No exemption for LLB exams- ವೃತ್ತಿಪರ ಕೋರ್ಸುಗಳಿಗೆ ಸಡಿಲಿಕೆ ಇಲ್ಲ; LLB ಸೆಮಿಸ್ಟರ್ ಪರೀಕ್ಷೆ ನಡೆಸಿ: ಹೈಕೋರ್ಟ್
ವೃತ್ತಿಪರ ಕೋರ್ಸುಗಳಿಗೆ ಸಡಿಲಿಕೆ ಇಲ್ಲ; LLB ಸೆಮಿಸ್ಟರ್ ಪರೀಕ್ಷೆ ನಡೆಸಿ: ಹೈಕೋರ್ಟ್
ಕಾನೂನು ಶಿಕ್ಷಣ ಸೇರಿದಂತೆ ಯಾವುದೇ ವೃತ್ತಿಪರ ಕೋರ್ಸ್‌ಗಳಿಗೆ ಸಡಿಲಿಕೆ ಸಲ್ಲದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕೋವಿಡ್ ಲಾಕ್‌ಡೌನ್ ಕಾರಣಕ್ಕೆ ಕಾನೂನು ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಲಾಗದು. ಹಾಗಾಗಿ, ವೃತ್ತಿಪರವಲ್ಲದ ಕೋರ್ಸುಗಳಿಗೆ ನೀಡಿದ ಸಡಿಲಿಕೆಯನ್ನು ಕಾನೂನು ಶಿಕ್ಷಣದಲ್ಲಿ ನೀಡಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಧಾರವಾಡ ನ್ಯಾಯಪೀಠ 3 ವರ್ಷದ LLB ಕೋರ್ಸ್ ನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವಂತೆ ನಿರ್ದೇಶನ ನೀಡಿದೆ.
ವೃತ್ತಿಪರ ಕೋರ್ಸ್ ಗಳಲ್ಲಿ ಯಾವುದೇ ವಿನಾಯಿತಿ ಇಲ್ಲ. ಕಾನೂನು, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪರೀಕ್ಷೆಗಳಿಂದ ವಿನಾಯಿತಿ ನೀಡುವುದು ಸರಿಯಲ್ಲ. ಹಾಗೆಯೇ, ಕಾನೂನು ಶಿಕ್ಷಣದ ಗುಣಮಟ್ಟದಲ್ಲಿ ಸುತಾರಾಂ ರಾಜಿ ಇಲ್ಲ. ಕೋರ್ಸ್ ನ ಪಠ್ಯಕ್ರಮ ಹಾಗೂ ಪರೀಕ್ಷಾ ವಿಧಾನಗಳನ್ನು ಶಿಕ್ಷಣ ತಜ್ಞರು ನಿರ್ಧರಿಸಬೇಕೇ ಹೊರತು ವಿದ್ಯಾರ್ಥಿಗಳಲ್ಲ ಎಂದು ಹೈಕೋರ್ಟ್ ಹೇಳಿದೆ.
ಪರೀಕ್ಷೆಯನ್ನು ಹೇಗೆ, ಯಾವ ಮಾದರಿಯಲ್ಲಿ ನಡೆಸಬೇಕು ಎಂಬುದನ್ನು 10 ದಿನಗಳಲ್ಲಿ ನಿರ್ಧರಿಸಿ, ಪರೀಕ್ಷೆ ನಡೆಸಬೇಕು ಎಂದು ವಿವಿ ಆಡಳಿತಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
(ಮಾದರಿಗಳು ಅಂದರೆ, ಆನ್‌ಲೈನ್/ ಆಫ್‌ಲೈನ್/ ಬ್ಲೆಂಡೆಡ್/ ಆನ್‌ಲೈನ್ ತೆರೆದ ಪುಸ್ತಕ ಪರೀಕ್ಷೆ /ನಿಯೋಜನೆ ಆಧಾರಿತ ಮೌಲ್ಯಮಾಪನ/ಸಂಶೋಧನಾ ಪತ್ರಿಕೆಗಳು)
ಪ್ರಕರಣದ ವಿವರ
ಲಾಕ್‌ಡೌನ್ ಸಂದರ್ಭದಲ್ಲಿ ವಿವಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕ ಹಾಗೂ ಆಂತರಿಕ ಮೌಲ್ಯಮಾಪನ ಆಧರಿಸಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಿ ಪಾಸು ಮಾಡುವಂತೆ UGC ಹೇಳಿದೆ. ಆದರೂ, KSLU ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿದೆ. ವಿವಿಯ ಈ ಕ್ರಮ ಸರಿಯಲ್ಲ. ಆದ್ದರಿಂದ UGC ಸೂಚನೆ ಪ್ರಕಾರ ಪರೀಕ್ಷೆ ರದ್ದು ಮಾಡಲು ವಿವಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ನ 2 & 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದಂತೆ ವಿವಿಗೆ ಆದೇಶಿಸಿ, UGC ಸುತ್ತೋಲೆ ಪಾಲಿಸುವಂತೆ ಸೂಚಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿವಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಈ ಮಧ್ಯೆ, ಭಾರತೀಯ ವಕೀಲರ ಪರಿಷತ್ತು (ಇಂಡಿಯನ್ ಬಾರ್ ಕೌನ್ಸಿಲ್-IBC) ಕಾನೂನು ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ಎಂಬ ಸುತ್ತೋಲೆ ಹೊರಡಿಸಿತ್ತು. ಹಾಗಾಗಿ, ಪರೀಕ್ಷೆ ನಡೆಸಲು ಅನುಮತಿ ಕೇಳಿ ವಿವಿ ಮೇಲ್ಮನವಿ ಸಲ್ಲಿಸಿತ್ತು.