Karnataka HC - 10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿ ಕಾಯಂಗೊಳಿಸಲು ಹೈಕೋರ್ಟ್ ಸೂಚನೆ
10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿ ಕಾಯಂಗೊಳಿಸಲು ಹೈಕೋರ್ಟ್ ಸೂಚನೆ
ಹತ್ತು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಸಿಬ್ಬಂದಿ ಸೇವೆ ಖಾಯಂಗೊಳಿಸುವ ಬಗ್ಗೆ ಆ ಸಿಬ್ಬಂದಿ ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿದೆ.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಕರ್ನಾಟಕ ವೆಟರಿನರಿ ಆನಿಮಲ್ & ಫಿಶರೀಸ್ Vs ನಾಗೇಂದ್ರ ಎಸ್.ಜಿ. ಮತ್ತಿತರರು
ಕರ್ನಾಟಕ ಹೈಕೋರ್ಟ್, WA 1185/2021 Dated 10-01-2021
ವಿವಿ ತನ್ನ ಕೆಲಸ ಕಾರ್ಯಗಳ ಸುಗಮ ನಿರ್ವಹಣೆಗಾಗಿ ಎಸ್.ಜಿ ನಾಗೇಂದ್ರ ಸಹಿತ 13 ಮಂದಿ ಸಿಬ್ಬಂದಿಯನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಿಸಿತ್ತು. ಈ ಸಿಬ್ಬಂದಿ 10 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಇದೀಗ ಅವರ ಸೇವೆ ಖಾಯಂಗೊಳಿಸಲು ನಿರಾಕರಿಸಿರುವ ಕ್ರಮ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತಾತ್ಕಾಲಿಕ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 13 ಮಂದಿ ಸಿಬ್ಬಂದಿಯನ್ನು ಉಮಾದೇವಿ ಪ್ರಕರಣದಲ್ಲಿ ಹೈಕೋರ್ಟ್ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ್ವಯ ಪರಿಗಣಿಸಬೇಕು ಎಂದು ಪೀಠ ತನ್ನ ತೀರ್ಪಿನಲ್ಲಿ ನಿರ್ದೇಶಿಸಿದೆ.
ಪ್ರಕರಣದ ವಿವರ
ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 2004-2009ರ ನಡುವೆ ಎಸ್.ಜಿ ನಾಗೇಂದ್ರ, ಎಸ್.ಆರ್ ಧನಂಜಯ ಹಾಗೂ ಕೆ.ಕೆ ವಿಮಲಾ ಸೇರಿದಂತೆ ಒಟ್ಟು 13 ಮಂದಿಯನ್ನು ಸಹಾಯಕ, ಪ್ರಯೋಗಾಲಯ ಸಹಾಯಕ ಹಾಗೂ ಇನ್ನಿತರ ಹುದ್ದೆಗಳಿಗೆ ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಿತ್ತು.
2015ರ ಜುಲೈ 7ರಂದು ಇದೇ ಹುದ್ದೆಗಳಿಗೆ ಖಾಯಂ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿತ್ತು.
ಈ ಅಧಿಸೂಚನೆ ಪ್ರಶ್ನಿಸಿ 13 ಸಿಬ್ಬಂದಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ಏಕ ಸದಸ್ಯ ಪೀಠ, 2019ರಲ್ಲಿ, ಅರ್ಜಿದಾರರು ತಮ್ಮ ಸೇವೆ ಕಾಯಂಗೊಳಿಸಲು ಕೋರಿ ವಿವಿಗೆ ಹೊಸದಾಗಿ ಮನವಿ ಪತ್ರ ಸಲ್ಲಿಸಬಹುದು ಎಂದು ಸೂಚಿಸಿತ್ತು. ಅದರಂತೆ, 2019ರ ಜೂನ್ 26ರಂದು, ಸಿಬ್ಬಂದಿ ವಿವಿಗೆ ಸಲ್ಲಿಸಿದರು. ಈ ಮನವಿಯನ್ನು ವಿವಿ ತಿರಸ್ಕರಿಸಿ, ಸೇವೆ ಕಾಯಂಗೊಳಿಸಲು ಅಸಾಧ್ಯ ಎಂಬ ಹಿಂಬರಹ ನೀಡಿತ್ತು.
ವಿ.ವಿ.ಯ ಹಿಂಬರಹ ಪ್ರಶ್ನಿಸಿ ಸಿಬ್ಬಂದಿ ಮತ್ತೆ ಹೈಕೋರ್ಟ್‌ಗೆ ಮೆಟ್ಟಿಲೇರಿದರು. ಏಕ ಸದಸ್ಯ ಪೀಠ ಸಿಬ್ಬಂದಿ ಕೋರಿಕೆ ಪುರಸ್ಕರಿಸಿ ಹಿಂಬರಹವನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ವಿವಿ ಮೇಲ್ಮನವಿ ಸಲ್ಲಿಸಿತ್ತು.
ಈ ಮೇಲ್ಮನವಿ ವಜಾಗೊಳಿಸಿರುವ ವಿಭಾಗೀಯ ಪೀಠ, ವಿವಿಯ ಹಿಂಬರಹವನ್ನು ರದ್ದುಪಡಿಸಿದೆಯಲ್ಲದೇ, ನೌಕರರ ಮನವಿ ಪರಿಗಣಿಸುವಂತೆ ಆದೇಶಿಸಿದೆ.
ತೀರ್ಪಿಗಾಗಿ ಇದನ್ನು ಕ್ಲಿಕ್ ಮಾಡಿ:
ಕರ್ನಾಟಕ ವೆಟರಿನರಿ ಆನಿಮಲ್ & ಫಿಶರೀಸ್ Vs ನಾಗೇಂದ್ರ ಎಸ್.ಜಿ. ಮತ್ತಿತರರು