Bail rejected for Govt Officer-ಅತ್ಯಾಚಾರ ಆರೋಪಿ 'ಸರ್ಕಾರಿ ಉದ್ಯೋಗಿ' ಎಂಬ ಕಾರಣಕ್ಕೆ ಜಾಮೀನು ನೀಡಲಾಗದು: ಕರ್ನಾಟಕ ಹೈಕೋರ್ಟ್
ಅತ್ಯಾಚಾರ ಆರೋಪಿ ಸರ್ಕಾರಿ ಉದ್ಯೋಗಿ ಎಂಬ ಕಾರಣಕ್ಕೆ ಜಾಮೀನು ನೀಡಲಾಗದು: ಕರ್ನಾಟಕ ಹೈಕೋರ್ಟ್
'ಸರ್ಕಾರಿ ಉದ್ಯೋಗಿ' ಎಂಬ ಕಾರಣಕ್ಕೆ ಅತ್ಯಾಚಾರದಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಹಾಗೂ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಕೆಪಿಟಿಸಿಎಲ್ ಉದ್ಯೋಗಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ನ್ಯಾ. ಎಚ್.ಪಿ ಸಂದೇಶ್ ನೇತೃತ್ವದ ನ್ಯಾಯಪೀಠ ಈ ಆದೇಶ ಮಾಡಿದ್ದು, ಕೆಪಿಟಿಸಿಎಲ್ ಸಹಾಯಕ ಕಾರ್ಯಕಾರಿ ಅಭಿಯಂತರ ಆಗಿರುವ ಆರೋಪಿ ಎಚ್. ಎನ್. ಶ್ರೀನಿವಾಸಮೂರ್ತಿ ಜಾಮೀನು ನಿರಾಕರಿಸಲಾಗಿದೆ.
ಆರೋಪಿ ವಿರುದ್ಧ ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪವಿದೆ. CrPC ಕಲಂ 164ರ ಅಡಿ ಸಂತ್ರಸ್ತೆಯ ಹೇಳಿಕೆ ಹಾಗೂ ವೈದ್ಯಕೀಯ ಸಾಕ್ಷ್ಯಗಳನ್ನು ಗಮನಿಸಿದರೆ ಆರೋಪಿ ಅತ್ಯಾಚಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಆರೋಪಿ ಸಂತ್ರಸ್ತೆಗೆ ಬೆದರಿಸಿರುವ, ಜೀವ ಬೆದರಿಕೆ ಹಾಕಿರುವ ಆರೋಪವಿದೆ ಎಂಬುದನ್ನು ಗಮನಿಸಿರುವ ನ್ಯಾಯಪೀಠ, ಆರೋಪಿ ಸರ್ಕಾರಿ ಉದ್ಯೋಗಿ ಎಂಬ ಕಾರಣಕ್ಕೆ ಜಾಮೀನು ನೀಡಲಾಗದು ಎಂದು ಪೀಠ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಆರೋಪಿತನು ಸರ್ಕಾರಿ ಉದ್ಯೋಗಿ ಎಂಬ ಕಾರಣಕ್ಕೆ ಸುಳ್ಳು ದೂರು ದಾಲಿಸಲಾಗಿದೆ. ಸಂತ್ರಸ್ತೆ ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಒಂದೂವರೆ ತಿಂಗಳ ಬಳಿಕ ತಡವಾಗಿ ದೂರು ಸಲ್ಲಿಸಲಾಗಿದೆ ಮತ್ತು ಅರ್ಜಿದಾರರು 2021ರ ನವೆಂಬರ್ 14ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಅರ್ಜಿದಾರನಿಗೆ ಕೇವಲ 25 ವರ್ಷ. ಆತನ ಉದ್ಯೋಗ ಮತ್ತು ಭವಿಷ್ಯವನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದೂ ಮನವಿ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಾಸಿಕ್ಯೂಷನ್, ಆರೋಪಿತನ ಮನವಿ ಪರಿಗಣಿಸದಂತೆ ಕೋರಿತ್ತು.
ಘಟನೆಯ ವಿವರ
2021ರ ಸೆಪ್ಟೆಂಬರ್ 14ರಂದು ಆರೋಪಿ ಶ್ರೀನಿವಾಸಮೂರ್ತಿ ಹೋಮ್ ಸ್ಟೇ ಯೊಂದಕ್ಕೆ ತನ್ನನ್ನು ಕರೆದೊಯ್ದು ತನ್ನ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ತನಗೆ ಈಗಾಗಲೇ ವಿವಾಹ ನಿಶ್ಚಿತಾರ್ಥ ನಡೆದಿದೆ ಎಂದು ಹೇಳಿದರೂ ಬಲವಂತದ ಸಂಭೋಗ ನಡೆಸಿದ. ಆ ಬಳಿಕ ಮದುವೆ ಆಗುವುದಾಗಿ ಭರವಸೆ ನೀಡಿ ಪುಸಲಾಯಿಸಿ, ಅತ್ಯಾಚಾರದ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ 2021ರ ನವೆಂಬರ್ 3ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು.
ದೂರನ್ನು ದಾಖಲಿಸಿದ ಪೊಲೀಸರು ಆರೋಪಿ ಶ್ರೀನಿವಾಸಮೂರ್ತಿ ವಿರುದ್ಧ IPC ಸೆಕ್ಷನ್ 376, 420 ಹಾಗೂ 506 ಅಡಿ FIR ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶ್ರೀನಿವಾಸಮೂರ್ತಿ ಜಾಮೀನಿಗೆ ಅರ್ಜಿಯನ್ನು ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಹೈಕೋರ್ಟ್ ಮೊರೆಹೋಗಿದ್ದ.