-->
Dist Judge sent to training- ತೀರ್ಪು ನೀಡಲು ಟ್ರೈನಿಂಗ್ ಪಡೆಯಿರಿ: ಮೈಸೂರಿನ ಜಿಲ್ಲಾ ನ್ಯಾಯಾಧೀಶರಿಗೆ ಬಿಸಿ ಮುಟ್ಟಿಸಿದ ಹೈಕೋರ್ಟ್‌ ಖಡಕ್ ಆದೇಶ

Dist Judge sent to training- ತೀರ್ಪು ನೀಡಲು ಟ್ರೈನಿಂಗ್ ಪಡೆಯಿರಿ: ಮೈಸೂರಿನ ಜಿಲ್ಲಾ ನ್ಯಾಯಾಧೀಶರಿಗೆ ಬಿಸಿ ಮುಟ್ಟಿಸಿದ ಹೈಕೋರ್ಟ್‌ ಖಡಕ್ ಆದೇಶ

ತೀರ್ಪು ನೀಡಲು ಟ್ರೈನಿಂಗ್ ಪಡೆಯಿರಿ: ಮೈಸೂರಿನ ಜಿಲ್ಲಾ ನ್ಯಾಯಾಧೀಶರಿಗೆ ಬಿಸಿ ಮುಟ್ಟಿಸಿದ ಹೈಕೋರ್ಟ್‌ ಖಡಕ್ ಆದೇಶ







ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೈಸೂರಿನ ವರದಕ್ಷಿಣೆ ಸಾವು ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರನ್ನು ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.



ಹೀನಿಯಸ್ ಕ್ರೈಂ ಯಾ ಗಂಭೀರ ಅಪರಾಧ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡುವ ಮೊದಲು ನ್ಯಾಯಾಧೀಶರು ನ್ಯಾಯಾಂಗ ವಿವೇಚನೆಯನ್ನು ಬಳಸುವುದು ಹೇಗೆ ಎಂಬುದನ್ನು ಅರಿಯಬೇಕು. ಅದಕ್ಕಾಗಿ, ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗೆ ಕಳುಹಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.



ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಅರ್ಜಿದಾರರು ಸಲ್ಲಿಸಿದ್ದ ಅರ್ಜಿ (CRIMINAL PETITION NO. 4234/2021) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ಧ ಪೀಠ ಈ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಆರೋಪಿಗಳಾದ ಮಂಜು (ಪತಿ) ಹಾಗೂ ಶಿವಮ್ಮ (ಅತ್ತೆ)ಗೆ ನೀಡಿದ್ದ ಜಾಮೀನು ರದ್ದುಪಡಿಸಿದೆ.



ಪ್ರಕರಣದ ವಿವರ

ಮೈಸೂರಿನ ಸುನಿತಾ ಹಾಗೂ ಮಂಜು ಮದುವೆ 2020ರ ಫೆಬ್ರವರಿಯಲ್ಲಿ ನಡೆದಿತ್ತು. ಮದುವೆಗೆ ಸುನಿತಾ ಕುಟುಂಬದವರು ಕೈತುಂಬಾ ಹಣ ಮತ್ತು ಒಡವೆ ನೀಡಿದ್ದರು. ಆದರೂ, ವಿವಾಹವಾದ ಕೆಲವೇ ದಿನಗಳಲ್ಲಿ ಮನೆ ನಿರ್ಮಾಣಕ್ಕಾಗಿ 6 ಲಕ್ಷ ರೂಪಾಯಿ ತರುವಂತೆ ಮಂಜು ಪತ್ನಿಗೆ ಒತ್ತಾಯಿಸಿ ಜಗಳ ತೆಗೆದು ತವರಿಗೆ ಕಳುಹಿಸಿದ್ದ ಎಂದು ಆರೋಪಿಸಲಾಗಿತ್ತು.




ಬಳಿಕ, ಸಂಬಂಧಿಕರು ಪಂಚಾಯಿತಿ ನಡೆಸಿ ಹಣ ನೀಡುವ ಭರವಸೆಯೊಂದಿಗೆ ಸುನಿತಾಳನ್ನು ಪತಿ ಮನೆಗೆ ಕಳುಹಿಸಿದ್ದರು. ಆದರೆ, ಕೃಷಿ ನಷ್ಟದಿಂದ ಹಣನೀಡಿರಲಿಲ್ಲ. ಇದರಿಂದ ಪತಿ ಮಂಜು ಸುನಿತಾಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ. 2021ರ ಫೆಬ್ರವರಿಯಲ್ಲಿ ಸುನಿತಾ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು. ಇದನ್ನು ಪಿರಿಯಾಪಟ್ಟಣ ಪೊಲೀಸರು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದರು.



ಘಟನೆಯಾದ ಕೆಲವು ದಿನಗಳ ಬಳಿಕ, ಸುನಿತಾ ಸಾವಿಗೆ ಮುನ್ನವೇ ತನ್ನ ತವರಿನ ನೆರೆಮನೆಯವರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ಅದರಲ್ಲಿ ತನಗೆ ಏನಾದರೂ ತೊಂದರೆಯಾದರೆ ಅದಕ್ಕೆ ತನ್ನ ಪತಿ ಮಂಜು, ಅತ್ತೆ ಶಿವಮ್ಮ ಹಾಗೂ ಮಾವ ರಾಜಪ್ಪರೇ ಕಾರಣ ಎಂಬ ಮಾತಾಡಿದ್ದರು. ಬಳಿಕ ಸುನಿತಾ ಸೋದರ ಸುನಿಲ್ ಪಿರಿಯಾಪಟ್ಟಣ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು.



ದೂರಿನ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 498 ಎ ವರದಕ್ಷಿಣೆ ಕಿರುಕುಳ, 304 ಬಿ ವರದಕ್ಷಿಣೆ ಸಾವು ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3, 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.



ಪ್ರಕರಣದಲ್ಲಿ ಆರೋಪಿಗಲು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಸುನಿಲ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.



ಹೈಕೋರ್ಟ್ ತೀರ್ಪು

ವರದಕ್ಷಿಣೆ ಸಾವಿನಂತಹ ಘೋರ ಅಪರಾಧ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಮುನ್ನ ವಿಚಾರಣಾ ನ್ಯಾಯಾಲಯವು ನ್ಯಾಯಾಂಗ ವಿವೇಚನೆ ಸರಿಯಾಗಿ ಬಳಸಿಲ್ಲ. ಆರೋಪಿಗಳ ವಿರುದ್ಧ ಜೀವಾವಧಿ ಅಥವಾ ಮರಣದಂಡನೆ ವಿಧಿಸುವಂತಹ ಆರೋಪಗಳಿಲ್ಲ. ಮುಖ್ಯವಾಗಿ ಸುನೀತಾ ಧ್ವನಿ ಮುದ್ರಿಕೆ ನೆರೆಮನೆಯವರ ಬಳಿ ಸಿಕ್ಕ ನಂತರವೇ ದೂರು ದಾಖಲಿಸಲಾಗಿದೆ. ಮೊಬೈಲ್ ಆಕೆಯದ್ದೇ ಅಥವಾ ಬೇರೆಯವರದ್ದೇ ಎಂಬುದನ್ನು ಹಾಗೂ ವಾಯ್ಸ್ ಮೆಸೇಜ್ ನಲ್ಲಿರುವ ಧ್ವನಿ ಸುನಿತಾರದ್ದೋ ಅಥವಾ ಬೇರೆಯವರದ್ದೋ ಎಂಬುದನ್ನು ವಿಚಾರಣೆ ವೇಳೆ ಗುರುತಿಸಬೇಕಾಗುತ್ತದೆ. ಹೀಗಾಗಿ, ಆರೋಪಿಗಳಿಗೆ ಜಾಮೀನು ನೀಡಬಹುದು ಎಂದು ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿತ್ತು.



ಆದರೆ, ಧ್ವನಿ ಸುನಿತಾರದ್ದೇ ಆಗಿದೆ, ಆರೋಪಿಗಳಿಗೆ ಜಾಮೀನು ನೀಡಬಾರದು. ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು ಎಂಬ ಅಂಶಗಳನ್ನು ಸರ್ಕಾರಿ ವಕೀಲರು ಉಲ್ಲೇಖಿಸಿದರೂ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.



ಮದುವೆ ಹೊಸತರಲ್ಲಿ ವರದಕ್ಷಿಣೆ ವಿಷಯದಲ್ಲಿ ಗಲಾಟೆಯಾಗಿ ಪಂಚಾಯ್ತಿ ನಡೆಸಿರುವ, ಸುನಿತಾ ಪೋಷಕರು ಹಣ ನೀಡುವು ಭರವಸೆ ನೀಡಿರುವ ವಿಚಾರಗಳನ್ನು ತಿಳಿಸಿದ್ದರೂ ವಿಚಾರಣಾ ನ್ಯಾಯಾಲಯ ಅದನ್ನು ಪರಿಗಣಿಸಿರಲಿಲ್ಲ. ಆರೋಪಿಗಳಿಗೆ ಜಾಮೀನು ನೀಡಿರುವುದು ಅತ್ಯಂತ ವಕ್ರ ಮತ್ತು ವಿಚಿತ್ರವಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟು, ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಪಡಿಸಿದೆ.



ಹೀನಾಯ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡುವ ಮುನ್ನ ನ್ಯಾಯಾಂಗ ವಿವೇಚನಾಧಿಕಾರ ಬಳಸುವ ಕುರಿತು ನ್ಯಾಯಾಧೀಶರಿಗೆ ಅರಿವು ಮೂಡಿಸುವ ಅಗತ್ಯವಿದೆ. ಹಾಗಾಗಿ ಅವರನ್ನು ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗೆ ಕಳುಹಿಸುವಂತೆ ನಿರ್ದೇಶಿಸಿತು. 




Ads on article

Advertise in articles 1

advertising articles 2

Advertise under the article