Making of Indian Constitution- 5 Rathna's : ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪಂಚರತ್ನರು
ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪಂಚರತ್ನರು
ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮ ಪ್ರಖರ ಬುದ್ಧಿಮತ್ತೆಯಿಂದ ವಿವಿಧ ಕ್ಷೇತ್ರಗಳಲ್ಲಿ ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿರುವುದನ್ನು ನಾವು ಕಾಣಬಹುದು.
ಸ್ವಾತಂತ್ರ್ಯದ ನಂತರ ನಮ್ಮ ದೇಶದ ಅಡಳಿತವನ್ನು ಯಾವ ತತ್ವಗಳ ಆಧಾರದಲ್ಲಿ ಯಾವ ಸಿದ್ಧಾಂತಗಳ ಅಡಿ ರೂಪಿಸಬೇಕು ಎಂಬ ಬಗ್ಗೆ ರಚಿಸಲ್ಪಟ್ಟ ಸಂವಿಧಾನ ರಚನಾ ಸಮಿತಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಐವರು ಮಹಾನುಭಾವರಲ್ಲಿ ಒಬ್ಬರು ಸಾಂವಿಧಾನಿಕ ಸಲಹೆಗಾರರಾಗಿ ಉಳಿದ ನಾಲ್ವರು ಸಮಿತಿಯ ಸದಸ್ಯರಾಗಿ ಮಹತ್ವಪೂರ್ಣ ಕೊಡುಗೆ ನೀಡಿರುತ್ತಾರೆ.
ಆ ನಾಲ್ಕು ಮಹನೀಯರ ವ್ಯಕ್ತಿ ಪರಿಚಯ ಈ ಕೆಳಗಿನಂತಿದೆ.
1) ಸರ್ ಬೆನಗಲ್ ನರಸಿಂಹರಾವ್
ಇವರು ಸಂವಿಧಾನದ ಮೂಲ ಕರಡನ್ನು ರಚಿಸಿದವರು. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ದಿ.26.11.1949 ರಂದು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದಾಗ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ನನಗೆ ಸಂದ ಶ್ರೇಯಸ್ಸಿನಲ್ಲಿ ಬಹುದೊಡ್ಡ ಪಾಲು ಸರ್.ಬಿ.ಎನ್. ರಾವ್ ಅವರಿಗೆ ಸಲ್ಲತಕ್ಕದ್ದು. ಏಕೆಂದರೆ ಸಂವಿಧಾನ ಮೂಲ ಕರಡನ್ನು ರಚಿಸಿದವರು ಸರ್.ಬಿ. ಎನ್. ರಾವ್ ಅವರು.
ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬ್ರಿಟಿಷ್ ಭಾರತದ ಬ೦ಗಾಳದಲ್ಲಿ ನ್ಯಾಯಾಧೀಶರಾಗಿ ಸೇವೆಯನ್ನು ಪ್ರಾರಂಭಿಸಿದ ರಾವ್ ಅವರು ಮಾಡಿದ ಬಹುದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ರಚಿಸಿದ್ದು. 2 ವರ್ಷಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿದ ಈ ಮಹತ್ ಕಾರ್ಯಕ್ಕಾಗಿ ರಾವ್ ಅವರಿಗೆ 'ಸರ್' ಎಂಬ ಬಿರುದು ಪ್ರಾಪ್ತವಾಯಿತು.
ಬ್ರಿಟಿಷ್ ಭಾರತದ ಸಂವಿಧಾನ ವೆಂದೆ ಪ್ರಸಿದ್ದಿ ಪಡೆದ ಗವರ್ನ್ ಮೆಂಟ್ ಆಫ್ ಇಂಡಿಯಾ ಆಕ್ಟ್ 1935 ರಚನೆಯಲ್ಲಿ ರಾವ್ ಮಹತ್ವದ ಪಾತ್ರವಹಿಸಿದರು. ಕಲ್ಕತ್ತ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ; ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಗಳಾಗಿ; ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ; ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ನ ಅಧ್ಯಕ್ಷರಾಗಿ ಭಾರತ ದೇಶದ ಕೀರ್ತಿ ವಲ್ಲರಿಯನ್ನು ದಿಶಾಂತರಗಳಲ್ಲಿ ಪಸರಿಸಿದರು.
2) ಶ್ರೀ ಎಚ್. ವಿ. ಕಾಮತ್
ಸಂವಿಧಾನ ರಚನಾ ಸಮಿತಿಯಲ್ಲಿ ಅತ್ಯಧಿಕ ತಿದ್ದುಪಡಿಗಳನ್ನು ಮಂಡಿಸಿದ ಖ್ಯಾತಿ ಹರಿ ವಿಷ್ಣು ಕಾಮತ್ ಅವರಿಗೆ ಸಲ್ಲುತ್ತದೆ.
ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬ್ರಿಟಿಷ್ ಭಾರತದಲ್ಲಿ ಜಿಲ್ಲಾ ಕಲೆಕ್ಟರ್ ಮತ್ತು ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಎಚ್. ವಿ. ಕಾಮತ್ ಅವರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಸಹಕರಿಸಲು ನೀಡಿದ ಕರೆಗೆ ಓಗೊಟ್ಟು ಪ್ರತಿಷ್ಠಿತ ಸರಕಾರಿ ಹುದ್ದೆಗೆ 1938 ರಲ್ಲಿ ರಾಜೀನಾಮೆ ನೀಡಿ ನೇತಾಜಿಯವರು ಸ್ಥಾಪಿಸಿದ ಫಾರ್ವರ್ಡ್ ಬ್ಲಾಕ್ ಪಕ್ಷಕ್ಕೆ ಸೇರಿದರು.
1946 ರಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳಗಳನ್ನು ನೀಡಿ ಅತ್ಯುತ್ಕೃಷ್ಟ ಸಂವಿಧಾನ ರಚನೆಗೆ ಕಾರಣರಾದರು. ಮೂರು ಬಾರಿ ಸ೦ಸದರಾಗಿ ಸೇವೆ ಸಲ್ಲಿಸಿದ್ದಾರೆ.
3) ಶ್ರೀ ಬೆನಗಲ್ ಶಿವ ರಾವ್
ಖ್ಯಾತ ಪತ್ರಕರ್ತರು ಹಾಗುಾ ರಾಜಕಾರಣಿಗಳಾಗಿದ್ದ ಇವರು ಆಂಗ್ಲ ಭಾಷೆಯಲ್ಲಿ ಹೊಂದಿದ್ದ ಪ್ರಭುತ್ವವನ್ನು ಗಮನಿಸಿದ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರು ಬೆನಗಲ್ ಶಿವರಾವ್ ಅವರನ್ನು ತಮ್ಮ ಜೊತೆಯಲ್ಲಿ ಕುಳ್ಳಿರಿಸಿ ಕಲಾಪದ ವರದಿಯನ್ನು ಅವರಿಂದ ಬರೆಸುತ್ತಿದ್ದರು. ಇವರು ಮಂಗಳೂರಿನ ಪ್ರಪ್ರಥಮ ಸಂಸದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕಾರ್ಮಿಕ ಹೋರಾಟಗಾರರಾಗಿದ್ದ ಶಿವರಾಯರು ತಮ್ಮ ರಾಜಕೀಯ ಜೀವನ ಉತ್ತುಂಗ ದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆ ಮತ್ತು ಬರವಣಿಗೆಗೆ ಮೀಸಲಾಗಿಟ್ಟ ವಿಚಿತ್ರ ಹಾಗೂ ಅಪರೂಪದ ರಾಜಕಾರಣಿ ಎನಿಸಿದ್ದಾರೆ.
4) ಉಳ್ಳಾಲ ಶ್ರೀನಿವಾಸ ಮಲ್ಯ
ನವ ಮಂಗಳೂರಿನ ನಿರ್ಮಾತೃರೆಂದೇ ಖ್ಯಾತರಾಗಿರುವ ಇವರು ಸಂವಿಧಾನ ರಚನಾ ಸಮಿತಿಯಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸಿ ಹಲವಾರು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
3 ಬಾರಿ ಸಂಸದರಾಗಿದ್ದ ಮಲ್ಯರು ಸ್ವಾತಂತ್ರ್ಯಾನಂತರ ಮೊದಲ ಪ್ರಧಾನಿ ನೆಹರು ಹಾಗೂ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರೊಡನೆ ಹೊಂದಿದ್ದ ಆತ್ಮೀಯ ಒಡನಾಟದ ಸಂಪೂರ್ಣ ಪ್ರಯೋಜನವನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ನವಮಂಗಳೂರು ಬಂದರು; ಬಜ್ಪೆ ವಿಮಾನ ನಿಲ್ದಾಣ: ಹಾಸನ-ಮಂಗಳೂರು ರೈಲು ಮಾರ್ಗ; ಸುರತ್ಕಲ್ ನಲ್ಲಿ ಇಂಜಿನಿಯರಿಂಗ್ ಕಾಲೇಜ್; ರಾಷ್ಟ್ರೀಯ ಹೆದ್ದಾರಿಗಳು; ಮಂಗಳೂರು ಆಕಾಶವಾಣಿ ಮು೦ತಾದ ಬೃಹತ್ ಮೂಲಸೌಕರ್ಯಗಳನ್ನು ಒದಗಿಸಿ ಕೊಟ್ಟು ನವ ಮ೦ಗಳೂರಿನ ನಿರ್ಮಾತೃ ಎನಿಸಿದರು.
5) ಫಾದರ್ ಜೆರೋಮ್ ಡಿಸೋಜಾ
ಖ್ಯಾತ ಶಿಕ್ಷಣ ತಜ್ಞರಾಗಿದ್ದು, ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದ ಇವರು ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಅವರ ಹಿತರಕ್ಷಣೆಯ ಬಗ್ಗೆ ಸೂಕ್ತ ಪ್ರಾತಿನಿಧ್ಯಗಳ ಬಗ್ಗೆ ವಾದ ಮಂಡಿಸಿ ಸಂವಿಧಾನದಲ್ಲಿ ಅವಕಾಶ ಕಲ್ಪಿಸುವಲ್ಲಿ ಶ್ರಮಿಸಿದ್ದಾರೆ.
ಇಂಗ್ಲಿಷ್ ಹೊರತುಪಡಿಸಿ ಫ್ರೆಂಚ್; ಸ್ಪ್ಯಾನಿಷ್; ಇಟಾಲಿಯನ್ ಮತ್ತು ಜರ್ಮನ್ ಭಾಷೆಗಳಲ್ಲಿ ಕೂಡ ಅಗಾಧ ಪಾಂಡಿತ್ಯ ಹೊಂದಿದ್ದರು. ಇದನ್ನು ಗಮನಿಸಿದ ಪ್ರಧಾನಿ ನೆಹರೂ ಅವರು ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ನಿಯೋಗದ ಸದಸ್ಯರಾಗಿ ಜೆರೋಮ್ ಡಿ ಸೋಜಾ ಅವರನ್ನು ಕಳುಹಿಸಿದರು.
ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ಮೊದಲ ಭಾರತೀಯ ಗವರ್ನರ್ ಜನರಲ್ ರಾಜಾಜಿಯವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು.
ಲೇಖನ: ಶ್ರೀ ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡಿಷೀಯಲ್ ಸೆಂಟರ್, ಮಂಗಳೂರು ನ್ಯಾಯಾಲಯ ಸಂಕೀರ್ಣ