accused arrest - ಮಹಿಳಾ ವಕೀಲರ ನಂಬರ್ ಪಡೆದು ಬ್ಲೂಫಿಲ್ಮ್, ಮೆಸ್ಸೇಜ್ ಕಳಿಸಿದ ಭೂಪ ಜೈಲಿಗೆ
ಮಹಿಳಾ ವಕೀಲರ ನಂಬರ್ ಪಡೆದು ಬ್ಲೂಫಿಲ್ಮ್, ಮೆಸ್ಸೇಜ್ ಕಳಿಸಿದ ಭೂಪ ಜೈಲಿಗೆ
- ಜಾಮೀನು ಬೇಕು ಎಂದು ಮಹಿಳಾ ವಕೀಲರ ನಂಬರ್ ಪಡೆಯುತ್ತಿದ್ದ ಆರೋಪಿ
- 100ಕ್ಕೂ ಹೆಚ್ಚು ಮಹಿಳೆಯರಿಗೆ ಬ್ಲೂಫಿಲ್ಮ್, ಅಶ್ಲೀಲ ಮೆಸ್ಸೇಜ್ ರವಾನೆ
- ಕಳವು ಮಾಡಿದ್ದ ಮೊಬೈಲ್‌ನಿಂದ ಕೃತ್ಯ ನಡೆಸುತ್ತಿದ್ದ ವಿಕೃತ ಕಾಮಿ
- ಆರೋಪಿಯನ್ನು ಬಂಧಿಸಿದ ಪೊಲೀಸರು
- ಯಾರಿಗಾದರೂ ತೊಂದರೆ ಆಗಿದ್ದರೆ ದೂರು ನೀಡಲು ಮನವಿ
ವಿವಿಧೆಡೆ ಕಳವು ಮಾಡಿದ್ದ ಮೊಬೈಲ್ ಬಳಸಿ ಮಹಿಳಾ ವಕೀಲರು, ಪೊಲೀಸರು ಸೇರಿದಂತೆ 100ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ವಿಕೃತಕಾಮಿ, ಕಿಡಿಗೇಡಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮೈದುನಹಳ್ಳಿ ನಿವಾಸಿ. ಈತನ ಹೆಸರು ಕೃಷ್ಣ.
ಜಾಮೀನು ಬೇಕು ಎಂದು ಹೇಳಿ ನೆಪ ಮಾಡಿಕೊಂಡು ಈತ ತುಮಕೂರು ಹಾಗೂ ಬೆಂಗಳೂರಿನ ಕೆಲವು ಮಹಿಳಾ ವಕೀಲರು ಹಾಗೂ ಮಹಿಳಾ ಪೊಲೀಸರ ನಂಬರ್ ಪಡೆಯುತ್ತಿದ್ದ. ಬಳಿಕ, ಕಳವು ಮಾಡಿದ್ದ ಮೊಬೈಲ್ ಗಳಿಂದ ಅಶ್ಲೀಲ ವಿಡಿಯೋ ಕಳುಹಿಸಿ, ವಾಟ್ಸಪ್‌ನಲ್ಲಿ ಕರೆ ಮಾಡುತ್ತಿದ್ದ.
ಈ ಸರಣಿ ಕೃತ್ಯಗಳಿಗಾಗಿ ಆರೋಪಿ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 6 ಪ್ರಕರಣಗಳು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿದ್ದವು.
ವಿಕೃತ ಹಾಗೂ ವಿಚಿತ್ರ ಮನೋಸ್ಥಿತಿಯ ಆರೋಪಿ, ಅಪರಾಧ ಪ್ರಕರಣಗಳಲ್ಲಿ ಜಾಮೀನು ಕೊಡಿಸುವಂತೆ ಕೇಳುವ ನೆಪದಲ್ಲಿ ಮಹಿಳಾ ವಕೀಲರಿಂದ ನಂಬರ್ ಪಡೆದುಕೊಳ್ಳುತ್ತಿದ್ದ. ನಂಬರ್ ಸಿಕ್ಕ ನಂತರ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುವ ಜತೆಗೆ ಅಶ್ಲೀಲ ಮಾತುಗಳನ್ನಾಡುತ್ತಿದ್ದ.
ಮಹಿಳಾ ವಕೀಲರು, ಪೊಲೀಸರು ತಿರುಗಿ ಬಿದ್ದತೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದ. ಸುಮಾರು 6 ತಿಂಗಳಿನಿಂದ ಈತನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.
ಈ ವಿಕೃತ ಮನಸ್ಕ ಆರೋಪಿಯ ಮೊಬೈಲ್ ಗಳಿಂದ ಅಶ್ಲೀಲ ದೃಶ್ಯಗಳು ಹಾಗೂ ಮೆಸೇಜ್ ಗಳನ್ನು ಕಳುಹಿಸಿರುವುದು ಬಯಲಾಗಿದೆ. ಹೀಗೆಯೇ ಯಾರಾದರೂ ಮಹಿಳೆಯರಿಗೆ ಈ ರೀತಿ ಕಿರುಕುಳ, ತೊಂದರೆ ನೀಡಿದ್ದರೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.