ASI punished with 20 year imprisonment - ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರ: ಪೊಲೀಸ್ ಅಧಿಕಾರಿಗೆ 20 ವರ್ಷ ಜೈಲು, ದಂಡ
ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರ: ಪೊಲೀಸ್ ಅಧಿಕಾರಿಗೆ 20 ವರ್ಷ ಜೈಲು, ದಂಡ
ಸುಮಾರು 3 ವರ್ಷಗಳ ಹಿಂದೆ ತುಮಕೂರು ನಗರದಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆಗಿನ ಎಎಸ್ಐ ಉಮೇಶಯ್ಯ ಎಂಬಾತನಿಗೆ ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್ ಮಲ್ಲಿಕಾರ್ಜುನ ಸ್ವಾಮಿ ಅವರು ಪ್ರಕರಣದ ವಿಚಾರಣೆ ನಡೆಸಿ ಆರೋಪಿ ಉಮೇಶಯ್ಯನ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತೆಗೆ ಪರಿಹಾರವಾಗಿ 1 ಲಕ್ಷ ರೂಪಾಯಿ ನೀಡುವಂತೆ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.
ತುಮಕೂರು ಗ್ರಾಮಾಂತರ ಠಾಣೆಯ ಎಎಸ್ಐ ಆಗಿದ್ದ ಆರೋಪಿ ಉಮೇಶಯ್ಯ 2017ರ ಜನವರಿ 15ರಂದು ರಾತ್ರಿ ಗಸ್ತಿನಲ್ಲಿದ್ದ ಸಮಯದಲ್ಲಿ ನಗರದ ಅಂತರಸನಹಳ್ಳಿ ಸೇತುವೆ ಬಳಿ ನಡೆದು ಹೋಗುತ್ತಿದ್ದ ಬುದ್ಧಿಮಾಂದ್ಯ ಯುವತಿಯನ್ನು ತಮ್ಮ ಖಾಸಗಿ ಜೀಪಿನಲ್ಲಿ ಕರೆದೊಯ್ದು ಬಲವಂತವಾಗಿ ಹಠ ಸಂಭೋಗ ಮಾಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯ ಪೋಷಕರು ದೂರು ದಾಖಲಿಸಿದ್ದರು.
ಉಮೇಶಯ್ಯನ ವಿರುದ್ಧದ ಅರೋಪಗಳು ಸಾಬೀತಾದ ಹಿನ್ನಲೆಯಲ್ಲಿ ಅಪರಾಧಿ ಎಂದು ತೀರ್ಮಾನಿಸಿ ತೀರ್ಪು ಪ್ರಕಟಿಸಿರುವ ನ್ಯಾಯಾಲಯ, ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಜೀಪ್ ಚಾಲಕನನ್ನು ಖುಲಾಸೆ ಮಾಡಲಾಗಿದೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕಿ ಕವಿತಾ ವಾದ ಮಂಡಿಸಿದ್ದರು.