-->
Mangaluru DLSA achievement - ಬೇರ್ಪಟ್ಟ ದಂಪತಿಯನ್ನು ಒಂದುಗೂಡಿಸಿದ ಕಾನೂನು ಮಧ್ಯಸ್ಥಿಕೆ: ದ.ಕ. ಕಾನೂನು ಸೇವಾ ಪ್ರಾಧಿಕಾರದ ಸಾಧನೆ!

Mangaluru DLSA achievement - ಬೇರ್ಪಟ್ಟ ದಂಪತಿಯನ್ನು ಒಂದುಗೂಡಿಸಿದ ಕಾನೂನು ಮಧ್ಯಸ್ಥಿಕೆ: ದ.ಕ. ಕಾನೂನು ಸೇವಾ ಪ್ರಾಧಿಕಾರದ ಸಾಧನೆ!

ಬೇರ್ಪಟ್ಟ ದಂಪತಿಯನ್ನು ಒಂದುಗೂಡಿಸಿದ ಕಾನೂನು ಮಧ್ಯಸ್ಥಿಕೆ: ದ.ಕ. ಕಾನೂನು ಸೇವಾ ಪ್ರಾಧಿಕಾರದ ಸಾಧನೆ!






ಕಳೆದ ಅಕ್ಟೋಬರ್‌ನಲ್ಲಿ ಕೌಟುಂಬಿಕ ಕಲಹಗಳಿಂದಾಗಿ ಮನನೊಂದು ಬೇರ್ಪಟ್ಟಿದ್ದ ಸತಿ-ಪತಿ ಹಾಗೂ ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಒಂದಾದ ಘಟನೆ ನಡೆದಿದೆ.



ಕೌಟುಂಬಿಕ ಜೀವನದಲ್ಲಿ ಕಂಡುಬಂದ ಹಲವಾರು ಸಮಸ್ಯೆಗಳಿಂದ ಮನನೊಂದಿದ್ದ ನಾರಾಯಣ (48 ವರ್ಷ) (ಹೆಸರು ಬದಲಾಯಿಸಲಾಗಿದೆ) ಹಾಗೂ ಸರಳ (46 ವರ್ಷ) (ಹೆಸರು ಬದಲಾಯಿಸಲಾಗಿದೆ) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಡೆಸಿದ ಕೌನ್ಸೆಲಿಂಗ್‌ಗಳಲ್ಲಿ ಸಂಸಾರದ ಜವಬ್ದಾರಿ, ಅದರ ಮಹತ್ವಗಳನ್ನು ಅರಿತುಕೊಂಡು ಸತಿ-ಪತಿಯ ಮನಪರಿವರ್ತಯಾಗಿ ಪುನಃ ಒಂದಾಗಿದ್ದಾರೆ.



ಮಂಗಳೂರಿನ ಮರಕಡದ ನಿವಾಸಿಗಳು ಅವರಿಬ್ಬರು. ಕೌಟುಂಬಿಕ ಕಲಹಗಳಿಂದಾಗಿ ಮನ ನೊಂದು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದರು. ನಾರಾಯಣ್ ಬಿ.ಫಾರ್ಮ್ ಓದಿಕೊಂಡು ಮೆಡಿಕಲ್ ಶಾಪ್ ಹೊಂದಿದ್ದರು.



ಅದರ ಪಕ್ಕದಲ್ಲೆ ಬಿಎಎಂಎಸ್ ಕ್ಲಿನಿಕ್ ನಡೆಸುತ್ತಿದ್ದ ಪತ್ನಿ ಸರಳ ತಾನು ದುಡಿದ ಹಣವನ್ನು ಇಬ್ಬರು ಮಕ್ಕಳ ಹೆಸರಿನಲ್ಲಿ ಫಿಕ್ಸೆಡ್ ಡೆಫಾಸಿಟ್ ಇರಿಸಿದ್ದರು. ಕೌಟುಂಬಿಕ ಜೀವನದಲ್ಲಿ ಏರ್ಪಟ್ಟ ಕೆಲವು ಘರ್ಷಣೆಗಳು ಮತ್ತು ವೈಪರೀತ್ಯಗಳಿಂದಾಗಿ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿತ್ತು.



ಮುಂದಿನ ಜೀವನ ಇಬ್ಬರು ಒಂದಾಗಿ ಸಾಗುವುದು ಕಷ್ಟವೆನಿಸಿತು. ಕಠಿಣ ನಿರ್ಧಾರ ಕೈಗೊಂಡ ಸರಳ ಹಾಗೂ ನಾರಾಯಣ್ ಪರಸ್ಪರ ದೂರವಾದರು. ಸರಳ ಪ್ರತ್ಯೇಕವಾಗಿ ಉಡುಪಿ ಜಿಲ್ಲೆಯ ಸಿದ್ಧಾಪುರದಲ್ಲಿ ಮಕ್ಕಳೊಂದಿಗೆ ವಾಸವಿದ್ದರು.



ಜೀವನ ನಿರ್ವಹಣೆ ಹಾಗೂ ಮಕ್ಕಳ ಭವಿಷ್ಯ ಹಾಗೂ ಅವರ ಶಿಕ್ಷಣಕ್ಕೆ ದಾರಿ ತೋರುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.



ಅರ್ಜಿಯನ್ನು ಪರಿಶೀಲಿಸಿದ ಪ್ರಾಧಿಕಾರವು ನಾರಾಯಣ್ ಹಾಗೂ ಸರಳ ಅವರನ್ನು ಮಂಗಳೂರಿನ ನ್ಯಾಯಲಯದ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಆಹ್ವಾನಿಸಿ, ಅಲ್ಲಿ ಅವರಿಗೆ ನಾಲ್ಕು ಬಾರಿ ಕೌನ್ಸಲಿಂಗ್‌ಗೆ ಒಳಪಡಿಸಿತು. ಈ ಸಂದರ್ಭದಲ್ಲಿ ಪತಿ-ಪತ್ನಿ ಇಬ್ಬರೂ ಒಟ್ಟಿಗೆ ಬಾಳುವಂತೆ ಮನ ಪರಿವರ್ತನೆಗೆ ಮಾಡಲಾಯಿತು.



ನೆಮ್ಮದಿಯ ಜೀವನ ಸಾಗಿಸಲು ಅವರಿಗಿರುವ ದಾರಿಗಳು, ಸೌಲಭ್ಯಗಳು, ಇಬ್ಬರೂ ಹೆಣ್ಣು ಮಕ್ಕಳ ಭವಿಷ್ಯ ಹಾಗೂ ಅವರ ಶಿಕ್ಷಣ ಸೇರಿದಂತೆ ಒಂದಾಗಿ ಬಾಳುವುದರಿಂದ ಆಗುವ ಅನುಕೂಲಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಯಿತು.










ಜಿಲ್ಲಾ ಕಾನೂನು ಸೇವಾ ಪ್ರಾಧಿಕಾದಿಂದ ಕೈಗೊಳ್ಳಲಾದ ಕೌನ್ಸಲಿಂಗ್ ಇಬ್ಬರ ಮೇಲೂ ಗಾಢ ಪರಿಣಾಮ ಬೀರಿದ್ದು, ವಿವಾಹ ವಾರ್ಷಿಕೋತ್ಸವವಾದ ಜ.4 (ಇಂದು) ಪರಿತ್ಯಕ್ತರಾಗಿದ್ದ ಇಬ್ಬರೂ ಮತ್ತೆ ಕೈಹಿಡಿದು ಅನ್ಯೋನ್ಯವಾಗಿ ಜೀವನ ಸಾಗಿಸಲು ಮುಂದಾಗಿದ್ದಾರೆ.



ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಮುರಲೀಧರ ಪೈ. ಬಿ. ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವಿರಾಜ್ ವರ್ಣೇಕರ್ ಈ ದಂಪತಿಯ ಪರಸ್ಪರ ಕೌನ್ಸೆಲಿಂಗ್ ನಡೆಸಿ, ಬೇರೆಯಾಗಿದ್ದ ಪತಿ-ಪತ್ನಿಯನ್ನು ಪ್ರಕರಣ ದಾಖಲಾದ ಅತಿ ಕಡಿಮೆ ಅವಧಿಯಲ್ಲಿ ಒಂದುಗೂಡಿಸಿದ್ದಾರೆ.



ಇದರಿಂದ ಸಂತಸಗೊಂಡಿರುವ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೇವೆ ಅನನ್ಯವಾದದ್ದು, ಅಲ್ಲಿನ ಕೌನ್ಸೆಲಿಂಗ್ ಮತ್ತೆ ನಮ್ಮಿಬ್ಬರನ್ನು ಒಂದುಮಾಡಿತು, ಪರಿತ್ಯಕ್ತ ದಂಪತಿಗಳು ಕಾನೂನು ಸೇವಾ ಪ್ರಾಧಿಕಾರದ ಮಾರ್ಗದರ್ಶನ ಪಡೆದಲ್ಲಿ ಮತ್ತೆ ಒಂದಾಗುವ ಸಾಧ್ಯತೆಗಳು ಹೆಚ್ಚು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೇವೆಯನ್ನು ಶ್ಲಾಘಿಸಿದ್ದಾರೆ.

Ads on article

Advertise in articles 1

advertising articles 2

Advertise under the article