-->
Hijab Row- Govt briefs its stand before HC- ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಸರ್ಕಾರದ ವಾದ ಮಂಡನೆ ಹೇಗಿತ್ತು..?

Hijab Row- Govt briefs its stand before HC- ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಸರ್ಕಾರದ ವಾದ ಮಂಡನೆ ಹೇಗಿತ್ತು..?

ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಸರ್ಕಾರದ ವಾದ ಮಂಡನೆ ಹೇಗಿತ್ತು..?


ಶಿಕ್ಷಣ ಸಂಸ್ಥೆಗಳ ಹಿಜಾಬ್ ನಿರ್ಬಂಧದ ಕ್ರಮ ಹಾಗೂ ರಾಜ್ಯ ಸರ್ಕಾರದ ವಸ್ತ್ರ ಸಂಹಿತೆ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿತು.


ಉಡುಪಿಯ ಪಿ.ಯು. ಕಾಲೇಜು ವಿದ್ಯಾರ್ಥಿನಿ ರೇಷಮ್ ಮತ್ತಿತರರ ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಹೈಕೋರ್ಟ್ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.





ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಸುಧೀರ್ಘ ವಾದ ಮಂಡಿಸಿದರು. ವಾದ ಆಲಿಸಿದ ಪೀಠ, ಸರ್ಕಾರದಿಂದ ಕೆಲವು ಸ್ಪಷ್ಟನೆಗಳನ್ನು ಕೇಳಿತು. ಕಾಲಾವಕಾಶದ ಕೊರತೆ ಕಾರಣ ವಿಚಾರಣೆಯನ್ನು ಮುಂದೂಡಲಾಯಿತು.


ಸಮವಸ್ತ್ರ ನಿಗದಿಪಡಿಸುವ ವಿಚಾರವನ್ನು ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟುಕೊಟ್ಟಿದೆ. ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದು ಅಡ್ವೊಕೇಟ್ ಜನರಲ್ ವಾದಿಸಿದರು.


ಸರ್ಕಾರದ ಆದೇಶದಲ್ಲಿ ಹಿಜಾಬ್ ನಿರ್ಬಂಧಿಸಿಲ್ಲ. ಆಗ ಉಳಿಯುವುದು ಸಾಂವಿಧಾನಿಕ ಪ್ರಶ್ನೆ ಮಾತ್ರ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವೇ ಎಂಬುದನ್ನು ತೀರ್ಮಾನಿಸಬೇಕಿದೆ. ಕಾಲೇಜು ಅಭಿವೃದ್ಧಿ ಸಮಿತಿ ಶಾಸನಾತ್ಮಕ ಸಂಸ್ಥೆಯಲ್ಲ. ಹೈಕೋರ್ಟ್ ಈ ಸಮಿತಿಗಳಿಗೆ ನಿರ್ದೇಶನ ನೀಡುವ ಅಗತ್ಯವಿದೆಯೇ ನ್ಯಾಯಪೀಠ ಪ್ರಶ್ನೆ ಮಾಡಿತು.


ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂಬುದನ್ನು ನಿರ್ಧರಿಸಬೇಕು ನಿಜ. ಸಂಪೂರ್ಣ ವಿವಾದವೇ ಹಿಜಾಬ್​ನ ಕುರಿತಾಗಿ ಉದ್ಭವಿಸಿದೆ. ಉಡುಪಿ ಕಾಲೇಜಿನ ಸಿಡಿಸಿ ಹಿಜಾಬ್ ನಿರ್ಬಂಧಿಸಿದೆ. ಹೀಗಾಗಿ ಹೈಕೋರ್ಟ್ ಈ ಬಗ್ಗೆಯೂ ತೀರ್ಮಾನ ನೀಡುವ ಅಗತ್ಯವಿದೆ ಎಂದು ಸರ್ಕಾರದ ಪರ ವಕೀಲರು ವಾದಿಸಿದರು.


ನ್ಯಾ. ಖಾಜಿ ಜೈಬುನ್ನೀಸಾ ಪ್ರಶ್ನೆ

ವಿಚಾರಣೆ ವೇಳೆ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಪ್ರಶ್ನಿಸಿ, ಧಾರ್ಮಿಕ ಆಚರಣೆ, ಆತ್ಮಸಾಕ್ಷಿಯ ಆಚರಣೆಯಾಗುವುದೇ ಎಂದರು. ಇದಕ್ಕೆ ಉತ್ತರಿಸಿದ ಎಜಿ, ಧಾರ್ಮಿಕ ಸಂಪ್ರದಾಯಗಳನ್ನು ಒಪ್ಪುವ ಅಥವಾ ಒಪ್ಪದಿರುವ ಅಂಶಗಳ ಮೇಲೆ ಆತ್ಮಸಾಕ್ಷಿಯ ಅಭಿವ್ಯಕ್ತಿಯು ಧಾರ್ಮಿಕ ಆಚರಣೆಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದರು.


ಧರ್ಮ ನಂಬದವರಿಗೂ ಸಂವಿಧಾನದಲ್ಲಿ ರಕ್ಷಣೆ ಇದೆ

ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಪ್ರಶ್ನಿಸಿ, ದೇವರನ್ನು ನಂಬದವರಿಗೂ ಸಂವಿಧಾನದ ರಕ್ಷಣೆಯಿದೆಯಲ್ಲವೇ ಎಂದರು. ಇದಕ್ಕೆ ಉತ್ತರಿಸಿದ ಎಜಿ, ಆತ್ಮಸಾಕ್ಷಿ, ಆತ್ಮಸಾಕ್ಷಿಯ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಬೇರೆ ಬೇರೆ. ಆದರೆ, ಅವೆರಡೂ ಜೊತೆಯಾಗಿಯೂ ಸಾಗಬಹುದು. ಧರ್ಮವನ್ನು ಶಿಕ್ಷಣದಿಂದ ಹೊರಗಿಡಬೇಕು. 2017 ರ ಸುಪ್ರೀಂಕೋರ್ಟ್ ತೀರ್ಪಿನಲ್ಲೂ ಇದನ್ನೇ ಹೇಳಲಾಗಿದೆ ಎಂದರು.


2ನೇ ಮದುವೆ ವಾದ ಒಪ್ಪಿರಲಿಲ್ಲ

ಜಾವೇದ್ ವರ್ಸಸ್ ಹರಿಯಾಣ ಪ್ರಕರಣದಲ್ಲಿಯೂ ಹೈಕೋರ್ಟ್ ಇದೇ ತೀರ್ಪು ನೀಡಿದೆ. 2ನೇ ಮದುವೆಯಾದವರಿಗೆ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧವಿತ್ತು. ಆಗ ಜಾವೇದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಇಸ್ಲಾಂನಲ್ಲಿ ಒಂದಕ್ಕಿಂತ ಹೆಚ್ಚಿನ ಮದುವೆಗೆ ಅವಕಾಶವಿದೆ. ಹೀಗಾಗಿ ಸಂವಿಧಾನದ ರಕ್ಷಣೆ ಇದೆ ಎಂದು ವಾದಿಸಿದ್ದ. ಆದರೆ ನ್ಯಾಯಾಲಯ ಈತನ ವಾದವನ್ನು ಒಪ್ಪಲಿಲ್ಲ ಎಂದು ಎಜಿ ವಿವರಿಸಿದರು.


ಗೌಡ ಸಾರಸ್ವತ ಪೂಜೆ ಪ್ರಕರಣ ಉಲ್ಲೇಖ

ಮೂಲಭೂತ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು. ಆ ಆಚರಣೆಗಳು ಇಲ್ಲದಿದ್ದರೆ ಧರ್ಮದ ಅಸ್ತಿತ್ವಕ್ಕೆ ಧಕ್ಕೆಯಾಗುವಂತಿರಬೇಕು. ಆ ಆಚರಣೆ ಇಲ್ಲವಾದರೆ ಧರ್ಮವೇ ಕಣ್ಮರೆಯಾಗುವಂತಿರಬೇಕು. ಆ ಆಚರಣೆಗಳೇ ಧರ್ಮವೊಂದರ ಬುನಾದಿಯಂತಿರಬೇಕು. ಅಂತಹ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು. ಇದನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿದೆ. ಆ ಪ್ರಕಾರ ಹಿಜಾಬ್ ಅಗತ್ಯಗತ್ಯ ಆಚರಣೆಯಲ್ಲ. ವೆಂಕಟರಮಣ ದೇವರು ಪ್ರಕರಣದಲ್ಲಿಯೂ ಸುಪ್ರೀಂಕೋರ್ಟ್ ಇದೇ ತೀರ್ಪು ನೀಡಿದೆ. ಗೌಡ ಸಾರಸ್ವತ ಬ್ರಾಹ್ಮಣರ ಪೂಜೆಯ ಅಧಿಕಾರದ ಪ್ರಕರಣದಲ್ಲೂ ಇದೇ ತೀರ್ಪಿದೆ. ಹೀಗಾಗಿ, ಆಹಾರ, ಉಡುಪು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದರು.


ಮೌಢ್ಯಗಳು ಆಚರಣೆಯ ಭಾಗವಲ್ಲ

ಎಲ್ಲ ಧಾರ್ಮಿಕ ಆಚರಣೆ ಯಾ ಚಟುವಟಿಕೆಗಳಿಗೆ ಸಂವಿಧಾನದ ರಕ್ಷಣೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಶಬರಿಮಲೆ ಪ್ರಕರಣದ ತೀರ್ಪಿನಲ್ಲಿ ಹೇಳಿದೆ. ಅನಗತ್ಯ ಮೌಢ್ಯಗಳನ್ನು ಧಾರ್ಮಿಕ ಅತ್ಯಗತ್ಯ ಭಾಗ ಎಂದು ಪರಿಗಣಿಸಲಾಗದು. ಅದಕ್ಕೂ ಮುನ್ನ, ಅದು ಅತ್ಯಗತ್ಯ ಧಾರ್ಮಿಕ ಆಚರಣೆಯೆಂದು ಸಾಬೀತಾಗಬೇಕು. ಈ ಆಚರಣೆ ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿರಬಾರದು. ಸಾರ್ವಜನಿಕ ಆರೋಗ್ಯ, ನೈತಿಕತೆಗೆ ವಿರುದ್ಧವಿರಬಾರದು. ಮೂಲಭೂತ ಹಕ್ಕುಗಳಿಗೂ ವಿರುದ್ಧವಿರಬಾರದು. ಆಗಷ್ಟೇ ಅದಕ್ಕೆ ಸಂವಿಧಾನದ ರಕ್ಷಣೆ ಸಿಗಲಿದೆ. ಧಾರ್ಮಿಕವಾಗಿ ಅತ್ಯಗತ್ಯ ಎಂದು ಹೇಳಿದರೆ ಸಾಲದು. ಧರ್ಮಕ್ಕೇ ಅತ್ಯಗತ್ಯ ಆಚರಣೆ ಎಂದು ನಿರೂಪಿಸಬೇಕು ಎಂದು ಎಜಿ ವಾದಿಸಿದರು.


ಕುರಾನ್ ನ ಕೆಲವು ಅಂಶಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ

ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಅರ್ಜಿದಾರರು ಒಂದು ದಾಖಲೆಯನ್ನೂ ಮುಂದಿಟ್ಟಿಲ್ಲ. ಅವರು ಶೂನ್ಯ ಸಾಕ್ಷ್ಯ ನೀಡಿ ಹಿಜಾಬ್ ಪರ ಆದೇಶ ಕೇಳುತ್ತಿದ್ದಾರೆ. ಕುರಾನ್ ಉಲ್ಲೇಖಿಸಿದ ಆಚರಣೆಗಳ ಪರವಾಗಿ ಹಿಂದೆಯೂ ಅರ್ಜಿ ಇತ್ತು. ಈ ಹಿಂದೆ ನಾಲ್ಕು ಘಟನೆಗಳಲ್ಲಿ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರಾಣಿ ಬಲಿ ಇಸ್ಲಾಂನ ಅತ್ಯಗತ್ಯ ಭಾಗವೆಂದು ಘೋಷಿಸಲು ನಿರಾಕರಿಸಿದೆ. ಬಹುಪತ್ನಿತ್ವ ಇಸ್ಲಾಂನ ಅತ್ಯಗತ್ಯ ಭಾಗ ಎಂಬುದನ್ನು ಒಪ್ಪಿಲ್ಲ. ಬಾಬ್ರಿ ಮಸೀದಿ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತ್ರಿವಳಿ ತಲಾಖ್ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ವಕ್ಫ್ ಗೆ ಸೇರಿದ ಹೋಟೆಲ್ಲೊಂದರಲ್ಲಿ ವೈನ್, ಹಂದಿ ಮಾಂಸ ಪೂರೈಕೆಯಾದ ಸಂದರ್ಭದಲ್ಲಿ ಇದು ಹರಾಮ್ ಎಂದು ಲೀಸ್ ಅಂತ್ಯಗೊಳಿಸಲಾಗಿತ್ತು. ಈ ವೇಳೆ ಕೋರ್ಟ್ ಹೋಟೆಲ್ ಪರವಾಗಿ ತೀರ್ಪು ನೀಡಿತ್ತು ಎಂದು ಎಜಿ ಹಲವು ಪ್ರಕರಣಗಳನ್ನು ಉಲ್ಲೇಖಿಸಿದರು.

Ads on article

Advertise in articles 1

advertising articles 2

Advertise under the article