HC Circular - ಕೋರ್ಟ್ ಕಲಾಪ ಬಹಿಷ್ಕಾರ, ಧರಣಿ, ಮುಷ್ಕರ ತಕ್ಷಣ ಸಿಜೆ ಗಮನಕ್ಕೆ ತರಬೇಕು: ಹೈಕೋರ್ಟ್ ಸುತ್ತೋಲೆ
ಕೋರ್ಟ್ ಕಲಾಪ ಬಹಿಷ್ಕಾರ, ಧರಣಿ, ಮುಷ್ಕರ ತಕ್ಷಣ ಸಿಜೆ ಗಮನಕ್ಕೆ ತರಬೇಕು: ಹೈಕೋರ್ಟ್ ಸುತ್ತೋಲೆ
ಮಾರ್ಚ್ 5 ರಂದು ನಡೆದ ಉಡುಪಿ ವಕೀಲರ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಉಡುಪಿ ನ್ಯಾಯಾಲಯದಲ್ಲಿ ಒಂದು ವಾರದಿಂದ ನಡೆಯುತ್ತಿರುವ ಕಲಾಪ ಬಹಿಷ್ಕಾರ ಈಗ ರಾಜ್ಯದಲ್ಲೇ ಸುದ್ದಿಯ ಕೇಂದ್ರ ಬಿಂದುವಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಸುತ್ತೋಲೆಯನ್ನು ಹೊರಡಿಸಿದೆ.
ರಾಜ್ಯದ ಯಾವುದೇ ಜಿಲ್ಲೆಯಲ್ಲಿ ವಕೀಲರ ಮುಷ್ಕರ, ಧರಣಿ ಅಥವಾ ಕೋರ್ಟ್ ಕಲಾಪ ಬಹಿಷ್ಕಾರ ಸಹಿತ ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ಮಹತ್ವದ ವಿದ್ಯಮಾನಗಳನ್ನು ತಕ್ಷಣವೇ ಮುಖ್ಯ ನ್ಯಾಯಮೂರ್ತಿ ಗಮನಕ್ಕೆ ತರಬೇಕು ಎಂದು ಸುತ್ತೋಲೆಯಲ್ಲಿ ಹೈಕೋರ್ಟ್ ಸೂಚಿಸಿದೆ.
ರಾಜ್ಯದ ಯಾವುದೇ ಜಿಲ್ಲೆಯಲ್ಲಿ ವಕೀಲರ ಸಂಘಗಳು ಅಥವಾ ಬೇರಾವುದೇ ಸಂಘಗಳು ಮುಷ್ಕರ, ಧರಣಿ, ನ್ಯಾಯಾಲಯಗಳ ಕಲಾಪ ಬಹಿಷ್ಕರಿಸುವುದು ಅಥವಾ ನ್ಯಾಯಾಲಯಕ್ಕೆ ಹಾಜರಾಗದಂತೆ ತಡೆಯುವುದನ್ನು ಮಾಡಿದರೆ ಆ ಕುರಿತಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಇಂತಹ ಗಂಭೀರ ಘಟನೆಗಳು ನಡೆದರೆ ಆಯಾ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ನ್ಯಾಯಾಲಯದ ಮುಖ್ಯಸ್ಥರು ತಕ್ಷಣವೇ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು ಎಂದು ಅದು ಹೇಳಿದೆ.
ಘಟನೆಯ ವಿವರ:
ಕಳೆದ ಶನಿವಾರ, ಮಾರ್ಚ್ 5, 2021ರಂದು ಕ್ರಿಮಿನಲ್ ಪ್ರಕರಣವೊಂದಕ್ಕೆ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಆಗಮಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಸಾಕ್ಷ್ಯವನ್ನು ದಾಖಲಿಸಿಲ್ಲ ಎಂಬ ಸಿಟ್ಟಿನಿಂದ ವಕೀಲರ ಮೇಲೆ ಹಲ್ಲೆ ನಡೆಸಿದ್ದರು.
ಈ ಘಟನೆಯ ನಂತರ ಕೆಲ ವಕೀಲರೂ ಆಕ್ರೋಶಗೊಂಡು ಹಲ್ಲೆ ನಡೆಸಿದವರ ಮೇಲೆ ಪ್ರತಿ ಹಲ್ಲೆ ನಡೆಸಿದ್ದರು. ಈ ಘಟನೆ ಸಂದರ್ಭದಲ್ಲಿ ನ್ಯಾಯಾಧೀಶರು ನಡೆದುಕೊಂಡ ರೀತಿಯಿಂದ ವಕೀಲರು ಅಸಮಾಧಾನಗೊಂಡಿದ್ದರು.
ಇದರಿಂದ ಸೋಮವಾರ ಉಡುಪಿ ಕೋರ್ಟ್ ಸಂಕೀರ್ಣದಲ್ಲಿ ಇರುವ ಎಲ್ಲ ನ್ಯಾಯಾಲಯದ ಕಲಾಪ ಬಹಿಷ್ಕಾರ ಮಾಡಿದ್ದರು. ನಂತರದ ಉಳಿದ ಎಲ್ಲ ದಿನಗಳಲ್ಲಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಕಲಾಪವನ್ನು ಬಹಿಷ್ಕರಿಸಿದ್ದರು.
ಶನಿವಾರ ನಡೆದ ಲೋಕ ಅದಾಲತ್‌ನಲ್ಲೂ ಕೆಲ ವಕೀಲರು ದೂರ ಉಳಿದು ಕಲಾಪ ಬಹಿಷ್ಕರಿಸಿದ್ದರು. ಆದರೂ, ನ್ಯಾಯಾಧೀಶರು ರಜೆಯಲ್ಲಿ ತೆರಳಲು ನಿರಾಕರಿಸಿದ್ದರು ಎನ್ನಲಾಗಿದೆ. ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪಿಯ ನಿರೀಕ್ಷಣಾ ಜಾಮೀನು ವಿಚಾರಣೆ ಸೋಮವಾರ ನಡೆಯಲಿದ್ದು, ಈ ತೀರ್ಪು ಬಗ್ಗೆ ಉಡುಪಿ ವಕೀಲರಲ್ಲಿ ಭಾರೀ ಕುತೂಹಲ ವ್ಯಕ್ತವಾಗಿದೆ.