FIR Against Public Tv Journalists- ಪಬ್ಲಿಕ್ ಟಿವಿ ರಂಗನಾಥ್, ಅರುಣ್ ಬಡಿಗೇರ್ ಆರೋಪಿ ಕಟಕಟೆಗೆ: ಶಹಾಪುರ ನ್ಯಾಯಾಲಯ ಆದೇಶ
ಪಬ್ಲಿಕ್ ಟಿವಿ ರಂಗನಾಥ್, ಅರುಣ್ ಬಡಿಗೇರ್ ಆರೋಪಿ ಕಟಕಟೆಗೆ: ಶಹಾಪುರ ನ್ಯಾಯಾಲಯ ಆದೇಶ
ಪೊಲೀಸ್ ಠಾಣೆ ಮತ್ತು ಎಸ್‌ಪಿ ಕಚೇರಿಗೆ ಅಂಚೆ ಮೂಲಕ ದೂರು ಸಲ್ಲಿಸಿದ್ದರೂ ದಾಖಲಿಸದೆ ಉಡಾಫೆ ತೋರಿದ ಯಾದಗಿರಿ ಜಿಲ್ಲೆಯ ಗೋಗಿ ಠಾಣೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಛೀಮಾರಿ ಹಾಕಿದೆ.
ತಕ್ಷಣ ಅಂಚೆ ಮೂಲಕ ಸಲ್ಲಿಸಿದ ದೂರನ್ನು ಪರಿಗಣಿಸಿ ಪಬ್ಲಿಕ್ ಟಿವಿ ರಂಗನಾಥ್ ಮತ್ತು ಅರುಣ್ ಬಡಿಗೇರ್ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಶಹಾಪುರ ಕೋರ್ಟ್ ಆದೇಶ ನೀಡಿದೆ.
ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಎಂಬ ಕಾರ್ಯಕ್ರಮದಲ್ಲಿ "ಭಾರತ ಸೃಷ್ಟಿಯಾಗಿದ್ದೇ ಹಿಂದೂ ರಾಷ್ಟ್ರದ ಆಧಾರದಲ್ಲಿ" ಎಂದು ಆರೋಪಿಗಳು ಹೇಳಿಕೆ ನೀಡಿದ್ದರು. ಈ ಬಗ್ಗೆ ಬಂದೇ ನವಾಜ್ ಎಂಬವರು ಪೋಸ್ಟ್ ಮೂಲಕ ದೂರು ದಾಖಲಿಸಿದ್ದರು.
ಈ ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಬಂದೇನವಾಜ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗಳಾಗಿ ಹೆಸರಿಸಲಾಗಿರುವ ಎಚ್.ಆರ್. ರಂಗನಾಥ್ ಮತ್ತು ಅರುಣ ಬಡಿಗೇರ ವಿರುದ್ಧ FIR ದಾಖಲಿಸುವಂತೆ ಆದೇಶ ನೀಡಿದೆ.
ಆರೋಪಿಗಳಾದ ಪತ್ರಕರ್ತ ರಂಗನಾಥ್ ಮತ್ತು ಸುದ್ದಿವಾಚಕ ಅರುಣ್ ಬಡಿಗೇರ್ ವಿರುದ್ಧ IPC ಸೆಕ್ಷನ್ 153 (ಬಿ), 505 (1) (ಬಿ) (ಸಿ) ಮತ್ತು 505 (2) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ ಮಾಡಿದ್ದು, ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿದೆ.
"ಆರೋಪಿಗಳು ದೇಶದ ಸಮಗ್ರತೆಗೆ ವಿರುದ್ಧವಾದ ಪೂರ್ವಗ್ರಹ ಪೀಡಿತ ಮತ್ತು ಸಂವಿಧಾನಬಾಹಿರ ಹೇಳಿಕೆ ನೀಡಿದ್ದಾರೆ. ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ, ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ" ಎಂದು ದೂರಲಾಗಿದೆ.