Hindu Marriage Act- ಪ್ರತ್ಯೇಕ ಮನೆಗೆ ಒತ್ತಾಯ, ಪತಿ ವಿರುದ್ಧ ಕೇಸ್ ಹಾಕುವುದು 'ಕ್ರೌರ್ಯ'ವಲ್ಲ: ಕರ್ನಾಟಕ ಹೈಕೋರ್ಟ್
ಪ್ರತ್ಯೇಕ ಮನೆಗೆ ಒತ್ತಾಯ, ಪತಿ ವಿರುದ್ಧ ಕೇಸ್ ಹಾಕುವುದು ಕ್ರೌರ್ಯವಲ್ಲ: ಕರ್ನಾಟಕ ಹೈಕೋರ್ಟ್
ಪ್ರತ್ಯೇಕ ಮನೆ ಮಾಡಿ ಎಂದು ಪತ್ನಿ ಪತಿಗೆ ಒತ್ತಾಯಿಸುವುದು, ಅದರಿಂದ ಉಂಟಾಗುವ ವೈಮನಸ್ಯವನ್ನು ವಿಚ್ಛೇದನಕ್ಕೆ ಪರಿಗಣಿಸುವ ‘ಕ್ರೌರ್ಯ’ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣ: ಎಸ್. ಶ್ಯಾಮಲಾ @ ಕಾತ್ಯಾಯನಿ Vs ಬಿ.ಎನ್. ಮಲ್ಲಿಕಾರ್ಜುನಯ್ಯ
ಕರ್ನಾಟಕ ಹೈಕೋರ್ಟ್ Dated 14-03-2022 in MFA No. 3352/2016
ಪತಿಯ ಅರ್ಜಿಯನ್ನು ಪುರಸ್ಕರಿಸಿ ವಿಚ್ಛೇದನ ಡಿಕ್ರಿ ನೀಡಿದ್ದ ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ತುಮಕೂರು ಮೂಲದ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾ. ಅಲೋಕ್ ಆರಾಧೆ ಹಾಗೂ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.
ಪತಿಯ ಕೋರಿಕೆ ಮೇರೆಗೆ ಕೌಟುಂಬಿಕ ನ್ಯಾಯಾಲಯ ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 13(1) (ia) (ib) ಅಡಿ ವಿಚ್ಛೇದನ ಡಿಕ್ರಿ ನೀಡಿದೆ. ದಂಪತಿ ಮಧ್ಯೆ ಸರಿಪಡಿಸಲಾಗದ ಮನಸ್ಥಾಪಗಳಿವೆ ಹಾಗೂ ಅವರು 9 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಆಧಾರದಲ್ಲಿ ವಿಚ್ಛೇದನ ನೀಡಿದೆ. ಆದರೆ, ವಿಚ್ಛೇದನಕ್ಕೆ ಮೂಲ ಕಾರಣ ಎನ್ನಲಾದ ಪತ್ನಿಯ ‘ಪ್ರತ್ಯೇಕವಾಗಿ ವಾಸಿಸುವ ಕೋರಿಕೆ’ಯು ವಿಚ್ಛೇದನಕ್ಕೆ ಕಾರಣವಾಗುವ ‘ಕ್ರೌರ್ಯ’ ವ್ಯಾಪ್ತಿಯಲ್ಲಿ ಪರಿಗಣಿಸಲಾಗದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಇಂತಹ ಸಂದರ್ಭಗಳಲ್ಲಿ ವಿಚಾರಣಾ ನ್ಯಾಯಲಯವು ಪತಿ-ಪತ್ನಿಯರ ಸ್ಥಿತಿ, ಪರಿಸರ ಹಾಗೂ ಸಾಮಾಜಿಕ ಮೌಲ್ಯಗಳನ್ನು ಪರಿಗಣಿಸಬೇಕು. ಪತ್ನಿ ಪತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದನ್ನು ‘ಕ್ರೌರ್ಯ’ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(ia) ಪ್ರಕಾರ ಸಂಗಾತಿಯ ‘ಕ್ರೌರ್ಯ’ವನ್ನು ಆಧರಿಸಿ ವಿಚ್ಚೇದನ ಕೋರಬಹುದು. ಆದರೆ, ‘ಕ್ರೌರ್ಯ’ ಎಂಬುದು ಉದ್ದೇಶಪೂರ್ವಕವಾಗಿ ಮತ್ತು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ವ್ಯಕ್ತಿಯ ಜೀವ, ಅಂಗ ಅಥವಾ ಆರೋಗ್ಯಕ್ಕೆ ಅಥವಾ ಮಾನಸಿಕವಾಗಿ, ದೈಹಿಕವಾಗಿ ಅಪಾಯ ಉಂಟುಮಾಡುವಂತಿರಬೇಕು. ಈ ಪ್ರಕರಣದಲ್ಲಿ ಅಂತಹ ಅಂಶಗಳಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.
ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಅಥವಾ ಕ್ರೌರ್ಯ ಎಸಗಿದ್ದಾರೆ ಎಂಬ ಪತಿ ಅಥವಾ ಪತ್ನಿಯ ಆರೋಪಗಳನ್ನು ಅವರು ವಾಸಿಸುತ್ತಿರುವ ಪರಿಸರ, ಸ್ಥಿತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಪರಿಗಣಿಸಿ ನಿರ್ಧರಿಸಬೇಕು ಎಂದು ಹೇಳಿದೆ.
ದಂಪತಿಗೆ 19 ವರ್ಷದ ಮಗಳಿದ್ದು, ವಿಚ್ಛೇದನವನ್ನು ಪುರಸ್ಕರಿಸಿದರೆ ಆಕೆಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಪೀಠ ಅಭಿಪ್ರಾಯಪಟ್ಟು, ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಡಿಕ್ರಿಯನ್ನು ರದ್ದುಪಡಿಸಿದೆ.