Hc judgement - ಬೆಳ್ತಂಗಡಿ ನ್ಯಾಯಾಲಯದ ತೀರ್ಪು ವಜಾಗೊಳಿಸಿದ ಹೈಕೋರ್ಟ್: KSRTC ಚಾಲಕನ ಜೈಲು ಶಿಕ್ಷೆ ರದ್ದು
ಬೆಳ್ತಂಗಡಿ ನ್ಯಾಯಾಲಯದ ತೀರ್ಪು ವಜಾಗೊಳಿಸಿದ ಹೈಕೋರ್ಟ್: KSRTC ಚಾಲಕನ ಜೈಲು ಶಿಕ್ಷೆ ರದ್ದು
ಸುಮಾರು ಏಳು ವರ್ಷಗಳ ಹಿಂದೆ ಕರಾವಳಿಯ ಚಾರ್ಮಾಡಿ ಘಾಟ್‌ನಲ್ಲಿ ಸಂಭವಿಸಿದ್ದ ಸಣ್ಣ ಅಪಘಾತ ಪ್ರಕರಣದಲ್ಲಿ KSRTC ಬಸ್ ಚಾಲಕನಿಗೆ ವಿಧಿಸಿದ್ದ 2 ತಿಂಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
KSRTC ಚಾಲಕ ಶಿವಮೊಗ್ಗ ನಿವಾಸಿ ಎಚ್. ದೇವೇಂದ್ರಪ್ಪ ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಚಾಲಕನಿಗೆ ಶಿಕ್ಷೆಯಾಗಿದ್ದ ವಿಚಾರವನ್ನೇ ಮುಂದಿಟ್ಟುಕೊಂಡು ಆತನ ವೃತ್ತಿಗೆ ಯಾವುದೇ ರೀತಿ ತೊಂದರೆ ಕೊಡಬಾರದು. ಚಾಲಕನ ಸೇವಾ ಪುಸ್ತಕದಲ್ಲಿ ಈ ಅಂಶ ಉಲ್ಲೇಖಿಸಬಾರದು ಎಂದು KSRTCಗೆ ಹೈಕೋರ್ಟ್ ನಿರ್ದೇಶಿಸಿದೆ.
ಚಾರ್ಮಾಡಿ ಘಾಟ್ ರಸ್ತೆಯ ಕಡಿದಾದ ತಿರುವಿನಲ್ಲಿ KSRTC ಬಸ್ ಅನ್ನು ಚಾಲಕ ಸರಿಯಾಗಿ ಚಲಾಯಿಸಿದ್ದರೂ ಖಾಸಗಿ ಬಸ್‌ಗೆ ಡಿಕ್ಕಿಯಾಗಿದೆ. ಇದೊಂದು ಸಣ್ಣ ಅಪಘಾತ.. ಇದರಲ್ಲಿ ಚಾಲಕನ ನಿರ್ಲಕ್ಷ್ಯ ಕಂಡುಬರುತ್ತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ, ವಿಚಾರಣಾ ನ್ಯಾಯಾಲಯ ನೀಡಿದ್ದ 2 ತಿಂಗಳ ಜೈಲು ಶಿಕ್ಷೆ ರದ್ದು ಮಾಡಿ, 1,500 ರೂ. ದಂಡ ಪಾವತಿಸಲು ಆದೇಶ ನೀಡಿದೆ.
ಘಟನೆಯ ವಿವರ
ಚಾರ್ಮಾಡಿ ಘಾಟ್‌ನ ಕಿರಿದಾದ ರಸ್ತೆಯಲ್ಲಿ 2014ರ ಆಗಸ್ಟ್ ನಲ್ಲಿ ದೇವೇಂದ್ರಪ್ಪ KSRTC ಬಸ್ ಚಲಾಯಿಸುತ್ತಿದ್ದರು. ಆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್, ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದು ಸಣ್ಣ ಅಪಘಾತ ಸಂಭವಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಬೆಳ್ತಂಗಡಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 2019ರಲ್ಲಿ ಆರೋಪಿಗೆ ಎರಡು ತಿಂಗಳು ಜೈಲು ಶಿಕ್ಷೆ ಮತ್ತು 1500 ರೂ. ದಂಡ ವಿಧಿಸಿತ್ತು. 2021ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕೂಡ ಎತ್ತಿಹಿಡಿದಿತ್ತು. ಆ ಆದೇಶವನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.