Relax restrictions for court proceedings- ಎಲ್ಲೆಡೆ ಕೋವಿಡ್ ಸೋಂಕು ಇಳಿಕೆ- ಕೋರ್ಟ್ ಕಲಾಪ ನಿರ್ಬಂಧ ಸಡಿಲಿಕೆ ನಿರೀಕ್ಷೆ
ಎಲ್ಲೆಡೆ ಕೋವಿಡ್ ಸೋಂಕು ಇಳಿಕೆ- ಕೋರ್ಟ್ ಕಲಾಪ ನಿರ್ಬಂಧ ಸಡಿಲಿಕೆ ನಿರೀಕ್ಷೆ
ಕರ್ನಾಟಕ ರಾಜ್ಯದಾದ್ಯಂತ ಕೋವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿದಿದೆ. ಆದರೆ, ಕರ್ನಾಟಕ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ಕಲಾಪಗಳಿಗೆ ವಿಧಿಸಿರುವ ನಿರ್ಬಂಧ ಮಾತ್ರ ಮುಂದುವರಿದಿದೆ. ವಕೀಲರು ಮತ್ತು ಅವರ ಸಿಬ್ಬಂದಿ ಈ ನಿರ್ಬಂಧದಿಂದ ಸಂಕಷ್ಟಕ್ಕೊಳಗಾಗಿದ್ದು, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ತೀವ್ರವಾಗಿ ನೊಂದುಹೋಗಿದ್ದಾರೆ.
ಸೋಂಕು ಅಪಾಯಕಾರಿ ಆಗಿಲ್ಲದಿರುವುದರಿಂದ ಮತ್ತು ಅದರ ಪ್ರಮಾಣ ಮತ್ತು ವ್ಯಾಪಕತೆ ತಗ್ಗಿರುವುದರಿಂದ ನಿರ್ಬಂಧ ಸಡಿಲಿಕೆಗೆ ಇದು ಸಕಾಲ. ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡಲು ಹಾಗೂ ವಕೀಲರು ಕಲಾಪಗಳಿಗೆ ಖುದ್ದು ಹಾಜರಾಗಲು ಅನುವು ಮಾಡಿಕೊಡಬೇಕು ಎಂಬುದು ಎಲ್ಲ ವಕೀಲರು ಮತ್ತು ವಿವಿಧ ವಕೀಲರ ಸಂಘದ ಅಭಿಪ್ರಾಯ.
ಬೆಂಗಳೂರು ವಕೀಲರ ಸಂಘ (ಎಎಬಿ) ಕೂಡ ಮಾನ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಈ ಬಗ್ಗೆ ಮನವಿ ಮಾಡಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಪತ್ರ ಬರೆದಿದ್ದಾರೆ.
ರಾಜ್ಯದಾದ್ಯಂತ ಕೋವಿಡ್ ಸೋಂಕು ಇಳಿಕೆಯಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು ತೆಗೆದುಹಾಕಿದೆ. ಇದನ್ನು ಪರಿಗಣಿಸಿ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡಲು ಹಾಗೂ ವಕೀಲರು ಕಲಾಪಗಳಿಗೆ ಖುದ್ದು ಹಾಜರಾಗಲು ಅನುವು ಮಾಡಿಕೊಡಬೇಕು ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಕೋವಿಡ್ ನಿರ್ಬಂಧದಿಂದ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲ ಸಮುದಾಯ ಮತ್ತಷ್ಟು ಸಂಕಷ್ಟಕ್ಕೊಳಗಾಗದಂತೆ ನೋಡಿಕೊಳ್ಳುವ ಕಾರಣಕ್ಕಾಗಿ ಮುಕ್ತ ಕಲಾಪಗಳಿಗೆ ಅವಕಾಶ ನೀಡಬೇಕು ಎಂದು ಎಎಬಿ ಪತ್ರದಲ್ಲಿ ಒತ್ತಾಯಿಸಿದೆ.