supreme court- ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಕಲಂ 5: ತಡೆಯಾಜ್ಞೆ ಅರ್ಜಿ; ನೋಟಿಸ್ ನೀಡಿದ ಸುಪ್ರೀಂ
ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಕಲಂ 5: ತಡೆಯಾಜ್ಞೆ ಅರ್ಜಿ; ನೋಟಿಸ್ ನೀಡಿದ ಸುಪ್ರೀಂ
ಮದುವೆಗಾಗಿ ಧಾರ್ಮಿಕ ಮತಾಂತರವಾಗಲು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಕಡ್ಡಾಯಗೊಳಿಸಿದ "ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ" ಸೆಕ್ಷನ್ 5ಕ್ಕೆ ತಡೆ ನೀಡಿರುವ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣ: ಗುಜರಾತ್ ಸರ್ಕಾರ Vs ಜಮಿಯತ್ ಉಲಮಾ ಇ-ಹಿಂದ್ ಗುಜರಾತ್ ಮತ್ತಿರರು
ಅಂತರ್ಧರ್ಮದ ಮದುವೆಗಳನ್ನು ಯಾವುದೇ ಬಲವಂತ, ಆಮಿಷ ಅಥವಾ ಮೋಸದ ಮಾರ್ಗವಿಲ್ಲದೆ ನಡೆಸಿರುವ ಹಲವು ನಿರ್ದರ್ಶನಗಳಿವೆ. ಆದರೂ ಸೆಕ್ಷನ್ 5ರ ಅನುಷ್ಠಾನಕ್ಕೆ ತಡೆ ನೀಡಲಾಗಿದೆ ಎಂದು ಮೇಲ್ಮನವಿ ಅರ್ಜಿದಾರರು ಹೇಳಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾ. ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರ ನ್ಯಾಯಪೀಠ ಕೈಗೆತ್ತಿಕೊಂಡಿತು.
ಯಾವುದೇ ವ್ಯಕ್ತಿಯನ್ನು ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಲು ಮೂಲಭೂತ ಹಕ್ಕು ಇಲ್ಲ ಎಂಬುದಾಗಿ ರೆ. ಸ್ಟೇನಿ ಸ್ಲಾಸ್ Vs ಮಧ್ಯಪ್ರದೇಶ ಸರ್ಕಾರ ಪ್ರಕರಣದಲ್ಲಿ ನೀಡಲಾದ ತೀರ್ಪು ಹೇಳುತ್ತದೆ. ಹಾಗಾಗಿ ಮದುವೆಗಾಗಿ ಧಾರ್ಮಿಕ ಮತಾಂತರವಾಗಲು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಕಡ್ಡಾಯ ಎಂಬ ಕಾಯ್ದೆಯ ಸೆಕ್ಷನ್ 5 ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರದು ಎಂದು ಗುಜರಾತ್ ಸರ್ಕಾರ ವಾದಿಸಿತು.
ಇದಕ್ಕೂ ಮೊದಲು, ಸೆಕ್ಷನ್ 5 ರ ಮೇಲಿನ ತಡೆಯಾಜ್ಞೆಯು ವಿವಾಹವಾಗುವ ಸಂದರ್ಭದಲ್ಲಿನ ಮತಾಂತರಕ್ಕೆ ನೀಡುವ ಅನುಮತಿಗೆ ಸಂಬಂಧಿಸಿದಂತೆ ಮಾತ್ರ ಇದ್ದು ಇತರೆ ಕಾರಣಗಳಿಗೆ ಮತಾಂತರಕ್ಕೆ ಅನುಮತಿಗೆ ತಡೆ ಬೀಳದು ಎಂದು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಸ್ಪಷ್ಟಪಡಿಸಿದ್ದರು.