Karnataka HC Judgement- ಕಾನೂನು ಅಧಿಕಾರವಿಲ್ಲದೆ ಭೂಮಾಲಿಕರ ಆಸ್ತಿ ಕಸಿದುಕೊಳ್ಳಲಾಗದು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಕಾನೂನು ಅಧಿಕಾರವಿಲ್ಲದೆ ಭೂಮಾಲಿಕರ ಆಸ್ತಿ ಕಸಿದುಕೊಳ್ಳಲಾಗದು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
'ಕಟ್ಟಡ ಯೋಜನೆ'ಗೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದ ವೇಳೆ ರಸ್ತೆ ವಿಸ್ತರಣೆಗೆ ಭೂಮಿಯನ್ನು ಉಚಿತವಾಗಿ ನೀಡುವಂತೆ ಸೂಚಿಸಿ ಬಿಬಿಎಂಪಿ ಹೊರಡಿಸಿದ್ದು ಸುತ್ತೋಲೆಯನ್ನು ಸಂವಿಧಾನಬಾಹಿರ ಎಂದಿರುವ ಹೈಕೋರ್ಟ್ ಸುತ್ತೋಲೆಯನ್ನು ರದ್ದುಪಡಿಸಿ ಆದೇಶಿಸಿದೆ.
ರಸ್ತೆ ವಿಸ್ತರಣೆಗಾಗಿ ತಮ್ಮ ಭೂಮಿಯನ್ನು ಒಪ್ಪಿಸುವಂತೆ ಸೂಚಿಸಿ ಬಿಬಿಎಂಪಿ 2016ರ ಫೆ.29ರಂದು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ನಗರದ ಜಿ.ಕೆ ಶ್ರೀಧರ್ ಹಾಗೂ ಇತರೆ ನಾಲ್ವರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಕಟ್ಟಡ ಯೋಜನೆ ಮಂಜೂರಾತಿ ಕುರಿತ ಅರ್ಜಿ ಬಾಕಿ ಇರುವಾಗ ಭೂ ಮಾಲೀಕರು ತಮ್ಮ ಆಸ್ತಿಯನ್ನು ರಸ್ತೆ ವಿಸ್ತರಣೆಗೆ ಉಚಿತವಾಗಿ ನೀಡುವಂತೆ BBMP ಹೊರಡಿಸಿದ ಸುತ್ತೋಲೆ ಸಂವಿಧಾನದ ವಿಧಿ 300(ಎ) ಯನ್ನು ಉಲ್ಲಂಘಿಸುತ್ತದೆ ಎಂದು ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
BBMP ಹೊರಡಿಸಿರುವ ಸುತ್ತೋಲೆ ತಾರತಮ್ಯದಿಂದ ಕೂಡಿದೆ. 2015ರ ಮಾಸ್ಟರ್ ಪ್ಲಾನ್‌ನಲ್ಲಿ 'ಸಾರ್ವಜನಿಕ ರಸ್ತೆ' ಎಂದು ನಿಗದಿಪಡಿಸಲಾದ ಆಸ್ತಿ ವ್ಯಾಪ್ತಿಯ ವಾರಸುದಾರರು ಮತ್ತು ಯಾರು ತಮ್ಮ ಆಸ್ತಿ ಅಭಿವೃದ್ಧಿಪಡಿಸಲು ಕಟ್ಟಡ ಯೋಜನೆ ಮಂಜೂರಾತಿಗೆ ಅರ್ಜಿ ಸಲ್ಲಿಸಿಲ್ಲವೋ, ಅಂತಹವರು "ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ"ಯ ಕಲಂ 71ರ ಅಡಿಯಲ್ಲಿ ಪರಿಹಾರಕ್ಕೆ ಅರ್ಹರಾಗುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
"ಈ ರೀತಿಯ ಸ್ಥಿರಾಸ್ತಿಯನ್ನು ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕಾಗಿ ಸ್ವಾಧೀನಪಡಿಸಿಕೊಂಡರೆ, ಅರ್ಜಿದಾರರು ಕೇವಲ ಕಟ್ಟಡ ಮಂಜೂರಾತಿ ಯೋಜನೆಯನ್ನು ಪಡೆಯುವ ಮೂಲಕ ತಮ್ಮ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಕಾರಣಕ್ಕಾಗಿ ಪರಿಷ್ಕೃತ ಮಾಸ್ಟರ್ ಪ್ಲಾನ್-2015 ರಲ್ಲಿ ರಸ್ತೆಗಳಿಗಾಗಿ ಮೀಸಲಿಟ್ಟ ಅವರ ಅಸ್ತಿಗಳಿಂದ ವಂಚಿತರಾಗಲು ಸಾಧ್ಯವಿಲ್ಲ" ಎಂದು ಪೀಠ ಸ್ಪಷ್ಟಪಡಿಸಿದೆ.
ಮಾನ್ಯ ಸುಪ್ರೀಂ ಕೋರ್ಟ್ "ಕೆಟ್ ಪ್ಲಾಂಟೇಶನ್ ಪ್ರಕರಣ"ದಲ್ಲಿ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ನಿರ್ದಿಷ್ಟ ಕಾನೂನು ಅಧಿಕಾರ ಅಥವಾ ಸಮರ್ಥ ಶಾಸನವಿಲ್ಲದೆ ಕೇವಲ ಕಾರ್ಯನಿರ್ವಾಹಕ ಅದೇಶದ ಮೂಲಕ ಸ್ಥಿರಾಸ್ತಿಯ ಮಾಲೀಕತ್ವವನ್ನು ಕಸಿದುಕೊಳ್ಳಲಾಗದು' ಎಂದು ತಿಳಿಸಿದೆ.