Hindu Succession Act- ಉತ್ತರಾಧಿಕಾರ ಕಾಯ್ದೆಯಡಿ ವರದಕ್ಷಿಣೆಯಾಗಿ ಪಡೆದ ಆಸ್ತಿಯನ್ನೂ ಸೇರಿಸಬಹುದು: ಕರ್ನಾಟಕ ಹೈಕೋರ್ಟ್
ವರದಕ್ಷಿಣೆಯಾಗಿ ಪಡೆದ ಆಸ್ತಿಯನ್ನೂ ಉತ್ತರಾಧಿಕಾರ ಕಾಯ್ದೆಯಡಿ ಸೇರಿಸಬಹುದು: ಕರ್ನಾಟಕ ಹೈಕೋರ್ಟ್
ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆಯ ಕಲಂ. 6 ರ ಅನ್ವಯ, ಮಹಿಳೆಯು ತನ್ನ ತಂದೆ ಯಾ ಸಹೋದರನ ವಿರುದ್ಧ, ಭಾಗಾಂಶ ಕೋರಿ ದಾಖಲಿಸಿರುವ ದಾವೆಯಲ್ಲಿ, ಆಕೆಯ ಪತಿಗೆ ವರದಕ್ಷಿಣೆಯಾಗಿ ನೀಡಿದ ಅವಿಭಕ್ತ ಕುಟುಂಬದ ಆಸ್ತಿಗಳನ್ನು ಸಹ ಸೇರಿಸಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣ WP 39982/2018: ಹೇಮಲತಾ Vs ವೆಂಕಟೇಶ್ ಮತ್ತು ಇತರರು Dated: 16/02/2022
ಹಿಂದೂ ಉತ್ತರಾಧಿಕಾರ ಕಾಯ್ದೆ ಅಡಿ ಮಹಿಳೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವಾಗ ಅಥವಾ ಆಸ್ತಿ ವಿಭಜನೆ ಕೋರಿ ದಾವೆ ಹೂಡಿದ ಪಕ್ಷದಲ್ಲಿ, ಆಕೆಗೆ ವಿವಾಹದ ಸಂದರ್ಭದಲ್ಲಿ ವರದಕ್ಷಿಣೆಯಾಗಿ ನೀಡಲಾದ ಆಸ್ತಿಗಳನ್ನು ಕೂಡ ದಾವೆಯಲ್ಲಿ ಸೇರಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರಿನ ಹೇಮಲತಾ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರ
Hindu Succession Succession Actನ ಸೆಕ್ಷನ್ 6ರ ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಬೇಕೆಂದು ಆಗ್ರಹಿಸಿ ಹೇಮಲತಾ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.
ದಾವೆಯಲ್ಲಿ ಹಾಜರಾದ ಅರ್ಜಿದಾರರ ಸಹೋದರ, ತನ್ನ ಸಹೋದರಿಯ ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ ನೀಡಿದ ಜಮೀನನ್ನೂ 'ವಿಭಜನೆ ದಾವೆ'ಯಲ್ಲಿ ಸೇರಿಸುವಂತೆ ಮನವಿ ಮಾಡಿದ್ದರು.
ಈ ಮನವಿಯನ್ನು ಸಿಟಿಸಿವಿಲ್ ಕೋರ್ಟ್ 2018ರ ಆಗಸ್ಟ್ 8ರಂದು ಪರಿಗಣಿಸಿ, ಅರ್ಜಿ ಮಾರ್ಪಡಿಸುವಂತೆ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಹೇಮಲತಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ವರದಕ್ಷಿಣೆಯಾಗಿ ನೀಡಿರುವ ಆಸ್ತಿ ಎನ್ನಲಾದ ಆಸ್ತಿಯನ್ನು ಅರ್ಜಿದಾರರ ಮಾವ ಹಾಗೂ ಪತಿ ಅವರ ಸ್ವಂತ ಹಣದಿಂದ ಖರೀದಿಸಿದ್ದಾರೆ. ಈ ಆಸ್ತಿಯನ್ನು ವಿಭಜನೆ ದಾವೆಯಲ್ಲಿ ಸೇರಿಸಬೇಕಾಗಿಲ್ಲ. ಹೀಗಾಗಿ, ಆಸ್ತಿಯನ್ನು ದಾವೆಯಲ್ಲಿ ಸೇರಿಸುವಂತೆ ಸಿವಿಲ್ ಕೋರ್ಟ್ ನೀಡಿರುವ ಆದೇಶ ನ್ಯಾಯಸಮ್ಮತವಲ್ಲ ಎಂದು ಹೇಮಲತಾ ವಾದಿಸಿದ್ದರು.
ಆದರೆ, ಅದು ಮದುವೆ ವೇಳೆ ಉಡುಗೊರೆಯಾಗಿ ನೀಡಲಾದ ಆಸ್ತಿ. ಹಾಗಾಗಿ ಆ ಆಸ್ತಿಯನ್ನು ದಾವೆಯಲ್ಲಿ ಸೇರಿಸಬೇಕು ಎಂದು ಹೇಮಲತಾ ಸಹೋದರ ಪ್ರತಿವಾದ ಮಂಡಿಸಿದ್ದರು.
ಹೈಕೋರ್ಟ್ ತೀರ್ಪು
ಅರ್ಜಿದಾರರು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಆಸ್ತಿ ಪಡೆದಿದ್ದರೆ ಅದನ್ನು ಕೂಡ ಆಸ್ತಿ ವಿಭಜನೆ ಸಂದರ್ಭದಲ್ಲಿ ಒಟ್ಟು ಆಸ್ತಿಯಾಗಿ ಪರಿಗಣಿಸಬೇಕಾಗುತ್ತದೆ. ಆದರೆ, ಸ್ವಂತವಾಗಿ ಖರೀದಿಸಿದ ಆಸ್ತಿಯಾಗಿದ್ದರೆ ಅದನ್ನು ವಿಭಜನೆ ದಾವೆಯಲ್ಲಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ವರದಕ್ಷಿಣೆ ರೂಪದಲ್ಲಿ ಅರ್ಜಿದಾರರು ಆಸ್ತಿ ಪಡೆದಿದ್ದರೆ ಅದನ್ನು ಆಸ್ತಿ ವಿಭಜನೆಗಾಗಿ ದಾವೆ ಹೂಡುವಾಗ ನಮೂದಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವಿವಾದಿತ ಆಸ್ತಿ ಮಹಿಳೆಗೆ ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದೋ ಅಥವಾ ಸ್ವಂತವಾಗಿ ಖರೀದಿಸಿದ್ದೋ ಎಂಬುದನ್ನು ವಿಚಾರಣಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸುವಂತೆ ಸೂಚಿಸಿದೆ.
for Judgement Link click here below:
ಪ್ರಕರಣ WP 39982/2018: ಹೇಮಲತಾ Vs ವೆಂಕಟೇಶ್ ಮತ್ತು ಇತರರು Dated: 16/02/2022