲ್ಲದ ಸ್ಥಿತಿಯಲ್ಲಿದ್ದಾಗ ಉಯಿಲನ್ನು ಮಾಡುವಂತಿಲ್ಲ. ಮಾಡಿದರೂ ಅದು ಅನೂರ್ಜಿತ.
ಯಾರೊಬ್ಬರ ಬೆದರಿಕೆಗೆ ಯಾ ಪ್ರಲೋಭನೆಗೆ, ಮಾತಿಗೆ ಮರುಳಾಗಿ ಅಥವಾ ಮೋಸ-ವಂಚನೆಗೆ ಒಳಗಾಗಿದ್ದ ಯಾ ಮತಿಭ್ರಷ್ಟನಾಗಿದ್ದ ಸಮಯದಲ್ಲಿ ಮಾಡಿದ ಉಯಿಲು ಊರ್ಜಿತವಾಗುರುವುದಿಲ್ಲ. (Intimidation, Temptation, Misrepresentation, Undue Influence.)
ಉಯಿಲನ್ನು ಮಾಡಲು ಕಾನೂನಿನನ್ವಯ ಸಮರ್ಥರಲ್ಲದವರರು ಅಂದರೆ ಅಪ್ರಾಪ್ತ ವಯಸ್ಕರ (Minor) ಅಥವಾ ಬುದ್ಧಿಭ್ರಮಣೆಯ (Idiocy) ಅವರ ಪರವಾಗಿ ಅವರ ಪಾಲಕರು ಅಥವಾ ಪೋಷಕರು ಉಯಿಲನ್ನು ಮಾಡುವಂತಿಲ್ಲ.
ಉಯಿಲನ್ನು ಮಾಡುವಾಗ ಮುಖ್ಯವಾಗಿ ಪಾಲಿಸಬೇಕಾದ ಸಂಗತಿಗಳು:
ಉಯಿಲು ಕಡ್ಡಾಯವಾಗಿ ಲಿಖಿತ ರೂಪದಲ್ಲೇ ಇರತಕ್ಕದ್ದು: ಉಯಿಲು ಕರ್ತನು ಉಯಿಲನ್ನು ತನ್ನ ಕೈಬರಹದಲ್ಲಿಯೇ ಬರೆಯುವುದು ಹೆಚ್ಚು ಸೂಕ್ತ.
ಯಾವುದೇ ಭಾಷೆಯಲ್ಲಿ ಮತ್ತು ಯಾವುದೇ ಶೈಲಿಯಲ್ಲಿ ಉಯಿಲನ್ನು ಬರೆಯಬಹುದು. ಛಾಪಾ ಕಾಗದ ಮೇಲೆ ಬರೆಯಲೇ ಬೇಕು ಎಂದೇನಿಲ್ಲ. ಉತ್ತಮ ದರ್ಜೆಯ ಯಾವುದೇ ಕಾಗದದಲ್ಲೂ ಉಯಿಲು ಬರೆಯಬಹುದು.
ಉಯಿಲು ಕರ್ತನು ಉಯಿಲಿನ ಪ್ರತಿಪುಟದ ಮೇಲೆ ತನ್ನ ಸಹಿ ಹಾಕಬೇಕು ಅಥವಾ ಎಡಗೈ ಹೆಬ್ಬೆರಳಿನ ಗುರುತನ್ನು ಹಾಕಬೇಕು. ಉಯಿಲು ದಸ್ತಾವೇಜಿಗೆ ಕನಿಷ್ಠ ಇಬ್ಬರು ವ್ಯಕ್ತಿಗಳು 'ಸಾಕ್ಷಿಗಳೆಂದು' (Witness) ಉಯಿಲು ಕರ್ತನು ಅದಕ್ಕೆ ಸಹಿ ಮಾಡಿದ್ದನ್ನು ಪ್ರತ್ಯಕ್ಷ ಕಂಡು ಸಹಿ ಮಾಡಬೇಕು.
ಬಿಕ್ಕಲಂ (Document Writer) ಬರಹಗಾರ 'ಸಾಕ್ಷಿ' ಆಗುವುದಿಲ್ಲ.(ಉಯಿಲು ದಾಖಲೆ ಪತ್ರ ಬರೆದ ವ್ಯಕ್ತಿ Deed writer)
ಉಯಿಲಿನ ಮೂಲಕ ಯಾವುದೇ ವಿಧದ ಪ್ರಯೋಜನವನ್ನು ಪಡೆಯುವ ವ್ಯಕ್ತಿ ( Beneficiary Of the will ) ಉಯಿಲಿಗೆ ಸಾಕ್ಷಿ ಹಾಕಬಾರದು. ಹಾಗೊಂದು ವೇಳೆ ಸಾಕ್ಷಿ ಹಾಕಿದಲ್ಲಿ, ಸಾಕ್ಷಿ ಹಾಕಿದ್ದು ಅನೂರ್ಜಿತವಾಗುವುದಿಲ್ಲ. ಆದರೆ ಸಾಕ್ಷಿ ಹಾಕಿದ ವ್ಯಕ್ತಿ ಅಥವಾ ಆತನ/ಆಕೆಯ ಹೆಂಡತಿ ಅಥವಾ ಗಂಡ ಉಯಿಲು ಮೂಲಕ ಪಡೆದ ಪ್ರಯೋಜನ ರದ್ದಾಗುವ ಸಂಭವವಿರುತ್ತದೆ.
ಉಯಿಲಿನಲ್ಲಿ ತೋರಿಸಿದ ಆಸ್ತಿಗಳ ಮತ್ತು ಅವುಗಳನ್ನು ಪಡೆಯುವ ವ್ಯಕ್ತಿಗಳ ವಿವರಗಳನ್ನು ಯಾವುದೇ ಸಂದಿಗ್ಧತೆ ಅಥವಾ ಅಸ್ಪಷ್ಟತೆಗೆ ಅವಕಾಶವಿಲ್ಲದಂತೆ ಸ್ಪಷ್ಟವಾಗಿ ಮತ್ತು ಸರಿಯಾಗಿ ನಮೂದಿಸಬೇಕು.
ಯಾವ ವಿಧದ ಆಸ್ತಿಗಳನ್ನು ಉಯಿಲು/ಮೃತ್ಯು ಪತ್ರ ಮಾಡಬಹುದು?
ಯಾವ ಆಸ್ತಿಗಳಿಗೆ ಸಂಬಂಧಿಸಿದಂತೆ ಉಯಿಲು ಕರ್ತನು ಮೃತ್ಯು ಪತ್ರ ಮಾಡಬಯಸುತ್ತಾನೋ ಅಂತಹ ಆಸ್ತಿಗಳನ್ನು ಆತ ತನ್ನ ಜೀವಿತಾವಧಿಯಲ್ಲೇ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರಬೇಕು.
ಒಬ್ಬ ಹಿಂದೂ ತನ್ನ ಸ್ವಯಾರ್ಜಿತ ಸಂಪೂರ್ಣ ಆಸ್ತಿಯನ್ನು, ಒಬ್ಬ ಹಿಂದೂ ಮಹಿಳೆ ತನ್ನ ಜೀವಿತ ಸಮಯದಲ್ಲಿ ಯಾವ ಆಸ್ತಿಯನ್ನು ತನ್ನ ಇಚ್ಛಾನುಸಾರ ಪರಭಾರೆ (ವಿಲೇವಾರಿ) ಮಾಡುವ ಹಕ್ಕನ್ನು ಹೊಂದಿರುತ್ತಾಳೋ ಅಂತಹ ಆಸ್ತಿಯನ್ನು , ಹಿಂದು ಅವಿಭಕ್ತ (ಏಕತ್ರ ,ಒಟ್ಟು) ಕುಟುಂಬದ ಸದಸ್ಯನೊಬ್ಬನ ಕುಟುಂಬದ ಆಸ್ತಿ ವಿಭಾಗವಾದಲ್ಲಿ ತನ್ನ ಪಾಲಿಗೆ ಬರುವಷ್ಟು ಆಸ್ತಿಯನ್ನು ,ಒಬ್ಬ ಮಹಮ್ಮದೀಯನು ತನ್ನ ಒಟ್ಟು ಆಸ್ತಿಯ ಮೂರನೇ ಒಂದು ಭಾಗಕ್ಕೆ ಸಂಬಂಧಿಸಿದಂತೆ ,ಉಯಿಲನ್ನು ಮಾಡುವ ಹಕ್ಕು ಹೊಂದಿದ್ದಾರೆ. ಉಯಿಲುಕರ್ತನು (ವಿಲ್ ಬರೆಯುವವನು) ಉಯಿಲು ಮಾಡಿದ್ದಾನೆ ಎಂಬ ಕಾರಣಕ್ಕೆ ತನ್ನ ಆಸ್ತಿಯ ಮೇಲಿನ ಹಕ್ಕನ್ನು ಕಳೆದುಕೊಳ್ಳುವುದಿಲ್ಲ.
ಉಯಿಲು ನಿರ್ವಾಹಕ (EXECUTOR)
ಉಯಿಲಿನಲ್ಲಿರುವ ನಿರ್ದೇಶನಗಳಂತೆ ಆಸ್ತಿಗಳ ವಿತರಣೆ ಅಥವಾ ವಿಲೇವಾರಿ ಮಾಡಲೆಂದು ಉಯಿಲು ಕರ್ತನು ತನ್ನ ಉಯಿಲಿನಲ್ಲಿ ಒಬ್ಬ (Executor) ಉಯಿಲು ನಿರ್ವಾಹಕನನ್ನು ಅಥವಾ ಒಬ್ಬನಿಗಿಂತ ಹೆಚ್ಚು ನಿರ್ವಾಹಕರನ್ನು ನೇಮಿಸಿಕೊಳ್ಳಲು ಅವಕಾಶವಿದೆ.
ಉಯಿಲನ್ನು ನೊಂದಣಿ (Registration) ಮಾಡಿಸುವುದು ಕಡ್ಡಾಯವಲ್ಲ. ಆದರೆ ನೊಂದಾಯಿತ ಉಯಿಲಿನ ಬಗ್ಗೆ ಅನುಮಾನ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಅಲ್ಲದೆ ಉಯಿಲಿನ ಮೂಲಪ್ರತಿ ಕಳೆದುಹೋದ ಸಂದರ್ಭದಲ್ಲಿ ಅದರ ದೃಡೀಕೃತ ನಕಲನ್ನು ಪಡೆದು ಜಾರಿಗೆ ತರಲು ಧನಾತ್ಮಕ ಅವಕಾಶವನ್ನು ಕಲ್ಪಿಸುತ್ತದೆ.
ಉಯಿಲನ್ನು ಭದ್ರತೆ:
ಉಯಿಲುಕರ್ತನು ತನ್ನ ಉಯಿಲನ್ನು ತನ್ನಲ್ಲೇ ಇರಿಸಿಕೊಳ್ಳಬಹುದು; ಅಥವಾ ತನ್ನ ಯಾವುದೇ ವಿಶ್ವಾಸಿಕರ ಹತ್ತಿರವಾಗಲೀ, ಅಥವಾ ಮೊಹರು ಮಾಡಿದ ಲಕೋಟೆಯೊಳಗೆ ಇಟ್ಟು ನೋಂದಣಾಧಿಕಾರಿ ಕಚೇರಿಯಲ್ಲಾಗಲಿ ಭದ್ರವಾಗಿಡಬಹುದು.
ಉಯಿಲು ಕರ್ತನು ಮೃತಪಟ್ಟಲ್ಲಿ ಆತನಿಗೆ ಸಂಬಂಧಿಸಿದವರು ನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಿ ಭದ್ರವಾಗಿಟ್ಟ ಉಯಿಲಿನ ಧೃಢೀಕೃತ ನಕಲನ್ನು ನೋಂದಣಾಧಿಕಾರಿ ಮೂಲಕ ಪಡೆದುಕೊಳ್ಳಬಹುದು. ಭದ್ರವಾಗಿಟ್ಟ ಉಯಿಲನ್ನು ಅದರ ಕರ್ತನು ಬಯಸಿದಾಗ ಹಿಂದಕ್ಕೆ ಪಡೆಯಬಹುದು.
ಉಯಿಲಿನ ತಿದ್ದುಪಡಿ:
ಉಯಿಲುಕರ್ತನು ವೀಲುನಾಮೆ ಮಾಡಿದ ನಂತರ ತನ್ನ ಜೀವಿತಾವಧಿಯಲ್ಲಿ ಅದಕ್ಕೆ ತಿದ್ದುಪಡಿ ಮಾಡುವ ಹಕ್ಕು ಹೊಂದಿರುತ್ತಾನೆ. ಅದಕ್ಕೆ ಉಯಿಲು ಕರ್ತನು ಪ್ರತ್ಯೇಕವಾದ ಮತ್ತೊಂದು ದಸ್ತಾವೇಜನ್ನು ಬರೆದು ತಿದ್ದುಪಡಿ ಮಾಡಬೇಕಾಗುತ್ತದೆ.
ಹೀಗೆ ತಯಾರಿಸಲಾದ ಪ್ರತ್ಯೇಕ ದಸ್ತಾವೇಜಿಗೆ ಉಯಿಲಿನ ಅನುಬಂಧ ಅಥವಾ ಕೋಡಿಸಿಲ್ ಎಂದು ಹೇಳಲಾಗುತ್ತದೆ. ಮೂಲ ಉಯಿಲು ನೋಂದಾಯಿತವಾಗಿದ್ದರೆ ಅದಕ್ಕೆ ತಿದ್ದುಪಡಿ ತರುವ ಅನುಬಂಧ ಅಥವಾ ಕೋಡಿಸಿಲ್ ಕೂಡ ನೋಂದಣಿ ಮಾಡಬೇಕಾಗುತ್ತದೆ. ಮೂಲ ಉಯಿಲನ್ನು ಬರೆಯುವಾಗ ಪಾಲಿಸಬೇಕಾದದ್ದೆಲ್ಲವನ್ನು ಅನುಬಂಧವನ್ನು ಬರೆಯುವಾಗಲೂ ಸಹ ಪಾಲಿಸಬೇಕಾಗುತ್ತದೆ.
ಮೃತ್ಯು ಪತ್ರವನ್ನು (ಉಯಿಲು) ರದ್ದುಗೊಳಿಸುವುದು ಹೇಗೆ?
ಮೂಲ ಉಯಿಲು ನೋಂದಾಣಿ ಉಯಿಲಾಗಿದ್ದರೆ ಮತ್ತೊಂದು ಉಯಿಲನ್ನು ಬರೆದು ಅದರಲ್ಲಿ ಮೊದಲನೇ ಉಯಿಲನ್ನು ರದ್ದುಗೊಳಿಸಿರುವುದಾಗಿ ಘೋಷಿಸುವ ಮೂಲಕ ಮೂಲ ಉಯಿಲನ್ನು ರದ್ದುಗೊಳಿಸಬಹುದು.
ನೋಂದಾಣಿ ಮಾಡಲಾದ ಉಯಿಲನ್ನು ರದ್ದಿತಿ ಪತ್ರವನ್ನು ಮಾಡಿಸಿ ಆ ಪತ್ರವನ್ನು ನೊಂದಾಯಿಸುವ ಮೂಲಕವೂ ರದ್ದುಗೊಳಿಸಬಹುದು.ರದ್ದು ಪಡಿಸಲಾದ ಉಯಿಲಿನ ಪುನರುಜ್ಜೀವನ ಒಮ್ಮೆ ರದ್ದುಪಡಿಸಿದ ಉಯಿಲನ್ನು ಪುನರುಜ್ಜೀವನಗೊಳಿಸಲಾಗದು.
ಆದರೆ, ರದ್ದಾದ ವೀಲುನಾಮೆಯ ಅಂಶಗಳನ್ನೇ ಉಲ್ಲೇಖಿಸಿ ಮತ್ತೊಂದು ವೀಲುನಾಮೆಯನ್ನು ಹೊಸತಾಗಿ ತಯಾರಿಸಬಹುದು.
ಉಯಿಲು ಮತ್ತು ಪ್ರೊಬೇಟ್:
ಮೃತ್ಯುಪತ್ರ/ವೀಲುನಾಮೆ ನಿಸ್ಸಂದೇಹವಾಗಿ ಸಾಚಾ ಉಯಿಲು (Genuine Will) ಎಂದು ನ್ಯಾಯಾಲಯದಲ್ಲಿ ರುಜುವಾತುಪಡಿಸಿ, ನ್ಯಾಯಾಲಯ ನೀಡುವ ಉಯಿಲಿನ ಪ್ರಮಾಣೀಕೃತ ಪ್ರತಿಗೆ ಪ್ರೊಬೇಟ್ ಎನ್ನುತ್ತಾರೆ.
ಪ್ರೊಬೇಟ್ ಅನ್ನು ನ್ಯಾಯಾಲಯವು ವಿವರವಾಗಿ ವಿಚಾರಣೆ ನಡೆಸಿದ ನಂತರವೇ ಕೊಡು ಮಾಡುವುದರಿಂದ ಉಯಿಲು ಸಂಶಯಾತೀತವಾಗುತ್ತದಲ್ಲದೆ ಅದರ ಸಿಂಧುತ್ವವನ್ನು ಯಾರೂ ಪ್ರಶ್ನಿಸುವಂತಿಲ್ಲ. ವೀಲುನಾಮೆಯ ಕಾರ್ಯರೂಪಕ್ಕೆ ತರಲು ನಿರ್ವಾಹಕನನ್ನು ನೇಮಿಸಲಾಗಿದ್ದಲ್ಲಿ, ನಿರ್ವಾಹಕರು ನ್ಯಾಯಾಲಯದಿಂದ ಪ್ರೊಬೇಟ್ ನ್ನು ಪಡೆಯಬೇಕಾಗುತ್ತದೆ.
ಪ್ರೊಬೇಟ್ ಬಯಸಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲು ಯಾವುದೇ 'ಕಾಲ ಪರಿಮಿತಿ' ಇರುವುದಿಲ್ಲ.
ಲೇಖಕರು: ಮರಿಗೌಡ ಬಾದರದಿನ್ನಿ, ವಕೀಲರು & ಪತ್ರಕರ್ತರು, ಕುಷ್ಟಗಿ -9902712955
Please Note:- ಕಾನೂನು ತಿಳುವಳಿಕೆ ಯಾ ನ್ಯಾಯಾಲಯದ ತೀರ್ಪುಗಳಿಗೆ ಸಂಬಂಧಪಟ್ಟ ಯಾವುದೇ ಬರಹ/ಲೇಖನ/ಮಾಹಿತಿಗೆ ಸ್ವಾಗತ..
ನಿಮ್ಮ ಬರಹಗಳನ್ನು ನಮ್ಮ ವಾಟ್ಸ್‌ಆಪ್ 9483456040 ನಂಬರಿಗೆ ಕಳುಹಿಸಿ...
ನಿಮ್ಮ ಲೇಖನಗಳನ್ನು ಪ್ರಕಟಿಸಲಾಗುವುದು.