Jail to advocates- ಹೈಕೋರ್ಟ್‌ನಲ್ಲಿ ಸುಳ್ಳು ಮೊಕದ್ದಮೆ: ಇಬ್ಬರು ವಕೀಲರನ್ನು ಜೈಲಿಗೆ ಕಳಿಸಿದ ನ್ಯಾಯಪೀಠ
ಹೈಕೋರ್ಟ್‌ನಲ್ಲಿ ಸುಳ್ಳು ಮೊಕದ್ದಮೆ: ಇಬ್ಬರು ವಕೀಲರನ್ನು ಜೈಲಿಗೆ ಕಳಿಸಿದ ನ್ಯಾಯಪೀಠ
ಬೆಂಗಳೂರು: ವಿಪ್ರೊ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್ ಜಿ ಮತ್ತು ಅವರ ಟ್ರಸ್ಟ್ ವಿರುದ್ಧ ತನಿಖೆ ನಡೆಸುವಂತೆ ಕೋರಿ ಹಲವು ಸುಳ್ಳು ಮೊಕದ್ದಮೆ ಹೂಡಿರುವ ಇಬ್ಬರು ವಕೀಲರಿಗೆ ಕರ್ನಾಟಕ ಹೈಕೋರ್ಟ್ ಪ್ರಬಲವಾಗಿ ಚಾಟಿ ಬೀಸಿದೆ.
ಚೆನ್ನೈ ಮೂಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ಯನ್ನು ಪ್ರತಿನಿಧಿಸಿ ವಾದ ಮಾಡಿದ್ದ ಚೆನ್ನೈನ ವಕೀಲರಾದ ಆರ್. ಸುಬ್ರಮಣಿಯನ್ ಮತ್ತು ಪಿ. ಸದಾನಂದ್ ಅವರಿಗೆ ಹೈಕೋರ್ಟ್ ನ್ಯಾಯಪೀಠ 2 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ ಎರಡು ಸಾವಿರ ರೂ. ದಂಡ ವಿಧಿಸಿದೆ. ದಂಡ ವಿಧಿಸಲು ತಪ್ಪಿದರೆ ಮತ್ತೊಂದು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.
ವಿಪ್ರೊ ಸಂಸ್ಥೆ, ಅಜೀಂ ಪ್ರೇಮ್‌ಜಿ ಮತ್ತಿತರರು ಸಲ್ಲಿಸಿದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣದ ಎಲ್ಲ ಅಂಶಗಳು ಮತ್ತು ಈ ಹಿಂದೆ ನ್ಯಾಯಪೀಠ ದಂಡ ವಿಧಿಸಿದ ಅಂಶಗಳನ್ನು ಪರಿಗಣಿಸಿ ಈ ಆದೇಶ ನೀಡಿದೆ.
ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಲು ಯಾವುದೇ ಸಾಕ್ಷ್ಯಾಧಾರ ಇಲ್ಲ. ಹಾಗಾಗಿ, ಶಿಕ್ಷೆಯನ್ನು ನೀಡಲಾಗುತ್ತಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಅಲ್ಲದೆ, ಈ ವಕೀಲರಿಗೆ ಅಜೀಂ ಪ್ರೇಮ್‌ಜಿ ಮತ್ತು ವಿಪ್ರೋ ಕಂಪೆನಿ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಬಗೆಯ ಕೇಸು ದಾಖಲಿಸದಂತೆ ನಿರ್ಬಂಧ ವಿಧಿಸಿದೆ.