High Court Language- ನೀವು ಗುಜರಾತಿ ಭಾಷೆಯಲ್ಲೇ ವಿಚಾರಣೆ ನಡೆಸಿ ಎಂದ ವಕೀಲ: ಕನ್ನಡದ ಮುಖ್ಯ ನ್ಯಾಯಾಧೀಶರು ಹೇಳಿದ್ದೇನು..?
ನೀವು ಗುಜರಾತಿ ಭಾಷೆಯಲ್ಲೇ ವಿಚಾರಣೆ ನಡೆಸಿ ಎಂದ ವಕೀಲ: ಕನ್ನಡದ ಮುಖ್ಯ ನ್ಯಾಯಾಧೀಶರು ಹೇಳಿದ್ದೇನು..?
ಹೈಕೋರ್ಟ್‌ಗಳ ಭಾಷೆ ಇಂಗ್ಲಿಷ್.. ಅಧೀನ ನ್ಯಾಯಾಲಯಗಳಲ್ಲಿ ಮಾತ್ರ ಆಯಾ ರಾಜ್ಯದ ಪ್ರಾದೇಶಿಕ ಭಾಷೆ ಬಳಸಬಹುದು ಎಂದು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್ ಹೇಳಿದ್ದಾರೆ.
"ನೀವು ಗುಜರಾತ್‌ನಲ್ಲಿ ಇದ್ದೀರಿ. ನಾನು ಇಲ್ಲಿನ ಭಾಷೆಯಲ್ಲಿ ವಾದಿಸುತ್ತೇನೆ" ಎಂದ ದಾವೆದಾರರೊಬ್ಬರು ಗುಜರಾತ್ ಹೈಕೋರ್ಟ್ ನಲ್ಲಿ ವಾದಿಸಿದರು. ಅದಕ್ಕೆ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮೂಲತಃ ಕನ್ನಡಿಗರಾದ ನ್ಯಾ. ಕುಮಾರ್, ಹೈಕೋರ್ಟ್‌ಗಳ ಭಾಷೆ ಇಂಗ್ಲಿಷ್ ಆಗಿದ್ದು ಅಧೀನ ನ್ಯಾಯಾಲಯಗಳಲ್ಲಿ ಮಾತ್ರ ಅಲ್ಲಿನ ಪ್ರಾದೇಶಿಕ ಭಾಷೆ ಬಳಸಬಹುದು ಎಂದು ದಾವೆದಾರರಿಗೆ ಸ್ಪಷ್ಟಪಡಿಸಿದರು.
"ಗುಜರಾತಿ ಭಾಷೆಯಲ್ಲಿ ನೀವು ಉತ್ತರಿಸಲು ಬಯಸುತ್ತೀರೇನು?" ಎಂದು ನ್ಯಾ. ಕುಮಾರ್ ಕೇಳಿದರು. 'ಹೌದು ಸರ್' ಎಂದು ಮನವಿದಾರರು ಪ್ರತಿಕ್ರಿಯಿಸಿದರು. ಈ ಹಂತದಲ್ಲಿ ಅವರು 'ದೆನ್, ಐ ವಿಲ್ ಟೆಲ್ ಯು ಇನ್ ಕನ್ನಡ (ಹಾಗಾದರೆ ನಾನು ಕನ್ನಡದಲ್ಲಿ ಹೇಳುತ್ತೇನೆ) ಎಂದು ಕನ್ನಡದಲ್ಲಿ ಮಾತು ಆರಂಭಿಸುತ್ತಾ, "ನೀವು ಏನು ಮಾಡ್ತಾ ಇದ್ದೀರೋ ನಮಗೆ ಅರ್ಥ ಆಗ್ತಾ ಇಲ್ಲ. ನೀವು ಅದನ್ನು ಹೇಳೋ ಹಾಗಿದ್ರೆ ಕನ್ನಡದಲ್ಲಿ ಹೇಳಿ… ನಮಗೆ ಅರ್ಥ ಆಗುವ ಭಾಷೆಯಲ್ಲಿ...” ಎಂದರು.
"ಯೇ ಗುಜರಾತ್ ಹೇ. ಮೇ ಪೆಹ್ಲೆ ಆ ಚುಕಾ ಹೂ ಹೈಕೋರ್ಟ್ ಮೇ (ಇದು ಗುಜರಾತ್. ನಾನು ಮೊದಲ ಬಾರಿಗೆ ಹೈಕೋರ್ಟ್‌ಗೆ ಬಂದಿದ್ದೇನೆ)" ಎಂದು ದಾವೆದಾರರು ಹೇಳಿದರು.
ಆಗ ಸಿಜೆ ನ್ಯಾ. ಕುಮಾರ್, 'ನೀವು ಹೈಕೋರ್ಟ್ ನಲ್ಲಿ ಇದ್ದಿರಿ. ಇದು ಜಿಲ್ಲಾ ನ್ಯಾಯಾಲಯವಲ್ಲ. ಅಲ್ಲಿ ಸ್ಥಳೀಯ ಭಾಷೆಗೆ ಅನುಮತಿ ಇದೆ. ಆದರೆ, ಇಲ್ಲಿ ಇಂಗ್ಲಿಷ್ ಮಾತ್ರ ಅವಕಾಶ" ಎಂದು ಹೇಳಿದರು.
ಸಾಮಾನ್ಯವಾಗಿ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ. ಅವರಿಗೆ ಕೋರ್ಟ್ ಸಿಬ್ಬಂದಿ ಮತ್ತು ವಕೀಲರ ಜೊತೆ ಸಂವಹನದಲ್ಲಿ ಭಾಷೆಯ ತೊಡಕು ಆಗುವುದು ಸಹಜ. ದಕ್ಷಿಣ ಭಾರತದ ನ್ಯಾಯಮೂರ್ತಿಗಳು ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಹೈಕೋರ್ಟ್ ಸಿಜೆಗಳಾಗಿ ಕರ್ತವ್ಯ ನಿರ್ವಹಿಸುವಾಗ ಇಂತಹ ಘಟನೆಗಳು ನಡೆಯುತ್ತವೆ.
1987ರಲ್ಲಿ ಕರ್ನಾಟಕದಲ್ಲಿ ವಕೀಲ ವೃತ್ತಿ ಆರಂಭಿಸಿದ ನ್ಯಾ. ಕುಮಾರ್ 1999ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಭಾರತ ಸರಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ನಿಯುಕ್ತಿಗೊಂಡರು.
ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2009ರಲ್ಲಿ ಹುದ್ದೆ ಅಲಂಕರಿಸಿದ ಅವರನ್ನು 2012ರಲ್ಲಿ ಖಾಯಂಗೊಳಿಸಲಾಗಿತ್ತು.