Js. Pushpa Ganediwala Retires - ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂಬ ವಿವಾದಿತ ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ನಿವೃತ್ತಿ
ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂಬ ವಿವಾದಿತ ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ನಿವೃತ್ತಿ
'ಚರ್ಮದಿಂದ ಚರ್ಮಕ್ಕೆ ಸ್ಪರ್ಶವಾದರೆ ಮಾತ್ರ ಲೈಂಗಿಕ ದೌರ್ಜನ್ಯ' ಎಂಬ ಕುಖ್ಯಾತ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
'ಚರ್ಮದಿಂದ ಚರ್ಮಕ್ಕೆ...' ಎಂಬ ಪುಷ್ಪಾ ಗನೇಡಿವಾಲಾ ಅವರ ತೀರ್ಪು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಈ ತೀರ್ಪಿಗೆ ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು.
ಈ ಕಾರಣಕ್ಕಾಗಿಯೇ ಗನೇಡಿವಾಲಾ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಖಾಯಂಗೊಳಿಸುವ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಎರಡು ಬಾರಿ ತಿರಸ್ಕರಿಸಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪುಷ್ಪಾ ಗನೇಡಿವಾಲಾ ತಮ್ಮ ಅಧಿಕಾರಾವಧಿ ಮುಗಿಯುವ ಫೆಬ್ರವರಿ 12ಕ್ಕೆ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಳೆದ ವರ್ಷ, ಅಂದರೆ 2021ರ ಜನವರಿಯಲ್ಲಿ ಬಾಲಕಿಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಪುಷ್ಪಾ ಗನೇಡಿವಾಲಾ ಆರೋಪಿಯನ್ನು ಖುಲಾಸೆಗೊಳಿಸಿದ್ದರು.
ಈ ತೀರ್ಪಿನಲ್ಲಿ 'ಚರ್ಮದಿಂದ ಚರ್ಮಕ್ಕೆ ಸ್ಪರ್ಶವಾದರೆ ಮಾತ್ರ ಅದು ಲೈಂಗಿಕ ದೌರ್ಜನ್ಯ ಎನ್ನಿಸಿಕೊಳ್ಳುತ್ತದೆ. ಬಟ್ಟೆಯ ಮೇಲಿಂದ ಬಾಲಕಿಯ ಅಂಗಾಂಗ ಮುಟ್ಟುವುದು ಪೋಕ್ಸೋ ಕಾಯ್ದೆ ಅಡಿ ಲೈಂಗಿಕ ದೌರ್ಜನ್ಯವಾಗದು' ಎಂಬ ಚರ್ಚಾಸ್ಪದ ತೀರ್ಪು ನೀಡಿದ್ದರು.
ಇನ್ನೊಂದು ಪ್ರಕರಣದಲ್ಲಿ ಐದು ವರ್ಷದ ಬಾಲಕಿ ಕೈಹಿಡಿದು ವ್ಯಕ್ತಿಯೋರ್ವ ಪ್ಯಾಂಟ್ ಜಿಪ್ ಬಿಚ್ಚಿದ್ದನ್ನು ಕೂಡ ಹಗುರವಾಗಿ ಪರಿಗಣಿಸಿ, ಆರೋಪಿ ಖುಲಾಸೆ ಮಾಡಿದ್ದರು.
ನ್ಯಾ. ಪುಷ್ಪಾ ಗನೇಡಿವಾಲಾ ನೀಡಿದ್ದ ಈ ತೀರ್ಪುಗಳು ರಾಷ್ಟ್ರಾದ್ಯಂತ ತೀವ್ರ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿದ್ದವು. ಈ ತೀರ್ಪಿಗೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್ ಲೈಂಗಿಕ ಉದ್ದೇಶದಿಂದ ನಡೆದುಕೊಂಡಿದ್ದರೆ ಅದು ಅಪರಾಧವೇ ಆಗುತ್ತದೆ. ಚರ್ಮದಿಂದ ಚರ್ಮಕ್ಕೆ ತಾಕಬೇಕು ಎಂದೇನಿಲ್ಲ. ಈ ಕಾಯ್ದೆಯ ಮುಖ್ಯ ಉದ್ದೇಶ ಅರ್ಥ ಮಾಡಿಕೊಳ್ಳಬೇಕೇ ಹೊರತು ಕಾಯ್ದೆಯನ್ನು ಜಟಿಲಗೊಬಾರದು ಎಂದಿತ್ತು.
ಹಲವು ವಿವಾದಿತ ತೀರ್ಪುಗಳನ್ನು ನೀಡಿದ ಕಾರಣ ಪುಷ್ಟಾ ಗನೇಡಿವಾಲಾ ಅವರನ್ನು ನ್ಯಾಯಮೂರ್ತಿಯಾಗಿ ಖಾಯಂ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿರಲಿಲ್ಲ. ಬಳಿಕ, ಒಂದು ವರ್ಷದ ಮಟ್ಟಿಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿತ್ತಾದರೂ ಅವಧಿ ವಿಸ್ತರಿಸಿರಲಿಲ್ಲ. ಹೀಗಾಗಿ ತಮ್ಮ ಅಧಿಕಾರಾವಧಿ ಕೊನೆಗೊಳ್ಳುವ ಮುನ್ನವೇ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
2007ರಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗಿ ನೇಮಕವಾಗಿದ್ದ ಗನೇಡಿವಾಲಾ ಅವರು 2019ರಲ್ಲಿ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.