Notary Act amendment - ನೋಟರಿ ಕಾಯ್ದೆ ತಿದ್ದುಪಡಿ ಕೈಬಿಡಿ- ಮೋದಿಗೆ ಪತ್ರ ಬರೆದ ದೇವೇಗೌಡ
ನೋಟರಿ ಕಾಯ್ದೆ ತಿದ್ದುಪಡಿ ಕೈಬಿಡಿ- ಮೋದಿಗೆ ಪತ್ರ ಬರೆದ ದೇವೇಗೌಡ
ನೋಟರಿ ಕಾಯ್ದೆ-1952ರ ಸೆಕ್ಷನ್ 5ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಮುಂದಾಗಿರುವ ಕ್ರಮ ಕೈಬಿಡುವಂತೆ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಪತ್ರ ಬರೆದಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಯನ್ನು ಅಂಗೀಕರಿಸಿದರೆ ದೇಶದ ಎಪ್ಪತ್ತೈದು ಸಾವಿರಕ್ಕೂ ಹೆಚ್ಚು ನೋಟರಿಗಳಿಗೆ ಭರಿಸಲಾಗದ ನಷ್ಟ ಉಂಟಾಗಲಿದೆ ಎಂದು ಪತ್ರದಲ್ಲಿ ಗೌಡರು ಹೇಳಿದ್ದು, ನೋಟರಿಯವರ ಹಿತದೃಷ್ಟಿಯಿಂದ ಈ ಪತ್ರವನ್ನು ಬರೆಯುತ್ತಿರುವುದಾಗಿ ಅವರು ಹೇಳಿದ್ದಾರೆ.
ನೋಟರಿ ವಕೀಲರ ಸೇವಾವಧಿಯನ್ನು ಐದು ವರ್ಷಕ್ಕೆ ಸೀಮಿತಗೊಳಿಸಿ ಮತ್ತು ನೋಟರಿಗಳ ಸೇವಾ ಪ್ರಮಾಣಪತ್ರವನ್ನು ಎರಡು ಅವಧಿಗಷ್ಟೇ ನವೀಕರಿಸುವ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದು ತರ್ಕಬದ್ಧವಲ್ಲ. ನೋಟರಿ ಮಸೂದೆಯ ತಿದ್ದುಪಡಿ, 15 ವರ್ಷಗಳ ಬಳಿಕ ನೋಟರಿ ಮಾಡುವುದನ್ನು ನಿರ್ಬಂಧಿಸುತ್ತದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾನೂನು ವೃತ್ತಿಯು ವೇಗವಾಗಿ ವಿಕಸನಗೊಳ್ಳುತ್ತಿದೆ. ಒಮ್ಮೆ ವಕೀಲರು ನೋಟರಿಯಾದರೆ ಅದು ಶಾಶ್ವತವಾಗಿರುತ್ತದೆ. 15 ವರ್ಷಗಳ ಕಾಲ ನೋಟರಿಯಾಗಿ ಕೆಲಸ ಮಾಡಿದವರು ಸುದೀರ್ಘ ಅವಧಿ ಬಳಿಕ ಮತ್ತೆ ವಕೀಲರಾಗಿ ಪರಿಣಿತ ವಕೀಲರ ನಡುವೆ ಕೆಲಸ ಮಾಡುವುದು ಕಷ್ಟ.
ನೋಟರಿ ಕಾಯ್ದೆ-1952 ರ ಸೆಕ್ಷನ್ 5ರ ತಿದ್ದುಪಡಿ ಸಂವಿಧಾನದ 14, 19, 21 ಮತ್ತು 309 ನೇ ವಿಧಿಗಳನ್ನು ಉಲ್ಲಂಘನೆಯಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ನೋಟರಿ ವೆಲ್ಫೇರ್ ಟ್ರಸ್ಟ್ ತಮಗೆ ಪತ್ರ ಬರೆದಿದೆ. ಹಾಗಾಗಿ, ಪ್ರಸ್ತಾವಿತ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವದ ಕುರಿತೂ ನನಗೆ ಅನುಮಾನಗಳು ಕಾಡುತ್ತಿವೆ ಎಂದು ಗೌಡರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
'ನೋಟರಿ' ವಕೀಲರ ಹಿತದೃಷ್ಟಿಯಿಂದ ಪ್ರಸ್ತಾವಿತ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಪತ್ರದಲ್ಲಿ ನರೇಂದ್ರ ಮೋದಿ ಅವರನ್ನು ವಿನಂತಿಸಿದ್ದಾರೆ.