SC notice to EC, Union Govt- ಸರ್ಕಾರಿ ದುಡ್ಡಲ್ಲಿ ಓಟಿಗಾಗಿ ಗಿಮಿಕ್: ಎಲೆಕ್ಷನ್ ಹೆಸರಲ್ಲಿ ಪೊಳ್ಳು ಭರವಸೆ- ರಾಜಕೀಯ ಪಕ್ಷಗಳ ವಿರುದ್ಧ ಕ್ರಮ..?
ಸರ್ಕಾರಿ ದುಡ್ಡಲ್ಲಿ ಓಟಿಗಾಗಿ ಗಿಮಿಕ್: ಎಲೆಕ್ಷನ್ ಹೆಸರಲ್ಲಿ ಪೊಳ್ಳು ಭರವಸೆ- ರಾಜಕೀಯ ಪಕ್ಷಗಳ ವಿರುದ್ಧ ಕ್ರಮ..?
ಚುನಾವಣೆಗೂ ಮುನ್ನ ಖಜಾನೆ ಹಣ ಬಳಸಿಕೊಂಡು ಉಚಿತ ಕೊಡುಗೆಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆ ವಾಪಸ್ ಪಡೆದು ಅವುಗಳ ನೋಂದಣಿ ರದ್ದುಗೊಳಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರ, ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಈ ಬಗ್ಗೆ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಪೀಠವನ್ನು ಕೋರಿದ್ದರು.
ಅರ್ಜಿದಾರರು ಪ್ರಸ್ತಾಪಿಸಿರುವ ವಿಷಯವು ಗಂಭೀರ ಸ್ವರೂಪದ್ದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ ರಮಣ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
'ಇದೊಂದು ಗಂಭೀರ ಸಮಸ್ಯೆ. ಸಾಮಾನ್ಯ ಬಜೆಟ್ ಅನ್ನೂ ಮೀರಿಸುವ ರೀತಿಯಲ್ಲಿ ಉಚಿತ ಕೊಡುಗೆಗಳ ಬಜೆಟ್ ಇರುತ್ತದೆ. ಇದು ಭ್ರಷ್ಟಾಚಾರವಲ್ಲ. ಆದರೂ ಅಸಮಾನ ವೇದಿಕೆ ಸೃಷ್ಟಿಸುತ್ತದೆ' ಎಂದು ಸಿಜೆಐ ಟೀಕಿಸಿದರು.
ಕೇವಲ ಕಾಂಗ್ರೆಸ್, ಶಿರೋಮಣಿ ಅಕಾಲಿದಳ ಹಾಗೂ ಎಎಪಿ ಪಕ್ಷಗಳನ್ನು ಮಾತ್ರ ಅರ್ಜಿಯಲ್ಲಿ ಅರ್ಜಿದಾರರು ಪ್ರಸ್ತಾಪಿಸಿರುವ ಬಗ್ಗೆಯೂ ನ್ಯಾಯಾಲಯ ಗಮನ ಹರಿಸಿತು. ನೀವು ಅಫಿಡವಿಟ್‌ನಲ್ಲಿ ಇಬ್ಬರ ಹೆಸರನ್ನು ಮಾತ್ರ ಉಲ್ಲೇಖಿಸಿದ್ದೀರಿ ಎಂದು ಸಿಜೆಐ ಆಕ್ಷೇಪಿಸಿದರು. ನ್ಯಾ. ಕೊಹ್ಲಿ "ನೀವು ನಿಮಗೆ ಬೇಕಾದಂತೆ ಆಯ್ಕೆ ಮಾಡಿಕೊಂಡಿದ್ದೀರಿ" ಎಂದು ಹೇಳಿದರು.
ಇಷ್ಟಾದರೂ ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಕಾನೂನು ಸಮಸ್ಯೆಯನ್ನು ಪರಿಗಣಿಸಿ ನ್ಯಾಯಾಲಯವು ನೋಟಿಸ್ ನೀಡಿತು.