-->
Latest Judgement on : ಅನುಕಂಪದ ನೇಮಕಾತಿ: ತಿದ್ದುಪಡಿ ನಿಯಮಗಳು... ಲೇಟೆಸ್ಟ್ ಜಡ್ಜ್‌ಮೆಂಟ್...

Latest Judgement on : ಅನುಕಂಪದ ನೇಮಕಾತಿ: ತಿದ್ದುಪಡಿ ನಿಯಮಗಳು... ಲೇಟೆಸ್ಟ್ ಜಡ್ಜ್‌ಮೆಂಟ್...

ಅನುಕಂಪದ ನೇಮಕಾತಿ: ತಿದ್ದುಪಡಿ ನಿಯಮಗಳು... ಲೇಟೆಸ್ಟ್ ಜಡ್ಜ್‌ಮೆಂಟ್...





ಸಾಂವಿಧಾನಿಕ ನ್ಯಾಯಾಲಯಗಳು ನೀಡಿದ ತೀರ್ಪುಗಳ ಬೆಳಕಿನಲ್ಲಿ ಅನುಕಂಪದ ಆಧಾರದ ನೇಮಕಾತಿಯಲ್ಲಿ ಮಾಡಿದ ತಿದ್ದುಪಡಿ ನಿಯಮಗಳು ಮತ್ತು ಆದ ಮಹತ್ವದ ಬದಲಾವಣೆಗಳು



ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದ ತೀರ್ಪುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ನೇಮಕಾತಿ ನಿಯಮಗಳು) 1996 ಕ್ಕೆ ಕಾಲಕಾಲಕ್ಕೆ ತಿದ್ದುಪಡಿ ಮಾಡುವ ಮೂಲಕ ಅನುಕಂಪದ ನೆಲೆಯಲ್ಲಿ ನಡೆಯುವ ನೇಮಕಾತಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ.



ದಿನಾಂಕ 22/8/1985 ರ ಆದೇಶದಲ್ಲಿ ಸರಕಾರಿ ನೌಕರನ ವಿಧವೆ; ಮಗ; ಅವಿವಾಹಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯುವ ಅವಕಾಶವಿತ್ತು.


ತಾರೀಕು 12 / 9 / 1996ರಂದು ಕರ್ನಾಟಕ ಸಿವಿಲ್ ಸೇವಾ ನಿಯಮಗಳು -ಅನುಕಂಪದ ಆಧಾರದ ಮೇಲೆ ನೇಮಕಾತಿ - 1996 ಅನ್ನು ಹೊಸತಾಗಿ ಜಾರಿ ಗೊಳಿಸ ಲಾಯಿತು.


ದಿನಾಂಕ 31/3/1999 ರಲ್ಲಿ ನಿಯಮ 2; 3; 4; 5 ಮತ್ತು 9ಕ್ಕೆ ಮೊದಲನೆಯ ತಿದ್ದುಪಡಿ ತರಲಾಯಿತು. ದಿನಾಂಕ 11/2/2002 ರಲ್ಲಿ 2 ನೇ ತಿದ್ದುಪಡಿ ನಿಯಮಗಳನ್ನು ಜಾರಿಗೊಳಿಸಲಾಯಿತು.


28/2/2010ರ ಮೂರನೆಯ ತಿದ್ದುಪಡಿ ಜಾರಿಯಾಯಿತು ತದನಂತರ ದಿನಾಂಕ 13/10/2011; 11/7/2012; 25/10/2013 ಮತ್ತು 7/8/2014 ರಲ್ಲಿ ನಿಯಮಗಳಿಗೆ ತಿದ್ದುಪಡಿಯನ್ನು ತರಲಾಯಿತು ದಿನಾಂಕ 9/4/2021 ರಲ್ಲಿ ಹೊಸ ತಿದ್ದುಪಡಿ ನಿಯಮಗಳನ್ನು ಜಾರಿಗೊಳಿಸಲಾಯಿತು.



ಅನುಕಂಪದ ನೇಮಕಾತಿ ನಿಯಮಗಳಿಗೆ ದಿನಾಂಕ 9/4/2021 ರಂದು ಮಾಡಿದ ಹೊಸ ತಿದ್ದುಪಡಿಗಳ ಮುಖ್ಯಾಂಶಗಳು



1) ಸರಕಾರಿ ನೌಕರರು ಮೃತರಾದಲ್ಲಿ ಆ ವ್ಯಕ್ತಿಯ ಮೇಲೆ ಅವಲಂಬಿತರಾಗಿದ್ದ ಅವಿವಾಹಿತ; ವಿವಾಹಿತ; ವಿಚ್ಛೇದಿತ; ವಿಧವೆ ಮಗಳಿಗೂ ಅನುಕಂಪದ ನೇಮಕಾತಿಗೆ ಅವಕಾಶ ಕಲ್ಪಿಸಲಾಯಿತು.



2) ಮೃತ ಸರಕಾರಿ ನೌಕರರಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದಾಗ ಆ ಮಕ್ಕಳು ನೌಕರರು ಮರಣ ಹೊಂದಿದ ಎರಡು ವರ್ಷದೊಳಗೆ 18 ವರ್ಷ ಪೂರೈಸಬೇಕು. ಮತ್ತು ಅವರಿಗೆ 2 ವರ್ಷದೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.



3) ಒ೦ದು ವೇಳೆ ತಂದೆ ತಾಯಿ ಇಬ್ಬರೂ ಮರಣ ಹೊಂದಿದ ಸಂದರ್ಭದಲ್ಲಿ ಹಾಗೂ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದ ಪಕ್ಷದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳೊಂದಿಗೆ ವಾಸಿಸುವ ಮತ್ತು ಅವರನ್ನು ಪೋಷಿಸುವ ಪ್ರಮಾಣೀಕೃತ ಪೋಷಕರಿಗೂ (ಗಾರ್ಡಿಯನ್) ಸಹ ಅನುಕಂಪದ ನೇಮಕಾತಿಗೆ ಅವಕಾಶ ಕಲ್ಪಿಸಲಾಯಿತು.



4) ಅವಿವಾಹಿತ ಪುರುಷ ಮತ್ತು ಮಹಿಳಾ ಸರ್ಕಾರಿ ನೌಕರನು ಮೃತರಾದಲ್ಲಿ ಅವರ ಸಹೋದರ ಸಹೋದರಿಯರಿಗೆ ಅನುಕಂಪದ ನೆಲೆಯಲ್ಲಿ ನೇಮಕಾತಿಗೆ ಅವಕಾಶ ಕಲ್ಪಿಸಲಾಯಿತು.



ಸಾಂವಿಧಾನಿಕ ನ್ಯಾಯಾಲಯಗಳು

ನೀಡಿದ ಮಹತ್ವದ ತೀರ್ಪುಗಳು


1. ವಿಚ್ಚೇದಿತ ಪುತ್ರಿಗೆ ಅನುಕಂಪದ ನೌಕರಿ ಇಲ್ಲ

Judgement: ಖಜಾನೆ ನಿರ್ದೇಶಕರು Vs ವಿ. ಸೌಮ್ಯಶ್ರೀ


ವಿ. ಸೌಮ್ಯಶ್ರೀ ಎಂಬವರ ತಾಯಿ ಭಾಗ್ಯಮ್ಮ ಅವರು ದ್ವಿತೀಯ ದರ್ಜೆ ಸಹಾಯಕರಾಗಿ ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಸೇವೆಸಲ್ಲಿಸಿದ್ದರು. ದಿನಾಂಕ 25/3/2012 ರಂದು ಭಾಗ್ಯಮ್ಮ ಮೃತರಾಗಿದ್ದು ಪುತ್ರಿ ಸೌಮ್ಯಾಶ್ರೀ ವಿವಾಹಿತೆಯಾಗಿದ್ದು 12/9/2012 ರಂದು ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದರು. ದಿನಾಂಕ 20/3/2013 ರಂದು ಮಂಡ್ಯ ನ್ಯಾಯಾಲಯವು ವಿಚ್ಚೇದನವನ್ನು ಊರ್ಜಿತಗೊಳಿಸಿತ್ತು. ಅನುಕಂಪದ ನೆಲೆಯಲ್ಲಿ ನೇಮಕಾತಿ ಕೋರಿ ಸೌಮ್ಯಶ್ರೀ ಸಲ್ಲಿಸಿದ ಅರ್ಜಿಯನ್ನು ನೇಮಕಾತಿ ಪ್ರಾಧಿಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸೌಮ್ಯಶ್ರೀ ಕರ್ನಾಟಕ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಅನುಕಂಪದ ಉದ್ಯೋಗ ನೀಡುವಂತೆ ರಾಜ್ಯ ಸರಕಾರದ ಖಜಾನೆ ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಖಜಾನೆ ನಿರ್ದೇಶಕರು ಸುಪ್ರೀಂಕೋರ್ಟಿಗೆ ಮೊರೆ ಹೋದರು. ಗೌರವಾನ್ವಿತ ನ್ಯಾಯಮೂರ್ತಿಗಳಾದ ಎಂ. ಆರ್. ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ದ್ವಿಸದಸ್ಯ ಪೀಠವು ವಿ. ಸೌಮ್ಯಶ್ರೀ ಅವರು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವುದಕ್ಕೆ ಅರ್ಹರಲ್ಲ ಎಂದು ತೀರ್ಪು ನೀಡಿ ಹೈಕೋರ್ಟ್ ನ ಆದೇಶವನ್ನು ವಜಾಗೊಳಿಸಿತು.

ಉದ್ಯೋಗಿ ಮರಣ ಹೊಂದಿದ ನಂತರ ವಿಚ್ಚೇದನ ಪಡೆದ ಸಂದರ್ಭದಲ್ಲಿ ಉದ್ಯೋಗಕ್ಕೆ ವಿಚ್ಚೇದಿತ ಪುತ್ರಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ.


2. ಅನುಕಂಪದ ಮೇರೆಗೆ ನೇಮಕಾತಿ ಕೋರಿ ಸಲ್ಲಿಸುವ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಸಲ್ಲದು

Judgement: ಎನ್. ಹೃತಿಕ್ Vs ಶಿಕ್ಷಣ ಇಲಾಖೆ


ಅನುಕಂಪದ ನೆಲೆಯಲ್ಲಿ ನೇಮಕಾತಿ ಕೋರಿ ಸಲ್ಲಿಸುವ ಅರ್ಜಿಗಳ ವಿಲೇವಾರಿಯಲ್ಲಿ ನೇಮಕಾತಿ ಪ್ರಾಧಿಕಾರವು ವಿಳಂಬ ಧೋರಣೆ ನಡೆಸುವ ಹಲವಾರು ಪ್ರಕರಣಗಳು ಕಂಡುಬಂದಿವೆ.ಯಾವುದೇ ಸಮರ್ಥನೀಯ ಕಾರಣಗಳಿಲ್ಲದೆ ನೇಮಕಾತಿ ವಿಳಂಬವಾಗಿ ಅಭ್ಯರ್ಥಿಗೆ ನಷ್ಟವುಂಟಾದಲ್ಲಿ ಸಂಬಂಧಪಟ್ಟವರನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಿ ಅವರಿಂದ ಅಭ್ಯರ್ಥಿಗೆ ಉಂಟಾದ ನಷ್ಟವನ್ನು ಭರಿಸತಕ್ಕದ್ದು. ಅರ್ಜಿಗಳನ್ನು ವರ್ಷಗಟ್ಟಲೆ ಬಾಕಿ ಇರಿಸುವುದು ಅನುಕ೦ಪದ ನೇಮಕಾತಿ ನಿಯಮ 1996 ಉದ್ದೇಶವನ್ನೇ ವಿಫಲಗೊಳಿಸಿದೆ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.


ಮೈಸೂರಿನ ಎನ್. ಹೃತಿಕ್ ಎಂಬವರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಅವರ ಏಕಸದಸ್ಯ ಪೀಠವು 8 ವಾರದೊಳಗೆ ಅನುಕಂಪದ ನೆಲೆಯಲ್ಲಿ ನೇಮಕಾತಿ ಕೋರಿ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥಪಡಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿತು. ತಪ್ಪಿದ್ದಲ್ಲಿ ಅರ್ಜಿ ಇತ್ಯರ್ಥವಾಗುವವರೆಗೆ ಅರ್ಜಿದಾರರಿಗೆ ಸಿ ದರ್ಜೆ ಅತ್ಯಂತ ಕೆಳ ಹಂತದ ಹುದ್ದೆಯ ಸಂಬಳವನ್ನು ನೀಡತಕ್ಕದ್ದು ಎಂದು ಆದೇಶ ನೀಡಿತು.


3. ಅನುಕಂಪದ ನೇಮಕಾತಿಗೆ ಸರಕಾರಿ ನೌಕರನು ಮೃತನಾದ ಸಂದರ್ಭದಲ್ಲಿ ಊರ್ಜಿತವಾಗಿದ್ದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.


Judgement: ಸರಕಾರದ ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ Vs ಭೀಮೇಶ್ ಯಾನೆ ಭೀಮಪ್ಪ


ಸಹಾಯಕ ಶಿಕ್ಷಕಿಯಾಗಿ ಸೇವೆಯಲ್ಲಿರುವಾಗ ತನ್ನ ಅವಿವಾಹಿತ ಸಹೋದರಿಯು ಮೃತಳಾದ ಪ್ರಯುಕ್ತ ತನಗೆ ಅನುಕಂಪದ ನೆಲೆಯಲ್ಲಿ ನೇಮಕಾತಿ ನೀಡಬೇಕೆಂದು ಕೋರಿ ಭೀಮೇಶ ಯಾನೆ ಭೀಮಪ್ಪ ಎಂಬವರು ಸಲ್ಲಿಸಿದ ಅರ್ಜಿಯನ್ನು ಮೃತಳು ಸಾಯುವ ಸಂದರ್ಭದಲ್ಲಿ ಊರ್ಜಿತವಿರುವ ನಿಯಮಗಳ ಪ್ರಕಾರ ಮೃತಳ ಸಹೋದರನಿಗೆ ನೇಮಕಾತಿ ನೀಡಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕಾಗಿ ನೇಮಕಾತಿ ಪ್ರಾಧಿಕಾರವು ತಿರಸ್ಕರಿಸಿತ್ತು.

ಸದರಿ ಆದೇಶವನ್ನು ರದ್ದುಪಡಿಸುವಂತೆ ಭೀಮೇಶ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು ನೇಮಕಾತಿ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸಿ ಭೀಮೇಶ್ ಅವರಿಗೆ ಅನುಕಂಪದ ನೆಲೆಯಲ್ಲಿ ನೇಮಕಾತಿ ಆದೇಶ ನೀಡುವಂತೆ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರಿಗೆ ಕೆಎಟಿ ನಿರ್ದೇಶನ ನೀಡಿತ್ತು.

ಕೆಎಟಿ ಹೊರಡಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿ ಹೈಕೋರ್ಟ್ ಕೆಎಟಿ ಆದೇಶವನ್ನು ಎತ್ತಿಹಿಡಿಯಿತು. ಅಂತಿಮವಾಗಿ ವಿವಾದವು ಸುಪ್ರೀಂ ಕೋರ್ಟಿನ ಮೆಟ್ಟಲೇರಿತು. ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ಈ ಕೆಳಗಿನಂತೆ ಅಭಿಪ್ರಾಯವನ್ನು ವ್ಯಕ್ತಪಡಿಸಿತು.


ಸರಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರಿಗೆ ನೀಡುವ ಅನುಕಂಪದ ಉದ್ಯೋಗಕ್ಕೆ ನೌಕರರ ಸಾವಿನ ದಿನಾಂಕ ಮತ್ತು ನಿಖರವಾಗಿ ಸೂಚಿತವಾಗಿರುವ ಮಾನದಂಡಗಳನ್ನು ಅನುಸರಿಸಬೇಕು. ಮೃತ ನೌಕರರ ಕುಟುಂಬದವರು ಅನುಕಂಪ ಆಧಾರಿತ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ದಿನಾಂಕ ಅಥವಾ ಇಂಥ ಅರ್ಜಿಯನ್ನು ಪರಿಶೀಲನೆಗೆ ಒಳಪಡಿಸುವ ದಿನಾಂಕವನ್ನು ಪರಿಗಣಿಸಲಾಗದು. ನೌಕರರು ಸಾಯುವ ಸಂದರ್ಭದಲ್ಲಿ ಊರ್ಜಿತವಾಗಿದ್ದ ನಿಯಮವನ್ನು ಪರಿಗಣಿಸಬೇಕಾಗುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ ಭೀಮೇಶ್ ಯಾನೆ ಭೀಮಪ್ಪ ಅವರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ ಆದೇಶಗಳನ್ನು ರದ್ದು ಪಡಿಸಿತು.


ಅನುಕಂಪ ನೇಮಕಾತಿಯ ಸಂದರ್ಭದಲ್ಲಿ ಮೃತ ವ್ಯಕ್ತಿಯ ಕುಟುಂಬದ ಸ್ಥಿತಿಗತಿ; ಆದಾಯ ಮುಂತಾದವುಗಳನ್ನು ಪರಿಗಣಿಸಬೇಕಾಗುತ್ತದೆ. ಹೆಚ್ಚಿನ ಆದಾಯ ಇರುವ ಕುಟುಂಬದ ಸದಸ್ಯರಿಗೆ ಅನುಕಂಪದ ನೆಲೆಯಲ್ಲಿ ಉದ್ಯೋಗ ಸಿಗುವುದಿಲ್ಲ. ಅನುಕಂಪದ ನೆಲೆಯಲ್ಲಿ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆ ಅಥವಾ ಗರಿಷ್ಠ ವಯೋಮಿತಿಯ ನಿರ್ಬಂಧವಿಲ್ಲ .


ಅನುಕಂಪದ ನೇಮಕಾತಿಯನ್ನು ಹಕ್ಕೆಂದು ಪ್ರತಿಪಾದಿಸುವಂತಿಲ್ಲ. ಕಾಲಕಾಲಕ್ಕೆ ಮಾಡುವ ತಿದ್ದುಪಡಿ ನಿಯಮಗಳನ್ನು ಪೂರ್ವಾನ್ವಯ ಗೊಳಿಸುವಂತಿಲ್ಲ ಎಂಬುದು ಸಾಂವಿಧಾನಿಕ ನ್ಯಾಯಾಲಯಗಳು ನೀಡಿದ ತೀರ್ಪಿನ ಸಾರಾಂಶವಾಗಿದೆ.


(Prakash Nayak)


ಲೇಖನ: ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡೀಷಿಯಲ್ ಸೆಂಟರ್, ಮಂಗಳೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣ

Ads on article

Advertise in articles 1

advertising articles 2

Advertise under the article