HC issue notice to Reva University - ಶುಲ್ಕ ನೀಡದ ವಿದ್ಯಾರ್ಥಿಗೆ ಹಾಲ್ ಟಿಕೆಟ್ ಇಲ್ಲ: ರೇವಾ ಖಾಸಗಿ ವಿವಿಗೆ ತುರ್ತು ನೋಟಿಸ್ ಬಿಸಿ ಮುಟ್ಟಿಸಿದ ಹೈಕೋರ್ಟ್
ಶುಲ್ಕ ನೀಡದ ವಿದ್ಯಾರ್ಥಿಗೆ ಹಾಲ್ ಟಿಕೆಟ್ ಇಲ್ಲ: ರೇವಾ ಖಾಸಗಿ ವಿವಿಗೆ ತುರ್ತು ನೋಟಿಸ್ ಬಿಸಿ ಮುಟ್ಟಿಸಿದ ಹೈಕೋರ್ಟ್
ಸರಿಯಾದ ಸಮಯಕ್ಕೆ ಬೋಧನಾ ಶುಲ್ಕ ಪಾವತಿಸದ ಕಾರಣಕ್ಕೆ ವಿದ್ಯಾರ್ಥಿಗೆ ಹಾಲ್ ಟಿಕೆಟ್ ನಿರಾಕರಿಸಿದ ಖಾಸಗಿ ವಿವಿಗೆ ಕರ್ನಾಟಕ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ನಿಗದಿತ ಸಮಯಕ್ಕೆ ಶುಲ್ಕದ ಹಣ ಭರಿಸಲಿಲ್ಲ ಎಂಬ ಕಾರಣಕ್ಕೆ ರೇವಾ ಖಾಸಗಿ ವಿಶ್ವ ವಿದ್ಯಾನಿಲಯ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನೀಡಿರಲಿಲ್ಲ.
ಈ ಕುರಿತ ರಿಟ್ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕರ್ನಾಟಕ ಹೈಕೋರ್ಟ್, ರೇವಾ ಖಾಸಗಿ ವಿವಿಗೆ ತುರ್ತು ನೋಟಿಸ್ ಜಾರಿಗೊಳಿಸಿದ್ದು, ಆ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ರಿಟ್ ಅರ್ಜಿ ವಿಚಾರಣೆ ನಡೆಸಿದ್ದು, ವಿವಿಯ ಜೊತೆಗೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ನೋಟಿಸ್ ಜಾರಿಗೆ ಆದೇಶಿಸಿದೆ.
ಘಟನೆಯ ವಿವರ
ಬೆಂಗಳೂರಿನ ಯಲಹಂಕದ ರೇವಾ ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಅಮರೇಶ್ವರ ಕಾರಟಗಿ ಎಂಬವರು 2018–19ರಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಯಾಗಿದ್ದರು.
ಅವರು 95 ಸಾವಿರ ರೂಪಾಯಿ ಬೋಧನಾ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ರೇವಾ ವಿವಿ ಅವರಿಗೆ ಏಳನೇ ಸೆಮಿಸ್ಟರ್ ಪರೀಕ್ಷೆಯ ಹಾಲ್ ಟಿಕೆಟ್ ನೀಡಿರಲಿಲ್ಲ.
ಈ ಬಗ್ಗೆ ವಿದ್ಯಾರ್ಥಿ ಹೈಕೋರ್ಟ್ ಮೊರೆ ಹೋಗಿದ್ದರು. ಕೋವಿಡ್ ಕಾರಣದಿಂದ ಶುಲ್ಕ ಸಂದಾಯ ಮಾಡಲು ಆಗಿಲ್ಲ. ಕಾಲಾವಕಾಶ ಕೇಳಿದರೂ ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ. ಹಾಗಾಗಿ ಹಾಲ್ ಟಿಕೆಟ್ ನೀಡಲು ವಿವಿ ಆಡಳಿತಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.