Kerala HC gives big relief to teachers- ವಿದ್ಯಾರ್ಥಿಗಳ ಮೇಲೆ ದುರುದ್ದೇಶವಿಲ್ಲದ ಮಿತ ಬಲ ಪ್ರಯೋಗ: ಶಿಕ್ಷಕರಿಗೆ ಶಿಕ್ಷೆ ಸಲ್ಲದು ಎಂದ ಕೇರಳ ಹೈಕೋರ್ಟ್
ವಿದ್ಯಾರ್ಥಿಗಳ ಮೇಲೆ ದುರುದ್ದೇಶವಿಲ್ಲದ ಮಿತ ಬಲ ಪ್ರಯೋಗ: ಶಿಕ್ಷಕರಿಗೆ ಶಿಕ್ಷೆ ಸಲ್ಲದು ಎಂದ ಕೇರಳ ಹೈಕೋರ್ಟ್
ಯಾವುದೇ ದುರುದ್ದೇಶವಿಲ್ಲದೆ ತನ್ನ ವಿದ್ಯಾರ್ಥಿಗಳ ಮೇಲೆ ಮಿತವಾಗಿ ಬಲ ಪ್ರಯೋಗಿಸಿದ ಶಿಕ್ಷಕರನ್ನು ಕ್ರಿಮಿನಲ್ ಕಾನೂನು ವಿಚಾರಣೆಗೆ ಒಡ್ಡಲಾಗದು ಹಾಗೂ ಜುಲ್ಮಾನೆಯೊಂದಿಗೆ ಶಿಕ್ಷೆ ನೀಡಲಾಗದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣ: ಜಯಾ Vs ಕೇರಳ ಸರ್ಕಾರ ಇತರರು
ಶಿಕ್ಷಕರು ಮೊದಲು ಯಾವ ಉದ್ದೇಶಕ್ಕಾಗಿ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ವಯಸ್ಸಿನ ವಿದ್ಯಾರ್ಥಿಗಳಿಗೆ ಅಥವಾ ಮಕ್ಕಳಿಗೆ ಶಿಸ್ತಿನ ಕ್ರಮವಾಗಿ ತಕ್ಕಮಟ್ಟಿನ ಬಲಪ್ರಯೋಗ ಮಾಡಲು ಪಾಲಕರು, ಶಿಕ್ಷಕರು ಮತ್ತು ಪೋಷಕರ ಸ್ಥಾನದಲ್ಲಿರುವ ಇತರ ವ್ಯಕ್ತಿಗಳು ಅರ್ಹರು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
'ಮಗುವಿನ ತಂದೆ-ತಾಯಿ, ಪಾಠ ಕಲಿಸುವ ಶಿಕ್ಷಕರು ಆ ಮಗುವಿಗೆ ಸೂಕ್ತ ಶಿಕ್ಷೆ ವಿಧಿಸಿದಾಗ ಆ ರೀತಿಯ ಕಡಿಮೆ ಗಂಭೀರ ಅಪರಾಧದಿಂದ ಉಂಟಾಗುವ ತೊಂದರೆಯನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ, ತಾರ್ಕಿಕ ಅರ್ಥವಿಲ್ಲದ ಹಾಗೂ ಅಸಮಂಜಸ ಮತ್ತು ಮನಸೋಇಚ್ಛೆಯಾಗಿ ಬಲಪ್ರಯೋಗ ಮಾಡಿದರೆ ಅದು ಕಾನೂನುಬಾಹಿರ ಎಂದು ನ್ಯಾಯಪೀಠ ಹೇಳಿದೆ.
ಪರಿಣಾಮಕಾರಿ ಬೋಧನೆ ಮತ್ತು ಕಲಿಕೆಗೆ ತರಗತಿಯ ಶಿಸ್ತು ಬಹಳ ಮುಖ್ಯ ಎಂದಿರುವ ನ್ಯಾಯಪೀಠ, ಶಿಸ್ತು ಮತ್ತು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಮಿತವಾದ ಬಲಪ್ರಯೋಗವನ್ನು ಕಾನೂನು ಬಾಹಿರ ಎಂದು ಹೇಳುವಂತಿಲ್ಲ. ಆರೋಪಿತರು ತಮ್ಮ ಆರೋಪವನ್ನು ಒಪ್ಪಿಕೊಂಡರೂ ಅದು IPC ಸೆಕ್ಷನ್ 324 ಮತ್ತು ಬಾಲಾಪರಾಧ ಕಾಯ್ದೆ (JJ Act) ಸೆಕ್ಷನ್ 23ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಲ್ಲ ಎಂದು ತೀರ್ಪು ಸ್ಪಷ್ಟಪಡಿಸಿದೆ.
ಶಾಲಾ ಶಿಕ್ಷಕಿ ಜಯಾ ಅವರನ್ನು IPC ಸೆಕ್ಷನ್ 324 ಮತ್ತು ಬಾಲಾಪರಾಧ ಕಾಯ್ದೆ (JJ Act) ಸೆಕ್ಷನ್ 23ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಂದ ವಿಮುಕ್ತಿಗೊಳಿಸದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ತಪ್ಪು ಎಂದು ಹೇಳಿ, ಶಿಕ್ಷಕರಿಯ ಅರ್ಜಿಯನ್ನು ಪುರಸ್ಕರಿಸಿತು. ಮಾತ್ರವಲ್ಲದೆ, ಶಿಕ್ಷಕಿಯನ್ನು ಆರೋಪ ಮುಕ್ತಗೊಳಿಸಿತು.